ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಂತೆ: ಬಗೆಹರಿಯದ ಸಮಸ್ಯೆಗಳ ಕಂತೆ

ಯಲಹಂಕ: ನಕಲಿ ವ್ಯಾಪಾರಿಗಳ ಹಾವಳಿ, ಸಂಚಾರ ಸಮಸ್ಯೆ, ಸ್ವಚ್ಛತೆ ಮರೀಚಿಕೆ
Published 1 ಸೆಪ್ಟೆಂಬರ್ 2023, 0:29 IST
Last Updated 1 ಸೆಪ್ಟೆಂಬರ್ 2023, 0:29 IST
ಅಕ್ಷರ ಗಾತ್ರ

–ಡಿ. ಸುರೇಶ್

ಯಲಹಂಕ: ಅಲ್ಲಲ್ಲಿ ಹರಡಿಕೊಂಡಿರುವ ತರಕಾರಿ ತ್ಯಾಜ್ಯ, ಸಂಚಾರ ದಟ್ಟಣೆಯಿಂದ ವಾಹನ ಸವಾರರಿಗೆ ಕಿರಿಕಿರಿ, ಪಾರ್ಕಿಂಗ್‌ ಸಮಸ್ಯೆಯಿಂದ ಗ್ರಾಹಕರಿಗೆ ಬೇಸರ, ನಕಲಿ ವ್ಯಾಪಾರಿಗಳ ಹಾವಳಿ...

ಯಲಹಂಕದ ರೈತರ ಸಂತೆಯಲ್ಲಿ ಕಂಡುಬಂದ ದೃಶ್ಯಗಳಿವು.

ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಈ ಸಂತೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೆಸರಘಟ್ಟ, ಯಲಹಂಕ, ವಿಜಯಪುರ, ರಾಜಾನುಕುಂಟೆ ಮತ್ತಿತರ ಪ್ರದೇಶಗಳಿಂದ ತರಕಾರಿ ಮತ್ತಿತರ ಉತ್ಪನ್ನಗಳನ್ನು ತಂದು ಮಾರಾಟ ಮಾಡುತ್ತಾರೆ. ಸಂತೆಯಲ್ಲಿ 180 ಮಳಿಗೆಗಳಿದ್ದು, ಬೆಳಿಗ್ಗೆ
4 ಗಂಟೆಯಿಂದ ರಾತ್ರಿ 8ರವರೆಗೆ ವ್ಯಾಪಾರ ನಡೆಯುತ್ತದೆ. ಪ್ರತಿದಿನ ಸುತ್ತಮುತ್ತ ಗ್ರಾಮಗಳ ಸಾವಿರಾರು ಗ್ರಾಹಕರು ತರಕಾರಿ, ಹಣ್ಣುಗಳು, ಸೊಪ್ಪು ಸೇರಿ ಇತರೆ ಪದಾರ್ಥಗಳನ್ನು ಖರೀದಿಸಲು ಇಲ್ಲಿಗೆ ಬರುತ್ತಾರೆ.

ಆದರೆ, ಸಂತೆಯ ಮುಂಭಾಗದಲ್ಲಿ ಗ್ರಾಹಕರ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಪಾರ್ಕಿಂಗ್‌ಗಾಗಿ ಅನತಿ ದೂರದಲ್ಲಿ ನಿಗದಿಪಡಿಸಿರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ, ಇಲ್ಲಿಗೆ ಖರೀದಿಸಲು ಬರಬೇಕಾಗಿರುವುದರಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ, ನಿರೀಕ್ಷಿಸಿದಷ್ಟು ವ್ಯಾಪಾರವಾಗುತ್ತಿಲ್ಲ ಎಂಬುದು ಇಲ್ಲಿನ ವ್ಯಾಪಾರಿಗಳ ಅಳಲು.

ರೈತರ ಸಂತೆ ಮುಂಭಾಗದ ರಸ್ತೆಯಲ್ಲಿ ಬೆಳಿಗ್ಗೆ 4ರಿಂದ 8ರವರೆಗೆ ತರಕಾರಿಗಳನ್ನು ಹೊತ್ತು ತರುವ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಅಲ್ಲದೆ ಹಲವಾರು ಶಾಲಾ–ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ಈ ಭಾಗದಲ್ಲಿ ತೆರಳುವ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಗಿದೆ. ಈ ವೇಳೆ ಸಂತೆಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿ ಬರಲು ಪರದಾಡಬೇಕಾಗಿದೆ.

‘ರೈತರ ಸಂತೆಯಲ್ಲಿ ಶೇ70ರಷ್ಟು ನಕಲಿ ವ್ಯಾಪಾರಿಗಳಿದ್ದು, ಇಲ್ಲಿ ನೈಜ ರೈತರು ವ್ಯಾಪಾರ ಮಾಡುವುದು ತೀರಾ ಕಡಿಮೆಯಾಗಿದೆ. ಜತೆಗೆ ದಲ್ಲಾಳಿಗಳ ಹಾವಳಿಯೂ ಇದೆ’ ಎಂದು ಗ್ರಾಹಕಿ ಶಕುಂತಲಾ ದೂರುತ್ತಾರೆ.

‘ಸಂತೆಯ ಸಮೀಪದ ಮೇಲ್ಸೇತುವೆ ಪಕ್ಕದ ಸರ್ವಿಸ್‌ ರಸ್ತೆ, ಯಲಹಂಕ ಹಾಗೂ ಜಕ್ಕೂರು ಕಡೆಯಿಂದ ಬರುವ ವಾಹನಗಳು ಸಂತೆಯ ಮುಂಭಾಗದ ರಸ್ತೆಯ ಮೂಲಕ ಹಾದುಹೋಗುವುದರಿಂದ ಕೆಲವೊಮ್ಮೆ ಸಂಚಾರದ ದಟ್ಟಣೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು, ಅದರಲ್ಲೂ ವಯೋವೃದ್ಧರು ಮತ್ತು ಮಹಿಳೆಯರು ದಟ್ಟಣೆಯಲ್ಲಿ ಸಿಲುಕುವ ಜತೆಗೆ ದೂರದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಬಂದು ತರಕಾರಿಗಳನ್ನು ಖರೀದಿಸಲು ತೊಂದರೆಯಾಗುತ್ತಿದೆ’ ಎಂದು ಹೇಳುತ್ತಾರೆ.

ಸಂತೆಯ ಆವರಣದ ಸೊಪ್ಪಿನ ಮಳಿಗೆಗಳ ಹಿಂಭಾಗ ಸೇರಿ ಹಲವು ಕಡೆಗಳಲ್ಲಿ ವ್ಯಾಪಾರಿಗಳು ತರಕಾರಿ ಮತ್ತು ಸೊಪ್ಪಿನ ತ್ಯಾಜ್ಯವನ್ನು ಹಾಕುತ್ತಾರೆ. ಇದರಿಂದ, ಸ್ವಚ್ಛತೆಯೇ ಇಲ್ಲದಂತಾಗಿ ಈ ಪ್ರದೇಶದಲ್ಲಿ ತ್ಯಾಜ್ಯ ಕೊಳೆಯುತ್ತದೆ. ಇದನ್ನು ತಿನ್ನಲು ಹಸುಗಳ ಹಿಂಡು ಆಗಮಿಸುತ್ತದೆ. ಇನ್ನು ಮಳೆಯಾದರೆ ಈ ಸ್ಥಳವು ಗಬ್ಬೆದ್ದು ನಾರುವುದರಿಂದ ದುರ್ವಾಸನೆ ಜತೆಗೆ ಸೊಳ್ಳೆಗಳ ಕಾಟವೂ ಹೆಚ್ಚಾಗಿ, ವ್ಯಾಪಾರಿಗಳು ಮತ್ತು ಗ್ರಾಹಕರು ತೊಂದರೆ ಅನುಭವಿಸಬೇಕಾಗಿದೆ.

‘ಮಾರುಕಟ್ಟೆಯಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇಲ್ಲಿ ಸಂಗ್ರಹವಾಗುವ ಕಸದ ಸಮರ್ಪಕ ವಿಲೇವಾರಿಯಾಗಬೇಕು. ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಗ್ರಾಹಕರು ತರಕಾರಿ ಕೊಳ್ಳುವ ಸ್ಥಳದಲ್ಲಿ ಸಂಗ್ರಹವಾಗಿರುವ ತರಕಾರಿ ಮತ್ತು ಸೊಪ್ಪಿನ ತ್ಯಾಜ್ಯ.
ಗ್ರಾಹಕರು ತರಕಾರಿ ಕೊಳ್ಳುವ ಸ್ಥಳದಲ್ಲಿ ಸಂಗ್ರಹವಾಗಿರುವ ತರಕಾರಿ ಮತ್ತು ಸೊಪ್ಪಿನ ತ್ಯಾಜ್ಯ.
ಸೊಪ್ಪಿನ ಮಳಿಗೆಗಳ ಹಿಂಭಾಗದಲ್ಲಿ ತರಕಾರಿ ಮತ್ತು ಸೊಪ್ಪಿನ ತ್ಯಾಜ್ಯವನ್ನು ತಿನ್ನುತ್ತಿರುವ ಹಸುಗಳ ಹಿಂಡು.
ಸೊಪ್ಪಿನ ಮಳಿಗೆಗಳ ಹಿಂಭಾಗದಲ್ಲಿ ತರಕಾರಿ ಮತ್ತು ಸೊಪ್ಪಿನ ತ್ಯಾಜ್ಯವನ್ನು ತಿನ್ನುತ್ತಿರುವ ಹಸುಗಳ ಹಿಂಡು.
ಸಂಚಾರ ದಟ್ಟಣೆಯೇ ಪ್ರಮುಖ ಸಮಸ್ಯೆ
ಸಂತೆ ನಡೆಯುವ ಜಾಗವು ಕಿರಿದಾಗಿದೆ. ತರಕಾರಿಗಳನ್ನು ಹೊತ್ತ ಶಾಲಾವಾಹನ ಮತ್ತು ಗ್ರಾಹಕರ ವಾಹನಗಳು ಏಕಕಾಲದಲ್ಲಿ ಸಂತೆಯ ಮುಂಭಾಗದ ಮುಖ್ಯರಸ್ತೆಯಲ್ಲಿ ಸಂಚರಿಸುವುದರಿಂದ ಬೆಳಿಗ್ಗೆ 6ರಿಂದ 8ರವರೆಗೆ ಸಂಚಾರ ದಟ್ಟಣೆ ಉಂಟಾಗುತ್ತದೆ. ನಂತರ ಸಂಚಾರ ಪೊಲೀಸಲು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ -ಸುರೇಶ್ ವ್ಯಾಪಾರಿ ‘ವಾಹನಗಳಿಗೆ ಸಮರ್ಪಕ ವ್ಯವಸ್ಥೆಯಾಗಲಿ’ ಸಂತೆಗೆ ತರಕಾರಿ ಹಣ್ಣುಗಳನ್ನು ಖರೀದಿಸಲು ಬರುವ ವಾಹನ ಸವಾರರಿಗೆ ಸಂತೆಯ ಮುಂಭಾಗದ ರಸ್ತೆಯಲ್ಲಿ ತಮ್ಮ ವಾಹನಗಳ ನಿಲುಗಡೆಗೆ ಅವಕಾಶ ಇಲ್ಲ. ವಾಹನಗಳ ನಿಲುಗಡೆಗೆ ಸಮೀಪದಲ್ಲೆ ಅವಕಾಶ ನೀಡಿದ್ದರೆ ಅನುಕೂಲವಾಗುತ್ತಿತ್ತು. -ಗೌರಮ್ಮ ವ್ಯಾಪಾರಿ
ಸಂತೆಯ ಮುಂಭಾಗದ ಮುಖ್ಯರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಹಾಗೂ ಶಾಲಾ ವಾಹನಗಳು ಸಂಚರಿಸುವುದರಿಂದ ಬೆಳಗಿನ ವೇಳೆ ಸಂಚಾರದಟ್ಟಣೆ ಉಂಟಾಗುತ್ತಿದ್ದ ಕಾರಣ ಸ್ವಲ್ಪ ದೂರದಲ್ಲೇ ಗ್ರಾಹಕರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸಂತೆ ನಡೆಯುತ್ತಿರುವ ಜಾಗ ಸ್ವಲ್ಪ ಕಿರಿದಾಗಿದ್ದು ಕೆರೆ ಸಮೀಪ ಅಥವಾ ಇತರೆಡೆ ಬಿಡಿಎ ಅನುಮೋದಿತ ಸಿಎ ಬಡಾವಣೆಗಳು ನಿರ್ಮಾಣವಾದರೆ ಅಂತಹ ಕಡೆಗಳಲ್ಲಿ ವಿಶಾಲವಾದ ಸಂತೆ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಉಳಿದಂತೆ ಎಲ್ಲೂ ಸರ್ಕಾರಿ ಜಾಗವಿಲ್ಲ.
-ಎಸ್.ಆರ್.ವಿಶ್ವನಾಥ್ ಶಾಸಕ ಯಲಹಂಕ ಕ್ಷೇತ್ರ
ಸಮಸ್ಯೆ ನಿವಾರಣೆಗೆ ತಂಡಗಳ ರಚನೆ ಸಂತೆಯ ಮುಂಭಾಗದ ಮುಖ್ಯರಸ್ತೆಯಲ್ಲಿ ಬೆಳಗಿನ ವೇಳೆ ವಾಹನ ದಟ್ಟಣೆ ಉಂಟಾಗುತ್ತಿದ್ದು ಇದನ್ನು ನಿಯಂತ್ರಿಸಲು ಸಂಚಾರ ಪೊಲೀಸರ ಜೊತೆಗೆ 5 ಮಂದಿ ಒಳಗೊಂಡ ರೈತರ ತಂಡಗಳನ್ನು ರಚಿಸಲಾಗಿದೆ. ಪ್ರತಿದಿನ ಸಂಚಾರ ದಟ್ಟಣೆ ಉಂಟಾಗದಂತೆ ಮತ್ತು ಸಂತೆಯಲ್ಲಿ ಯಾವುದೇ ಸಮಸ್ಯೆಗಳಾಗದಂತೆ ನಿಗಾವಹಿಸಲು ಸೂಚಿಸಲಾಗಿದೆ. ವ್ಯಾಪಾರಿಗಳು ಮತ್ತು ಗ್ರಾಹಕರ ಸಂಖ್ಯೆಗನುಗುಣವಾಗಿ ಇನ್ನೂ ವಿಶಾಲವಾದ ಜಾಗವಿದ್ದಿದ್ದರೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ಜಾಗ ಕಿರಿದಾಗಿರುವುದರಿಂದ ಸ್ವಲ್ಪ ಇಕ್ಕಟ್ಟಾಗಿದೆ.
-ಶ್ರೀಧರ್.ಸಿ.ವಿ. ಮಾರುಕಟ್ಟೆ ಅಧಿಕಾರಿ ರೈತರ ಸಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT