ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಸಾವು: ಮೃತದೇಹದಲ್ಲಿ ಕೋವಿಡ್‌ ಸೋಂಕು ಪತ್ತೆ

ಚಿಕಿತ್ಸೆ ನೀಡಿದ ಕಲ್ಯಾಣನಗರ ನರ್ಸಿಂಗ್‌ ಹೋಂ ಸೀಲ್‌ಡೌನ್‌ * ಆರು ರೋಗಿಗಳ ಸ್ಥಳಾಂತರ
Last Updated 9 ಮೇ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಎಚ್‌ಬಿಆರ್‌ ಬಡಾವಣೆಯ ಮಹಿಳೆಯೊಬ್ಬರು (57 ವರ್ಷ) ಕಲ್ಯಾಣನಗರದ ‘ನಾರ್ತ್‌ ಬೆಂಗಳೂರು ನರ್ಸಿಂಗ್‌ ಹೋಂ’ನಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. ಗಂಟಲ ದ್ರವದ ಪರೀಕ್ಷೆ ಮಾಡಿಸಿದಾಗ ಆಕೆಗೆ ಕೋವಿಡ್‌ –19 ಸೋಂಕು ಇರುವುದು ದೃಢಪಟ್ಟಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಗರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್‌ ನೇತೃತ್ವದ ಅಧಿಕಾರಿಗಳ ತಂಡ ನರ್ಸಿಂಗ್‌ ಹೋಂ ಅನ್ನು ಮುಚ್ಚಿಸಿದ್ದು, ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಿದೆ.

ಉಸಿರಾಟದ ತೊಂದರೆ ಹಾಗೂ ಮೂತ್ರ ವಿಸರ್ಜನೆ ವೇಳೆ ಸಮಸ್ಯೆ ಅನುಭವಿಸುತ್ತಿದ್ದ ಮಹಿಳೆ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಭೇಟಿ ನೀಡಿದ್ದಳು. ಅಲ್ಲಿ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಅವರು ಚಿಕಿತ್ಸೆ ನಿರಾಕರಿಸಿದ್ದರು. ನಂತರ ಕ್ಲಿನಿಕ್‌ ಒಂದಕ್ಕೆ ತೆರಳಿದ್ದಳು. ಬಳಿಕ ನಾರ್ತ್‌ ಬೆಂಗಳೂರು ನರ್ಸಿಂಗ್‌ ಹೋಂಗೆ ಶುಕ್ರವಾರ ರಾತ್ರಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಲ್ಲಿನ ವೈದ್ಯರು ಆಕೆಗೆ ಚಿಕಿತ್ಸೆಯನ್ನೂ ನೀಡಿದ್ದರು ಎಂದು ಗೊತ್ತಾಗಿದೆ.

ಶನಿವಾರ ಬೆಳಿಗ್ಗೆ ದೇಹದ ಎಕ್ಸ್‌ ರೇ ವರದಿ ಪರಿಶೀಲಿಸುವಾಗ ಆಕೆಗೆ ಕೊರೊನಾ ಸೋಂಕು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ನರ್ಸಿಂಗ್‌ ಹೋಂನ ವೈದ್ಯರು ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಮಹಿಳೆ ಕೊನೆಯುಸಿರೆಳೆದಿದ್ದರು.

‘ಕೊರೊನಾ ಶಂಕಿತರ ಗಂಟಲ ದ್ರವ ಪರೀಕ್ಷೆ ಮಾಡಲು ನರ್ಸಿಂಗ್‌ ಹೋಮ್‌ನವರಿಗೆ ಅನುಮತಿ ಇಲ್ಲ. ಆದರೂ ಅವರು ಗಂಟಲ ದ್ರವವನ್ನು ಸಂಗ್ರಹಿಸಿದ್ದಾರೆ. ಅದನ್ನು ನಮಗೊಪ್ಪಿಸುವ ಬದಲು ಐಸಿಎಂಆರ್‌ನಿಂದ ಮಾನ್ಯತೆ ಪಡೆದ ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಪರೀಕ್ಷೆ ವೇಳೆ ಆಕೆಗೆ ಕೋವಿಡ್‌ –19 ಸೋಂಕು ದೃಢಪಟ್ಟಿದೆ’ ಎಂದು ಡಾ.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಳೇಬರವು ಸಿ.ವಿ.ರಾಮನ್‌ ಆಸ್ಪತ್ರೆಯಲ್ಲಿದೆ. ಕೊರೊನಾದಿಂದ ಸಾವಿಗೀಡಾದವರನ್ನು ಅಂತ್ಯಕ್ರಿಯೆ ನಡೆಸುವಾಗ ಪಾಲಿಸಬೇಕಾದ ಎಲ್ಲ ಮುನ್ನೆಚ್ಚರಿಕೆಗಳನ್ನೂ ಈಕೆಯ ಅಂತ್ಯಕ್ರಿಯೆ ವೇಳೆಯೂ ಪಾಲಿಸಬೇಕಾಗುತ್ತದೆ’ ಎಂದರು.

25ಕ್ಕೂ ಅಧಿಕ ಮಂದಿಗೆ ಮಹಿಳೆಯ ನೇರಸಂಪರ್ಕ

25ಕ್ಕೂ ಅಧಿಕ ಮಂದಿ ನೇರಸಂಪರ್ಕ ಮಹಿಳೆಯ ನೇರ ಸಂಪರ್ಕಕ್ಕೆ ಬಂದಿದ್ದಾರೆ. ಈ ನರ್ಸಿಂಗ್‌ ಹೋಂನಲ್ಲಿ ಇತರ ಆರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅವರೆಲ್ಲರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ಸೇರಿ 20ಕ್ಕೂ ಅಧಿಕ ಮಂದಿ ನರ್ಸಿಂಗ್‌ ಹೋಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಹಿಳೆಯ ಪೂರ್ವಾಪರಗಳು ಇನ್ನಷ್ಟೇ ತಿಳಿಯಬೇಕಾಗಿದೆ. ಪರೋಕ್ಷ ಸಂಪರ್ಕ ಹೊಂದಿದವರೆಷ್ಟು, ಆಸ್ಪತ್ರೆಗೆ ಬರುವ ಮುನ್ನ ಮಹಿಳೆ ಎಲ್ಲೆಲ್ಲ ಓಡಾಡಿದ್ದರು ಎಂಬ ಮಾಹಿತಿಯನ್ನು ಅಧಿಕಾರಿಗಳು ಇನ್ನಷ್ಟೇ ಕಲೆಹಾಕಬೇಕಿದೆ.

ತಾಯಿ ಮಗುವನ್ನು ದೂರ ಮಾಡಿದ ಕೊರೊನಾ ಸೋಂಕು

ಬೆಂಗಳೂರು: ನಗರವನ್ನು ಕಾಡುತ್ತಿರುವ ಕೊರೊನಾ ಸೋಂಕು ತಾಯಿ ಮಗುವನ್ನೂ ದೂರ ಮಾಡಿದೆ. ಅವಳಿ ಶಿಶುಗಳಿಗೆ ಜನ್ಮ ನೀಡಿದ ಮಹಿಳೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೆ, ಇದ್ಯಾವುದರ ಪರಿವೆಯೇ ಇಲ್ಲದ ಪುಟ್ಟ ಕಂದಮ್ಮಗಳು ತಾಯಿಯ ಎದೆಹಾಲಿಗಾಗಿ ಹಂಬಲಿಸುತ್ತಿವೆ.

ಪಾದರಾಯನಪುರದ 19 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ಶುಕ್ರವಾರ ರಾತ್ರಿ ದೃಢಪಟ್ಟತ್ತು. ಕೂಡಲೇ ಅವರನ್ನು ವಾಣಿ ವಿಲಾಸ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ (ಸಿಸೇರಿಯನ್) ಮೂಲಕ ಶನಿವಾರ ಅವಳಿ ಹೆಣ್ಣು ಶಿಶುಗಳನ್ನು ಹೊರತೆಗೆದಿದ್ದಾರೆ. ಈ ಶಿಶುಗಳು ಕ್ರಮವಾಗಿ 1.9 ಕೆ.ಜಿ. ಹಾಗೂ 1.7 ಕೆ.ಜಿ ತೂಕವಿದೆ. ತಾಯಿಗೆ ಕೊರೊನಾ ಸೋಂಕು ಇರುವುದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಶಿಶುಗಳನ್ನು ವಾಣಿವಿಲಾಸ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದೆ.

ಪಾದರಾಯನಪಪುರದ 35 ವರ್ಷದ ಇನ್ನೊಬ್ಬ ಮಹಿಳೆ (ರೋಗಿ 707) ಕೂಡ ಹೆಣ್ಣು ಮಗುವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನ್ಮನೀಡಿದ್ದು, ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಶಿಶುಗಳ ಗಂಟಲ ದ್ರವವನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

12 ಪ್ರಕರಣಗಳು ವರದಿ

ನಗರದಲ್ಲಿ ಹೊಸದಾಗಿ 12 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಹೊಂಗಸಂದ್ರದಲ್ಲಿ ಬಿಹಾರದ ಕಾರ್ಮಿಕನಿಂದ (ರೋಗಿ 419) ಐದು ಮಂದಿಗೆ ಸೋಂಕು ಹರಡಿದೆ. ಇದರಿಂದಾಗಿ ಹೊಂಗಸಂದ್ರದಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ತಲುಪಿದೆ.

ಪಾದರಾಯನಪುರದ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಮಕೂರಿನ 45 ವರ್ಷದ ವ್ಯಕ್ತಿಯಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಅವರು ಮೇ 5ರಂದು ತುಮಕೂರಿಗೆ ತೆರಳಿದ್ದರು. ಪಾದರಾಯನಪುರದಲ್ಲಿ ಒಟ್ಟು 45 ಪ್ರಕರಣಗಳು ವರದಿಯಾಗಿದ್ದು, ದೆಹಲಿ ಪ್ರಯಾಣದ ಇತಿಹಾಸ ಹೊಂದಿದ್ದ ಮೂವರಿಂದಲೇ ಸೋಂಕು ಹರಡಿದೆ.

‘ಪಾದರಾಯನಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರ್‍ಯಾಂಡಮ್ ಪರೀಕ್ಷೆ ವಿಸ್ತರಿಸಲಾಗುತ್ತದೆ. ಸೋಮವಾರ ಆರೋಗ್ಯ ಇಲಾಖೆಯ ಮೊಬೈಲ್ ವ್ಯಾನ್ ಮೂಲಕ ಸುಮಾರು 40 ಸಾವಿರ ಮಂದಿಯನ್ನು ಪರೀಕ್ಷೆ ಮಾಡಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT