ಬೆಂಗಳೂರು: ಕರಡಿಗಳ ಚೆಲ್ಲಾಟ, ಹುಲಿಯ ಗಂಭೀರ ನಡಿಗೆ, ನವಿಲಿನ ನೃತ್ಯ, ಗಜಪಡೆ ನೀರು ಕುಡಿಯುತ್ತಿರುವ ಮನಮೋಹಕ ಛಾಯಾಚಿತ್ರಗಳು ನಗರದ ಚಿತ್ರಕಲಾ ಪರಿಷತ್‌ನಲ್ಲಿ ಅನಾವರಣಗೊಂಡಿವೆ.
ಯೂತ್ ಫೋಟೊಗ್ರಾಫಿಕ್ ಸೊಸೈಟಿಯಿಂದ (ವೈಪಿಎಸ್) ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ವೈಪಿಎಸ್ ಸದಸ್ಯರ ಎರಡು ದಿನಗಳ ‘ಸ್ಕ್ವೇರ್ ಇಟ್ ಅಪ್‘ ಛಾಯಾಚಿತ್ರಗಳ ಪ್ರದರ್ಶನಕ್ಕೆ ಶನಿವಾರ ಚಾಲನೆ ಸಿಕ್ಕಿತು.
ಈ ಪ್ರದರ್ಶನದಲ್ಲಿ ವಿವಿಧ ಪ್ರಭೇದಗಳು, ವಿವಿಧ ವರ್ಗಗಳ ವನ್ಯಜೀವಿಗಳು, ಪಕ್ಷಿಗಳ ಅದ್ಭುತ ಛಾಯಾಚಿತ್ರಗಳಿವೆ. ಜೊತೆಗೆ, ವಿಶ್ವದ ವಿವಿಧ ಸಂಸ್ಕೃತಿಗಳನ್ನು ಅನಾವರಣಗೊಳಿಸುವ ಛಾಯಾಚಿತ್ರಗಳು ನೋಡುಗರ ಗಮನ ಸೆಳೆಯುತ್ತಿವೆ.
ವಿಶ್ವದ ವಿವಿಧ ಸ್ಥಳಗಳಲ್ಲಿ ತೆಗೆದಿರುವ ಛಾಯಾಚಿತ್ರಗಳನ್ನು ಮೊದಲ ಬಾರಿಗೆ ಪ್ಲಾಸ್ಟಿಕ್ ರಹಿತ ಕ್ಯಾನ್ವಾಸ್‌ಗಳನ್ನು ಬಳಸಿಕೊಂಡು ಮುದ್ರಿಸಿ, ಪ್ರದರ್ಶನಕ್ಕೆ ಇಡಲಾಗಿದೆ.
ಡಾ.ಅಜೀತ್ ಕೆ. ಹುಯಿಲಗೋಳ ಅವರು ವಿಶ್ವದ ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೂ ತೆಗೆದಿರುವ ಛಾಯಾಚಿತ್ರಗಳನ್ನು ‘ಧ್ರುವದಿಂದ–ಧ್ರುವಕ್ಕೆ’ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಿದ್ದಾರೆ.
‘ಆಗಸ್ಟ್ 11ರಂದು ಆಹಾರ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಛಾಯಾಗ್ರಾಹಕರು ವಿವಿಧ ಆಹಾರ ಪದಾರ್ಥಗಳ ಛಾಯಾಚಿತ್ರಗಳನ್ನು ತೆಗೆದು ಆಯೋಜಕರೊಂದಿಗೆ ಹಂಚಿಕೊಳ್ಳಬೇಕು. ಉತ್ತಮ ಛಾಯಾಚಿತ್ರಗಳಿಗೆ ಬಹುಮಾನಗಳನ್ನು ನೀಡಲಾಗುವುದು. ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಛಾಯಾಚಿತ್ರಗಳ ಪ್ರದರ್ಶನ ಇರಲಿದೆ. ಈ ಪ್ರದರ್ಶನ ಹಾಗೂ ಸ್ಪರ್ಧೆ ಉಚಿತವಾಗಿದ್ದು, ಎಲ್ಲರೂ ಭಾವಹಿಸಬಹುದು’ ಎಂದು ವೈಪಿಎಸ್‌ನ ಅಧ್ಯಕ್ಷ ಮಂಜು ವಿಕಾಸ್ ಶಾಸ್ತ್ರಿ ವಿ. ತಿಳಿಸಿದರು.
ಮಾಹಿತಿಗೆ: www.ypsbengaluru.comಗೆ ಭೇಟಿ ನೀಡಿ ಅಥವಾ 95139 77257ಗೆ ಸಂಪರ್ಕಿಸಿ.