ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆಯಲ್ಲಿ ಕುಸಿದು ಬಿದ್ದು ಮಹಿಳಾ ಟೈಲರ್ ಸಾವು

Last Updated 16 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬಾಗಲಗುಂಟೆಯ ಯೂರೊ ಕ್ಲೋತಿಂಗ್ ಗಾರ್ಮೆಂಟ್ಸ್ (ಇ.ಸಿ.ಜಿ) ಕಾರ್ಖಾನೆಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಉಮಾಶ್ರೀ (26) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದು, ಕಾರ್ಖಾನೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಟಿ. ದಾಸರಹಳ್ಳಿಯ ಕೆಂಪೇಗೌಡ ನಗರದ ನಿವಾಸಿಯಾಗಿದ್ದ ಉಮಾಶ್ರೀ ಸಾವಿನ ಬಗ್ಗೆ ಪತಿ ಬಾಲಯ್ಯ ದೂರು ನೀಡಿದ್ದಾರೆ. ಅಪರಾಧ ಸಂಚು (ಐಪಿಸಿ 34) ಹಾಗೂ ನಿರ್ಲಕ್ಷ್ಯದಿಂದ ಸಾವನ್ನುಂಟು ಮಾಡಿದ (ಐಪಿಸಿ 306) ಆರೋಪದಡಿ ಕಾರ್ಖಾನೆಯ ವ್ಯವಸ್ಥಾಪಕ ಹಾಗೂ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಉಮಾಶ್ರೀ ಅವರು ಮೂರು ತಿಂಗಳ ಹಿಂದಷ್ಟೇ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ, ರಜೆ ನೀಡುವಂತೆ ಕೋರಿದ್ದರು. ಅದಕ್ಕೆ ಒಪ್ಪದ ವ್ಯವಸ್ಥಾಪಕ ಹಾಗೂ ಇತರರು, ಕಾರ್ಖಾನೆಗೆ ಬಾರದಿದ್ದರೆ ಕೆಲಸದಿಂದ ಕಿತ್ತು ಹಾಕುವುದಾಗಿ ಹೇಳಿದ್ದರು. ಅದರಿಂದ ಹೆದರಿದ ಉಮಾಶ್ರೀ, ಆರೋಗ್ಯ ಸರಿ ಇಲ್ಲದಿದ್ದರೂ ಕಾರ್ಖಾನೆಗೆ ಕೆಲಸಕ್ಕೆ ಹೋಗಿದ್ದರು.’

‘ಅ. 8ರಂದು ಬೆಳಿಗ್ಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಉಮಾಶ್ರೀ ಕುಸಿದು ಬಿದ್ದು, ಪ್ರಜ್ಞೆ ತಪ್ಪಿದ್ದರು. ಅವರನ್ನು ಪೀಣ್ಯದ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದೂ ಪೊಲೀಸರು ತಿಳಿಸಿದರು.

‘ಪತ್ನಿಗೆ ಹುಷಾರಿಲ್ಲದಿದ್ದರೂ ಒತ್ತಾಯದಿಂದ ಕೆಲಸಕ್ಕೆ ಕರೆಸಿಕೊಳ್ಳಲಾಗಿತ್ತು. ಕಾರ್ಖಾನೆಯವರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಪತಿ ಬಾಲಯ್ಯ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT