ರಕ್ಷಣಾ ‘ಬೇಲಿ’ಯಿಂದ ಹೊರಬಂದ 11 ಯೋಜನೆ: ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮರುಜೀವ

7

ರಕ್ಷಣಾ ‘ಬೇಲಿ’ಯಿಂದ ಹೊರಬಂದ 11 ಯೋಜನೆ: ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮರುಜೀವ

Published:
Updated:

ಬೆಂಗಳೂರು: ರಕ್ಷಣಾ ಇಲಾಖೆಯ ತಕರಾರಿನಿಂದಾಗಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ 10 ಯೋಜನೆಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಎಲ್ಲ ಕಾಮಗಾರಿಗಳಿಗೆ ಇದರಿಂದ ವೇಗ ಪ್ರಾಪ್ತಿಯಾಗಿದೆ.

‘ರಕ್ಷಣಾ ಇಲಾಖೆ ಮತ್ತು ನಮ್ಮ ನಡುವೆ ಕೊಡುಕೊಳ್ಳುವ ಒಪ್ಪಂದ ಆಗಿದ್ದರಿಂದ 10 ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲು ಈಗಾಗಲೇ ತಾತ್ವಿಕ ಒಪ್ಪಿಗೆಯೂ ಸಿಕ್ಕಿದೆ. ತಕ್ಷಣದಿಂದಲೇ ಈ ಕಾಮಗಾರಿಗಳನ್ನು ಆರಂಭಿಸುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ ಒಟ್ಟು 11 ಕಡೆ (ಜೆ.ಸಿ.ನಗರದ ಶಾಲೆಯ ಜಾಗ ಸೇರಿ) ರಕ್ಷಣಾ ಇಲಾಖೆ ಜಾಗ ಬಳಸಿಕೊಳ್ಳಲಿರುವ ಬಿಬಿಎಂಪಿ  ಅದಕ್ಕೆ ಬದಲಿಯಾಗಿ ಆನೇಕಲ್‌ ತಾಲ್ಲೂಕಿನ ತಮ್ಮನಾಯಕನ ಹಳ್ಳಿಯಲ್ಲಿ 352 ಎಕರೆ 34 ಗುಂಟೆ ಜಾಗ ಬಿಟ್ಟುಕೊಡಲು ಒಪ್ಪಿತ್ತು. ಆ ಜಾಗದಲ್ಲಿ ರಸ್ತೆ ಹಾದುಹೋಗುತ್ತದೆ, ಗಣಿಗಾರಿಕೆ ನಡೆಯುತ್ತದೆ ಎಂಬ ಕಾರಣಕ್ಕೆ ಅದನ್ನು ಪಡೆಯಲು ಹಿಂದೇಟು ಹಾಕಿದ್ದರು. ಅಲ್ಲದೇ ಜಾಗದ ಗಡಿ ಗುರುತು ಮಾಡಿಸಿಲ್ಲ ಎಂದೂ ತಗಾದೆ ತೆಗೆದಿದ್ದರು.

ಹಲಸೂರಿನಲ್ಲಿ ಕೆ–ಪಾರ್ಕ್‌ ಬಳಿ ಹಾಗೂ ಕೆನ್ಸಿಂಗ್ಟನ್‌ ರಸ್ತೆ ಬಳಿ ಬಿಬಿಎಂ‍ಪಿಗೆ ಸೇರಿದ ಜಾಗವನ್ನು ರಕ್ಷಣಾ ಇಲಾಖೆ ಬಳಸುತ್ತಿದೆ. ಇಲ್ಲಿ ಕೇವಲ 2 ಎಕರೆ ಜಾಗ ಮಾತ್ರ ತಮ್ಮ ವಶದಲ್ಲಿದೆ ಎಂದು ಇಲಾಖೆ ಅಧಿಕಾರಿಗಳು ವಾದಿಸುತ್ತಿದ್ದರು. ಆದರೆ, ಇತ್ತೀಚೆಗೆ ಸರ್ವೆ ನಡೆಸಿದಾಗ ಕೆ–ಪಾರ್ಕ್‌ ಬಳಿ 1 ಎಕರೆ ಹಾಗೂ ಕೆನ್ಸಿಂಗ್ಟನ್‌ ರಸ್ತೆ ಬಳಿ 1 ಎಕರೆ 8 ಗುಂಟೆ ಜಾಗ ಸೇನೆ ವಶದಲ್ಲಿರುವುದು ಬೆಳಕಿಗೆ ಬಂದಿತ್ತು. ಈ ಜಾಗಗಳ ಒಟ್ಟು ಮೌಲ್ಯ ₹ 135. 39 ಕೋಟಿ ಆಗಲಿದೆ.

‘ಒಂದು ವೇಳೆ ತಮ್ಮನಾಯಕನಹಳ್ಳಿಯ ಜಾಗವು ಅವರಿಗೆ ಇಷ್ಟವಾಗದಿದ್ದರೆ, ನಾವು ಹಲಸೂರು ಬಳಿಯ ಜಾಗವನ್ನು ಬಿಟ್ಟು ಕೊಡಲು ಸಿದ್ಧರಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.

‘ಹಲಸೂರು ಬಳಿಯ ಜಾಗವನ್ನು ಸೇನೆಗೆ ಬಿಟ್ಟುಕೊಟ್ಟರೂ, ಬಿಬಿಎಂಪಿ ಗುರುತಿಸಿರುವ 10 ಯೋಜನೆಗಳ ಪೈಕಿ ಈಜಿಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆವರೆಗೆ ಹೊಸ ರಸ್ತೆ ನಿರ್ಮಿಸುವ ಒಂದು ಯೋಜನೆಯನ್ನು ಹೊರತುಪಡಿಸಿ ಇನ್ನುಳಿದ 9 ಯೋಜನೆಗಳನ್ನು ಪೂರ್ಣಗೊಳಿಸಬಹುದು. ಈ 9 ಯೋಜನೆಗಳಿಗೂ ಅನುದಾನ ಕಾಯ್ದಿರಿಸಲಾಗಿದೆ. ಇವುಗಳನ್ನು ತಕ್ಷಣವೇ ಆರಂಭಿಸಲು ಯಾವುದೇ ಅಡ್ಡಿ ಇಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬೈಯಪ್ಪನಹಳ್ಳಿಯ ಹಾಗೂ ಬಾಣಸವಾಡಿಯಲ್ಲಿ ಮಾರುತಿ ಸೇವಾ ನಗರದ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಬಿಬಿಎಂಪಿ ಈಗಾಗಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ.
**

ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ರಕ್ಷಣಾ ಇಲಾಖೆ ಜಾಗಗಳ ವಿವರ

1. ಈಜಿಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯ ರಸ್ತೆವರೆಗೆ ಹೊಸ ರಸ್ತೆ ನಿರ್ಮಾಣ
5 ಎಕರೆ 14 ಗುಂಟೆ
ಮೌಲ್ಯ ₹ 133.04 ಕೋಟಿ
ಅಂದಾಜು ವೆಚ್ಚ ₹ 22.95 ಕೋಟಿ

ಈಜಿಪುರ–ಶ್ರೀನಿವಾಗಿಲು ಒಳ ವರ್ತುಲ ರಸ್ತೆ ಜಂಕ್ಷನ್‌ ನಡುವೆ 600 ಮೀಟರ್‌ ಕಚ್ಚಾ ರಸ್ತೆ ಇದೆ. ಇದು ಕೆಲವೆಡೆ 12 ಮೀ ಹಾಗೂ 20 ಮೀ ಅಗಲವಿದೆ. ಇಲ್ಲಿ 2.65 ಕಿ.ಮೀ ಉದ್ದಕ್ಕೆ ರಸ್ತೆ ವಿಸ್ತರಣೆ ನಡೆಯಬೇಕಿದೆ. ಇದಕ್ಕಾಗಿ 1.85 ಕಿ.ಮೀ ಉದ್ದದಷ್ಟು ರಸ್ತೆ ವಿಸ್ತರಣೆಗೆ ರಕ್ಷಣಾ ಇಲಾಖೆ ಜಾಗ ಬೇಕು. 

* ಪ್ರಸ್ತುತ ಶ್ರೀನಿವಾಗಿಲು ಜಂಕ್ಷನ್‌ ಸಿಗ್ನಲ್‌, ಸೋನಿ ವರ್ಲ್ಡ್‌ ಸಿಗ್ನಲ್‌, ಅಗರ ಲೇಕ್‌ ಸಿಗ್ನಲ್‌ ಬಳಿ ಸದಾ ಸಂಚಾರ ದಟ್ಟಣೆ ಉಂಟಾಗುತ್ತಿರುತ್ತದೆ. ಹೊಸ ರಸ್ತೆಯಿಂದ ಈ ಸಮಸ್ಯೆ ನೀಗಲಿದೆ. ಒಳವರ್ತುಲ ರಸ್ತೆಯಿಂದ ಸರ್ಜಾಪುರ ರಸ್ತೆಗೆ ಸಿಗ್ನಲ್‌ ಮುಕ್ತ ಸಂಪರ್ಕ ಸಿಗಲಿದೆ

–––––

2. ಬ್ಯಾಟರಾಯನಪುರ ವಾರ್ಡ್‌ನ ಸಂಜೀವಿನಿನಗರದಿಂದ ರಾಷ್ಟ್ರೀಯ ಹೆದ್ದಾರಿ–7 ಅನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ
38 ಗುಂಟೆ
₹ 9.55 ಕೋಟಿ
ಅಂದಾಜು ವೆಚ್ಚ ₹ 42 ಲಕ್ಷ

9 ಮೀ ಅಗಲದ ಈ ರಸ್ತೆಯನ್ನು ಸ್ಥಳೀಯರು ಹತ್ತಾರು ವರ್ಷಗಳಿಂದ ಬಳಸುತ್ತಿದ್ದಾರೆ. 430 ಮೀ ಉದ್ದ ರಸ್ತೆಗೆ ಬೇಕಾದ ಜಾಗ ರಕ್ಷಣಾ ಇಲಾಖೆಗೆ ಸೇರಿದ್ದು. ಹಾಗಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆ ಇಲಾಖೆಯವರು ತಗಾದೆ ತೆಗೆಯುತ್ತಿದ್ದರು.

* ಸಂಜೀವಿನಿನಗರಕ್ಕೆ ಹೋಗುವ ವಾಹನಗಳು ಪ್ರಸ್ತುತ ಕೊಡಿಗೆಹಳ್ಳಿ ಜಂಕ್ಷನ್‌ ಮೂಲಕ ಎಡ ತಿರುವು ಪಡೆದು ತೆರಳುತ್ತಿವೆ. ಈ ರಸ್ತೆ ಅಭಿವೃದ್ಧಿಯಿಂದ ಸಂಜೀವಿನಿ ನಗರಕ್ಕೆ ನೇರ ಸಂಪರ್ಕ ಸಿಗಲಿದೆ. ಕೊಡಿಗೆಹಳ್ಳಿ ಜಂಕ್ಷನ್‌ನಲ್ಲಿ ದಟ್ಟಣೆ ನಿವಾರಣೆ ಆಗಲಿದೆ.

–––––

3. ಹೆಬ್ಬಾಳ ಸರೋವರ ಬಡಾವಣೆಯಿಂದ ಆ್ಯಮ್ಕೊ ಬಡಾವಣೆ ಮೂಲಕ ರಾಷ್ಟ್ರೀಯ ಹೆದ್ದಾರಿ 7 ಸಂಪರ್ಕಿಸುವ ರಸ್ತೆ
2 ಗುಂಟೆ
₹ 4.73 ಕೋಟಿ
ಅಂದಾಜು ವೆಚ್ಚ ₹ 64 ಲಕ್ಷ

9 ಮೀ ಅಗಲದ ರಸ್ತೆ ಇಲ್ಲಿದ್ದು, ದಶಕಗಳಿಂದ ಸ್ಥಳೀಯರು  ಬಳಸುತ್ತಿದ್ದಾರೆ. ಸುಮಾರು 640 ಮೀ ಉದ್ದದ ಈ ರಸ್ತೆಗೆ ಮಳೆ ನೀರು ಹರಿಯುವ ಚರಂಡಿ ನಿರ್ಮಿಸುವುದಕ್ಕೆ ರಕ್ಷಣಾ ಇಲಾಖೆ ಜಾಗ ಬೇಕು.

* ಯಶವಂತಪುರ– ಹೆಬ್ಬಾಳ ನಡುವೆ ಹೆಬ್ಬಾಳ ಕೆರೆ ಪಕ್ಕದಲ್ಲಿ ( ಬಿಗ್‌ಬಜಾರ್‌ ಬಳಿ) ಆಮ್ಕೊ ಬಡಾವಣೆಗೆ ಬಿಡಿಎ ರಸ್ತೆ ನಿರ್ಮಿಸಬೇಕಿದೆ. ಆ್ಯಮ್ಕೊ ಬಡಾವಣೆಯ ಹೊಸ ರಸ್ತೆಯಿಂದ ಆ ರಸ್ತೆಗೆ ಸಂಪರ್ಕ ಕಲ್ಪಿಸಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ.
 ––––––

4. ಜೆ.ಸಿ.ನಗರ ಸರ್ಕಾರಿ ಶಾಲೆ ಇರುವ ಜಾಗ
2 ಎಕರೆ 34 ಗುಂಟೆ
₹ 39.68 ಕೋಟಿ

ಇಲ್ಲಿ ಒಂದು ಸರ್ಕಾರಿ ಪದವಿಪೂರ್ವ ಕಾಲೇಜು, ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ ಹಾಗೂ ಒಂದು ತಮಿಳು ಪ್ರಾಥಮಿಕ ಶಾಲೆಗಳಿವೆ. ಇದು ತಮ್ಮ ಜಾಗ ಎಂಬುದು ರಕ್ಷಣಾ ಇಲಾಖೆಯ ವಾದ. ಈ ಶಾಲೆಗಳಿರುವ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಈ ಹಿಂದಿನ ರಕ್ಷಣಾ ಸಚಿವ ಮನೋಹರ ಪರಿಕ್ಕರ್‌ ತಾತ್ವಿಕ ಒಪ್ಪಿಗೆ ನೀಡಿದ್ದರು.

–––––

5. ಹೊಸೂರು –ಲಷ್ಕರ್‌ ರಸ್ತೆ ಅಭಿವೃದ್ಧಿ
2 ಎಕರೆ 26 ಗುಂಟೆ
₹103 ಕೋಟಿ
₹ 10. 6 ಕೋಟಿ

ಹಳೆಯ ಸೇನಾ ತರಬೇತಿ ಶಾಲೆ ಬಳಿಯಿಂದ ದೊಡ್ಡಮೋರಿವರೆಗೆ ಹಲವು ಕಡೆ ರಸ್ತೆ ವಿಸ್ತರಣೆ ಮಾಡಬೇಕಿದೆ. ಇದಕ್ಕೆ ಕೆಲವು ಕಡೆ 3.5 ಮೀ ಅಗಲ ಇನ್ನು ಕೆಲವೆಡೆ 7 ಮೀ ಅಗಲದಷ್ಟು ಜಾಗದ ಅಗತ್ಯವಿದೆ. ಶೂಲೆ ವೃತ್ತದ ಬಳಿ ದ್ವಿಪಥ ರಸ್ತೆ ಮಾತ್ರ ಇದೆ. ಇಲ್ಲಿ ಸದಾ ಸಂಚಾರ ದಟ್ಟಣೆ ಸಮಸ್ಯೆ ಇರುತ್ತದೆ.

* ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಇಲ್ಲಿ ಮೂರು ಪಥದ ರಸ್ತೆ ನಿರ್ಮಾಣ ಸಾಧ್ಯವಾಗಲಿದೆ.

––––––

6. ಹಾಸ್ಮ್ಯಾಟ್‌ ಆಸ್ಪತ್ರೆಯಿಂದ ವಿವೇಕನಗರದ ಒಂದನೇ ಮುಖ್ಯರಸ್ತೆವರೆಗೆ ಅಗರ ಕೆಳಗಿನ ರಸ್ತೆಯ ಅಭಿವೃದ್ಧಿ
17 ಗುಂಟೆ
₹ 7.95 ಕೋಟಿ
ಅಂದಾಜು ವೆಚ್ಚ ₹ 49 ಲಕ್ಷ

ಅಗರ ಕೆಳಗಿನ ರಸ್ತೆ ಈಗಾಗಲೇ ಅಭಿವೃದ್ಧಿ ಆಗಿದೆ. ರಸ್ತೆ ಆರಂಭವಾಗುವಲ್ಲಿ 10.5 ಮೀ ಅಗಲ ಇದೆ. ಆದರೆ ಆರ್ಮಿ ಪಬ್ಲಿಕ್‌ ಸ್ಕೂಲ್‌ ಗೇಟ್‌ ಬಳಿ 485 ಮೀ ಉದ್ದದ ರಸ್ತೆ  7.5 ಮೀ ಅಗಲ ಇದೆ.  ಇಲ್ಲಿ ರಸ್ತೆಗೆ ಇನ್ನೊಂದು ಪಥವನ್ನು ಸೇರ್ಪಡೆಗೊಳಿಸಲು ರಕ್ಷಣಾ ಇಲಾಖೆಗೆ ಸೇರಿದ 3.5 ಮೀಟರ್‌ಗಳಷ್ಟು ಅಗಲದ ಜಾಗ ಅಗತ್ಯವಿದೆ. 

* ಇಲ್ಲಿನ ರಸ್ತೆ ವಿಸ್ತರಣೆಯಾದರೆ ದಟ್ಟಣೆ ಕಡಿಮೆಯಾಗಲಿದೆ.

–––––

7.  ಬುಚರಿ ಬಳಿ ಅಗರ ಕೆಳಗಿನ ರಸ್ತೆ ಅಭಿವೃದ್ಧಿ 
3 ಗುಂಟೆ 
₹ 1.55 ಕೋಟಿ
ಅಂದಾಜು ವೆಚ್ಚ ₹ 60 ಲಕ್ಷ

ಕೆಳಗಿನ ಅಗರ ರಸ್ತೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ ಕಟ್ಟಡ ಇರುವ ಜಾಗವಿದೆ. ಈ ಜಾಗ ತನಗೆ ಸೇರಿದ್ದು ಎಂಬುದು ರಕ್ಷಣಾ ಇಲಾಖೆಯ ವಾದ. ಇಲ್ಲಿ ಜಾಗ ಹಸ್ತಾಂತರವಾದರೆ ರಸ್ತೆ ಅಭಿವೃದ್ಧಿಗೆ ಅನುಕೂಲವಾಗಲಿದೆ

* ಈ ರಸ್ತೆಯಲ್ಲಿ ಈಜಿಪುರ ಕಡೆಗೆ ಮುಕ್ತ ಎಡತಿರುವು ಲಭಿಸುತ್ತದೆ. ಇದರಿಂದ ಈಜಿಪುರ ಜಂಕ್ಷನ್‌ನಲ್ಲಿ ವಾಹನ ಸಂಚಾರ ಸುಗಮವಾಗಲಿದೆ.

––––––

 8. ಕಾವಲ್‌ಬೈರಸಂದ್ರ ಮುಖ್ಯರಸ್ತೆಯಿಂದ ಮೋದಿ ಗಾರ್ಡನ್‌ವರೆಗೆ ಪರ್ಯಾಯ ರಸ್ತೆ ನಿರ್ಮಾಣ
1 ಎಕರೆ 6ಗುಂಟೆ
₹ 15.36 ಕೋಟಿ
ಅಂದಾಜು ವೆಚ್ಚ ₹ 51 ಲಕ್ಷ

ಆರ್‌.ಟಿ.ನಗರ ಕಡೆಯಿಂದ ಕಾವಲ್‌ಭೈರಸಂದ್ರ ಕಡೆಗೆ ಹೋಗಲು ಇದ್ದ ರಸ್ತೆಯನ್ನು 1998ರಿಂದ ರಕ್ಷಣಾ ಇಲಾಖೆಯವರು ಮುಚ್ಚಿದರು. ಈ ರಸ್ತೆಗೆ  ಪರ್ಯಾಯ ರಸ್ತೆ ಅಭಿವೃದ್ಧಿಪಡಿಸುವಂತೆ ನ್ಯಾಯಾಲಯ ಸಲಹೆ ನೀಡಿತ್ತು. 511 ಮೀ ಉದ್ದದ ಹಾಗೂ 4.5 ಮೀ ಅಗಲದ ರಸ್ತೆ ಅಭಿವೃದ್ಧಿಪಡಿಸಲು ರಕ್ಷಣಾ ಇಲಾಖೆ ಜಾಗದ ಅಗತ್ಯವಿದೆ.

* ಪರ್ಯಾಯ ರಸ್ತೆಯಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ

–––––––

9. ಈಜಿಪುರದಲ್ಲಿ ಎಲಿವೇಟೆಡ್‌ ಕಾರಿಡಾರ್‌ ಅಭಿವೃದ್ಧಿ; 5 ಗುಂಟೆ
 ₹ 4.88 ಕೋಟಿ 
ಅಂದಾಜು ವೆಚ್ಚ ₹ 204 ಕೋಟಿ

ಕೇಂದ್ರೀಯ ಸದನದಿಂದ ಶ್ರೀನಿವಾಗಿಲು ಜಂಕ್ಷನ್‌ವರೆಗಿನ ಈ ಕಾರಿಡಾರ್‌ನ ರ‍್ಯಾಂಪ್‌ ಪಕ್ಕದಲ್ಲಿ ರಸ್ತೆ ನಿರ್ಮಿಸಲು ಸೋನಿ ಸಿಗ್ನಲ್‌ ಜಂಕ್ಷನ್‌ ಬಳಿ  230 ಮೀ ಉದ್ದದ ಮಳೆನೀರು ಚರಂಡಿ ನಿರ್ಮಿಸಲು ರಕ್ಷಣಾ ಇಲಾಖೆಯ 4 ಅಡಿಗಳಷ್ಟು ಅಗಲದ ಜಾಗ ಬೇಕು.

* ಎಲಿವೇಟೆಡ್‌ ಕಾರಿಡಾರ್‌ನ ರ‍್ಯಾಂಪ್‌ ಅನ್ನು ಸಮರ್ಪಕವಾಗಿ ನಿರ್ಮಿಸಲು ಸಾಧ್ಯವಾಗಲಿದೆ. ಸಂಚಾರ ದಟ್ಟಣೆ ನಿವಾರಣೆಗೆ ಅನುಕೂಲವಾಗಲಿದೆ. ವಾಹನಗಳು ಶ್ರೀನಿವಾಗಿಲು ರಸ್ತೆ ಜಂಕ್ಷನ್‌ ಮೂಲಕ ಹಾದು ಹೋಗಬೇಕಿಲ್ಲ. ಹೊಸ ರಸ್ತೆ ರಸ್ತೆ ಅದಕ್ಕೆ ಪೂರಕವಾಗಿ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ.

––––––––

 ರಕ್ಷಣಾ ಇಲಾಖೆ ಗುತ್ತಿಗೆ ಆಧಾರದಲ್ಲಿ ಬಿಟ್ಟುಕೊಡಬೇಕಾದ ಜಾಗ

10. ಬಾಣಸವಾಡಿಯ ರೈಲ್ವೆ ಮೇಲ್ಸೇತುವೆಗೆ ಇನ್ನೊಂದು ಲೂಪ್‌ ಸೇರ್ಪಡೆ; 4 ಗುಂಟೆ

ಈ ರೈಲ್ವೆ ಮೇಲ್ಸೇತುವೆ ಬಳಿ ಮುಕುಂದ ಚಿತ್ರಮಂದಿರದ ಬಳಿ 50 ಮೀ ಉದ್ದದ ಇನ್ನೊಂದು ಲೂಪ್‌ ಸೇರ್ಪಡೆಗೊಳಿಸುವ ಅಗತ್ಯವಿದೆ. ಇಲ್ಲಿ ಈಗಾಗಲೇ 9 ಮೀ ಅಗಲದ ಮೇಲ್ಸೇತುವೆ ಇದೆ.

* ಈ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದೆ.

–––––––

 11 ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆಗೆ ಜಾಗ

ಇಲ್ಲಿ ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಮೇಲ್ಸೇತುವೆ ನಿರ್ಮಾಣದ ಕೆಲಸವನ್ನು ರೈಲ್ವೆ ಇಲಾಖೆ ನಡೆಸಿದೆ. ಆದರೆ, ಈ ರಸ್ತೆಯು ರಕ್ಷಣಾ ಇಲಾಖೆಗೆ ಸೇರಿದ ಜಾಗದಲ್ಲಿದೆ. ಸಾರ್ವಜನಿಕರು ಈ ರಸ್ತೆಯನ್ನು ಅನೇಕ ದಶಕಗಳಿಂದ ಬಳಸುತ್ತಿದ್ದಾರೆ. ಆದರೆ, ತಮಗೆ ಸೇರಿದ ಜಾಗದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಸಲು ರಕ್ಷಣಾ ಇಲಾಖೆ ಅನುಮತಿ ನೀಡಿರಲಿಲ್ಲ.

* ಸೇನೆಯ ಅಧಿಕಾರಿಗಳು ಅನುಮತಿ ನೀಡಿದರೆ ಈ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಲೆವೆಲ್‌ ಕ್ರಾಸಿಂಗ್‌ ಬಳಿ ಜನ ಕಾದು ನಿಲ್ಲುವುದು ತಪ್ಪಲಿದೆ. ಇಲ್ಲಿ ಸಂಚಾರ ದಟ್ಟಣೆಯೂ ನಿವಾರಣೆ ಆಗಲಿದೆ.
***

ಅಂಕಿ ಅಂಶ
14 ಎಕರೆ 1 ಗುಂಟೆ
ರಕ್ಷಣಾ ಇಲಾಖೆ ಬಿಬಿಎಂಪಿಗೆ ಶಾಶ್ವತವಾಗಿ ಬಿಟ್ಟುಕೊಡಬೇಕಾದ ಒಟ್ಟು ಜಾಗ

 
₹ 320.66 ಕೋಟಿ
ಈ ಜಾಗದ ಒಟ್ಟು ಮೌಲ್ಯ

 
16 ಎಕರೆ 21 ಗುಂಟೆ
ಗುತ್ತಿಗೆ ಆಧಾರದಲ್ಲಿ ಬಿಟ್ಟುಕೊಡಬೇಕಾದ ಒಟ್ಟು ಜಾಗ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !