ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಮಯದಲ್ಲಿ ಮಹಿಳೆಯರ ಸಂಕಷ್ಟ ನೀಗಲು ‘ಭರವಸೆ’

Last Updated 3 ಜೂನ್ 2021, 0:24 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾಲದ ಮಹಿಳೆಯರ ಸಂಕಟಗಳ ಪರಿಹಾರಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಅಖಿಲ ಭಾರತ ವಕೀಲರ ಸಂಘವು ‘ಭರವಸೆ‘ ಎಂಬ ಆಪ್ತ ಸಲಹಾ ಕೇಂದ್ರದ ಸಹಾಯವಾಣಿಗೆ ಬುಧವಾರ ಚಾಲನೆ ನೀಡಿದವು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿ, ‘ಮಹಿಳಾ ರಕ್ಷಣೆ ಮತ್ತು ಸುರಕ್ಷತೆಗೆ ಸಂವಿಧಾನದಲ್ಲಿ ಅನೇಕ ಕಾನೂನುಗಳಿವೆ. ಮಹಿಳೆಯರ ಜನಸಂಖ್ಯೆ ಶೇ 50ರಷ್ಟಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೋವಿಡ್‌ ಕಾಲದಲ್ಲಿ ಇನ್ನೂ ಹೆಚ್ಚಿನ ಕಷ್ಟ ಅನುಭವಿಸುತ್ತಿದ್ದಾರೆ. ಅಂಥವರಿಗೆ ವಕೀಲರು ಉಚಿತವಾಗಿ ಕಾನೂನು ನೆರವು ನೀಡಲು ಮುಂದಾಗಿರುವುದು ಸ್ವಾಗತಾರ್ಹ’ ಎಂದರು.

ಆಲ್‌ ಇಂಡಿಯಾ ಡೆಮಾಕ್ರಟಿಕ್ ವುಮನ್ಸ್‌ ಅಸೋಸಿಯೇಷನ್‌ನ ಗೌರಮ್ಮ, ‘ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸುವ ಉದ್ದೇಶದಿಂದ ರಾಜ್ಯದಲ್ಲಿ 193 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿತ್ತು. ಮಹಿಳೆಯರಿಗೆ ಕಾನೂನು ನೆರವು ಮತ್ತು ಆಪ್ತ ಸಮಾಲೋಚನೆ ಸೇವೆ ಇವುಗಳಲ್ಲಿ ದೊರೆಯುತ್ತಿತ್ತು. ಒಂದೊಂದು ಕೇಂದ್ರದಲ್ಲಿ 25ಕ್ಕೂ ಹೆಚ್ಚು ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿತ್ತು. ಆದರೆ, ಕಳೆದ ಬಾರಿಯ ಲಾಕ್‌ಡೌನ್‌ ಸಮಯದಲ್ಲಿ ಇವುಗಳಿಗೆ ಹಣ ಬಿಡುಗಡೆ ಮಾಡಲಿಲ್ಲ. ಈಗ ಬಹಳಷ್ಟು ಕೇಂದ್ರಗಳು ಸ್ಥಗಿತಗೊಂಡಿವೆ. ಸರ್ಕಾರೇತರ ಸಂಸ್ಥೆಗಳ ನೆರವಿನಿಂದ ಕೆಲವೇ ಕೇಂದ್ರಗಳು ನಡೆಯುತ್ತಿವೆ’ ಎಂದರು.

‘ಕಳೆದ ಲಾಕ್‌ಡೌನ್‌ ಸಮಯದಲ್ಲಿ ಕರ್ನಾಟಕದಲ್ಲಿಯೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ 115ರಷ್ಟು ಹೆಚ್ಚಾಗಿದ್ದವು. ಸರ್ಕಾರ ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದರು.

ಚಿಂತಕಿಯರಾದ ಕೆ. ನೀಲಾ, ಕೆ.ಎಸ್. ವಿಮಲಾ ಇತರರು ಇದ್ದರು.

ಆಪ್ತ ಸಲಹಾ ಕೇಂದ್ರದಲ್ಲಿ ಲಭ್ಯ ಇರುವವರು: ಗೌರಮ್ಮ– 98451 97079, ವಕೀಲರಾದ ಎಸ್. ಶಂಕರಪ್ಪ– 99456 45330, ಶ್ರೀನಿವಾಸ್‌– 94497 84667, ಶಿವಮ್ಮ– 94322 11383, ಈರಮ್ಮ– 72593 27689, ಪ್ರಕೃತಿ– 80509 05547.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT