ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯ ಖರೀದಿಗೆ ಹಣ ನೀಡದ್ದಕ್ಕೆ ಪತ್ನಿಗೆ ಗಂಡನಿಂದ ಚಾಕು ಇರಿತ

Published 7 ಏಪ್ರಿಲ್ 2024, 14:46 IST
Last Updated 7 ಏಪ್ರಿಲ್ 2024, 14:46 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯ ಖರೀದಿಸಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಪತ್ನಿಗೆ ಚಾಕುವಿನಿಂದ ಇರಿದಿದ್ದ ಆರೋಪದಡಿ ಮೊಹಮ್ಮದ್ (34) ಎಂಬುವವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಯಚೂರಿನ ಮೊಹಮ್ಮದ್, ಕೂಲಿ ಕಾರ್ಮಿಕ. ಪತ್ನಿ ಮೈಮುದಾ (28) ಜೊತೆ ದೊಡ್ಡ ನಾಗಮಂಗಲದಲ್ಲಿ ವಾಸವಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಪತ್ನಿಯೊಂದಿಗೆ ಶನಿವಾರ ರಾತ್ರಿ ಜಗಳ ಮಾಡಿದ್ದ ಆರೋಪಿ, ಚಾಕುವಿನಿಂದ ಇರಿದಿದ್ದ’ ಎಂದು ಪೊಲೀಸರು ಹೇಳಿದರು.

‘ಮದ್ಯವ್ಯಸನಿಯಾಗಿದ್ದ ಆರೋಪಿ, ನಿತ್ಯವೂ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಮದ್ಯ ಖರೀದಿಸಲು ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಹಲವು ಬಾರಿ ಗಲಾಟೆ ನಡೆದಿತ್ತು.’

‘ಶನಿವಾರ ರಾತ್ರಿ ಮಕ್ಕಳು ಮನೆಯಲ್ಲಿ ಇರಲಿಲ್ಲ. ಮದ್ಯ ಖರೀದಿಸಲು ಹಣ ಕೊಡುವಂತೆ ಆರೋಪಿ ಕೇಳಿದ್ದ. ಪತ್ನಿ ಕೊಟ್ಟಿರಲಿಲ್ಲ. ಗಲಾಟೆ ಮಾಡಿದ್ದ ಆರೋಪಿ, ಪತ್ನಿಯ ಭುಜ ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದ. ಕೂಗಾಟ ಕೇಳಿ ರಕ್ಷಣೆಗೆ ಹೋಗಿದ್ದ ಸ್ಥಳೀಯರು, ಮೈಮುದಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮೈಮುದಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಸ್ಥಳೀಯರು ಹಾಗೂ ಮಕ್ಕಳು ನೀಡಿರುವ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT