ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ ಉತ್ತೇಜನಕ್ಕೆ ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ಸ್ಥಾಪನೆ: ಮುಖ್ಯಮಂತ್ರಿ

Last Updated 29 ನವೆಂಬರ್ 2018, 8:30 IST
ಅಕ್ಷರ ಗಾತ್ರ

ಬೆಂಗಳೂರು: 'ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ಸ್ಥಾಪಿಸಿ ರಾಜ್ಯದಲ್ಲಿ ಸಂಶೋಧನೆಗಳಿಗೆ ಉತ್ತೇಜನ ನೀಡಲಾಗುವುದು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ಅರಮನೆ ಆವರಣದಲ್ಲಿ ಆಯೋಜಿಸಿರುವ ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟಿಸಿ ಅವರು ಮಾತನಾಡಿದರು.

'ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ಈ ಸಂಸ್ಥೆಯ ಮೂಲಕ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್‌ಗಳನ್ನು ಕಾಯುವ ಕೆಲಸ ಮಾಡಲಾಗುವುದು. ನವೋದ್ಯಮಗಳಿಗೂ ಪ್ರೋತ್ಸಾಹ ನೀಡಲಾಗುವುದು' ಎಂದರು.

'ಆವಿಷ್ಕಾರದ ಚಿಂತನೆಗಳಿಗೆ ನವೋದ್ಯಮದ ರೂಪ ನೀಡಲು ರಾಜ್ಯ ಸರ್ಕಾರ ಈಗಾಗಲೇ ಆಯ್ದ ನವೋದ್ಯಮಿಗಳಿಗೆ ತಲಾ ₹೫೦ ಲಕ್ಷ ಸಹಾಯಧನ ನೀಡುತ್ತಿದೆ. ಇದಕ್ಕೆ ಈ ಬಾರಿ 22 ತಂಡಗಳು ಆಯ್ಕೆ ಆಗಿವೆ. ಅದರಲ್ಲಿ 10 ಹೈದರಾಬಾದ್ ಕರ್ನಾಟಕದ ನವೋದ್ಯಮಗಳಿವೆ' ಎಂದು ತಿಳಿಸಿದರು.

'ರಾಜ್ಯದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಜತೆಗೆ, ಸಿ-ಕ್ಯಾನ್ ಸಂಸ್ಥೆಯ ಸಹಯೋಗದಲ್ಲಿ ೫೦ ಆವಿಷ್ಕಾರ ಕೇಂದ್ರಗಳನ್ನು ಸ್ಥಾಪಿಸುತ್ತೇವೆ' ಎಂದು ಮುಂದಾಲೋಚನೆ ಹಂಚಿಕೊಂಡರು.

ಸಚಿವ ಕೆ.ಜೆ.ಜಾರ್ಜ್, 'ಒಂದು ಕಾಲಕ್ಕೆ ಕಾಲ್ ಸೆಂಟರ್ ಗಳ ನಗರ ಎಂಬ ಅನ್ವರ್ಥನಾಮ ಬೆಂಗಳೂರಿಗೆ ಇತ್ತು. ಯುವ ಜನರ ನವೀನ ಚಿಂತನೆ ಮತ್ತು ಸಂಶೋಧನಾತ್ಮಕ ದುಡಿಮೆಯಿಂದ ತಂತ್ರಜ್ಞಾನದ ನೆಲೆಯಲ್ಲಿ ಜಾಗತಿಕ ಗಮನ ಸೆಳೆಯುತ್ತಿದೆ' ಎಂದು ಶ್ಲಾಘಿಸಿದರು.

'ರಾಜ್ಯದ ಆಯ್ದ 33 ಕಾಲೇಜುಗಳಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಗಳನ್ನು ತೆರೆಯುತ್ತೇವೆ. ಅವುಗಳಿಂದ ವಿದ್ಯಾರ್ಥಿಗಳಲ್ಲಿ ಆವಿಷ್ಕಾರದ ಮಹತ್ವ, ಅಗತ್ಯತೆಯನ್ನು ಮನವರಿಕೆ ಮಾಡುತ್ತೇವೆ' ಎಂದರು.

'ಬ್ಲಾಕ್ ಚೈನ್, ರೊಬೊಟಿಕ್ಸ್, ಇಂಟಲಿಜೆನ್ಸ್ ಆ್ಯಪ್ಸ್, ಟೆಲಿಕಾಂ, ಸೈಬರ್ ಸೆಕ್ಯುರಿಟಿ, ಬಯೊಫಾರ್ಮ್, ಬಯೊ ಎನರ್ಜಿ, ಬಯೊ ಅಗ್ರಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವವರು ಮೊದಲು ಕರ್ನಾಟಕದತ್ತ ನೋಡುವಂತೆ ಮಾಡುವ ಇರಾದೆ ನಮಗಿದೆ. ಇದನ್ನು ೨೦೨೨ರ ಒಳಗೆ ಸಾಧಿಸಬೇಕು ಅಂದುಕೊಂಡಿದ್ದೇವೆ' ಎಂಬ ಕನಸು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT