ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿಸುತ್ತಿದ್ದ ಸೋಮಾರಿ ಪತಿಯಿಂದ ಮುಕ್ತಿ ಪಡೆದ ಪತ್ನಿ

ವಿಚ್ಛೇದನ ಡಿಕ್ರಿಗೆ ಹೈಕೋರ್ಟ್ ಅಸ್ತು
Last Updated 20 ಜುಲೈ 2022, 19:16 IST
ಅಕ್ಷರ ಗಾತ್ರ

ಬೆಂಗಳೂರು: 'ಪತ್ನಿಯ ಆದಾಯದಲ್ಲೇ ಬದುಕಿ, ಆಕೆಯನ್ನು ಭಾವನಾತ್ಮಕವಾಗಿಯೂ ಶೋಷಿಸುವ ಪತಿಯ ನಡತೆ ಮಾನಸಿಕ ಕ್ರೌರ್ಯಕ್ಕೆ ಸಮಾನ' ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ‘ಸೋಂಬೇರಿ ಗಂಡನಿಂದ ವಿಚ್ಛೇದನ ಬೇಕು' ಎಂದು ಕೋರಿದ್ದ ಪತ್ನಿಯ ಮನವಿಯನ್ನು ಪುರಸ್ಕರಿದೆ.

'ನನ್ನ ಗಂಡ ದುಡಿಮೆಯ ಉಮ್ಮೀದು ಹೊಂದಿಲ್ಲ. ಬದಲಿಗೆ ಗಂಡ ಹಾಗೂ ಅತ್ತೆಯ ಮನೆಯವರು ಆರ್ಥಿಕವಾಗಿ ಶೋಷಿಸುತ್ತಿದ್ದಾರೆ. ಗಂಡನಿಂದ ವಿಚ್ಛೇದನ ಕೊಡಿಸಿ' ಎಂಬ ಮಧ್ಯ ವಯಸ್ಸಿನ ಮಹಿಳೆಯ ಕೋರಿಕೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಮನ್ನಿಸಿದೆ.

ಈ ಸಂಬಂಧ ಭಾರತೀಯ ವಿಚ್ಛೇದನ ಕಾಯ್ದೆ-1860ರ ಕಲಂ 55(1)ರ ಅಡಿಯಲ್ಲಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಕಳೆದ ತಿಂಗಳ 22ರಂದು ತೀರ್ಪು ನೀಡಿದ್ದು, ಕಲಂ 10ರ ಅಡಿಯಲ್ಲಿ ವಿಚ್ಛೇದನ ಡಿಕ್ರಿ ಮಂಜೂರು ಮಾಡಿದೆ.

ಪ್ರಕರಣವೇನು?: ಅರ್ಜಿದಾರ ಮಹಿಳೆ 1999ರ ಮೇ 17ರಂದು ಮದುವೆಯಾಗಿದ್ದರು‌. 2001ರಲ್ಲಿ ದಂಪತಿಗೆ ಹೆಣ್ಣುಮಗು ಜನಿಸಿತು. ಸಾಲದ ಹೊರೆಯಲ್ಲಿದ್ದ ಪತಿ ಆರ್ಥಿಕವಾಗಿ ಸ್ವಾವಲಂಬಿಯಾಗದ ಕಾರಣ ಅರ್ಜಿದಾರ ಮಹಿಳೆ 2008ರಲ್ಲಿ ಅಬುಧಾಬಿಯಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಗಿಟ್ಟಿಸಿದರು. ಪತಿಯ ಸಾಲ ತೀರಿಸಲು, ಕೃಷಿ ಜಮೀನು ಖರೀದಿಸಲು ಮತ್ತು ಕಾಲಕಾಲಕ್ಕೆ ಅಗತ್ಯ ಹಣಕಾಸಿನ ನೆರವು ನೀಡುತ್ತಾ ಬಂದಿದ್ದರು.

ಪತಿಯೂ ಅಬುಧಾಬಿಯಲ್ಲೇ ಬಂದು ಜೊತೆಯಲ್ಲೇ ದುಡಿಯುವಂತಾಗಲಿ ಎಂದು ಆಶಿಸಿ 2008 ರಲ್ಲಿ ಅವರನ್ನೂ ಅಲ್ಲಿಗೆ ಕರೆಯಿಸಿಕೊಂಡು ಸಲೂನ್ ಆರಂಭಿಸಲು ಸಹಾಯ ಮಾಡಿದ್ದರು. ಆದರೆ, ಪತಿ ಸಲೂನ್ ನಿರ್ವಹಿಸಲು ಆಗದೆ ಒಂದೇ ವರ್ಷದಲ್ಲಿ ಭಾರತಕ್ಕೆ ಮರಳಿದ್ದರು. ಪತಿಯನ್ನು ಸುಧಾರಿಸದಿದ್ದಾಗ ಕಡೆಗೆ 2017ರಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದರು.

ದಾವೆಗೆ ಪತಿ ಸ್ಪಂದಿಸದ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಏಳನೇ ಹೆಚ್ಚುವರಿ ನ್ಯಾಯಾಲಯ 2018ರ ಜನವರಿ 4ರಂದು ವಿಚ್ಛೇದನ ಮನವಿ ನಿರಾಕರಿಸಿತು. ಪತ್ನಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ನ್ಯಾಯಪೀಠ, 'ಮಾನಸಿಕ ಕ್ರೌರ್ಯ ಎಂಬುದು ಅಪಾಯಕಾರಿಯಾಗಿ ಕಣ್ಣಿಗೆ ಕಾಣುವಂತಿರಲೇಬೇಕು ಎಂದೇನಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT