ಸೋಮವಾರ, ಅಕ್ಟೋಬರ್ 14, 2019
22 °C
ಯಲಹಂಕ: ರೈತರ ಸಂತೆ ಬಳಿ ವಾಹನಗಳ ಅಡ್ಡಾದಿಡ್ಡಿ ಸಂಚಾರ

ಸಂಚಾರ ದಟ್ಟಣೆಯಿಂದ ಕಂಗೆಟ್ಟ ಜನ

Published:
Updated:
Prajavani

ಬೆಂಗಳೂರು: ಯಲಹಂಕದ ರಾಷ್ಟ್ರೀಯ ಹೆದ್ದಾರಿ 7ರ ಕೆಳಸೇತುವೆ ಬಳಿಯ ರೈತರ ಸಂತೆ ವೃತ್ತದ ಮೂಲಕ ಸಾಗುವ ವಾಹನ ಸವಾರರಿಗೆ ನಿತ್ಯವೂ ಗೋಳು ತಪ್ಪಿದ್ದಲ್ಲ. ಸಮರ್ಪಕವಾದ ಟ್ರಾಫಿಕ್‌ ಸಿಗ್ನಲ್‌ ಅಳವಡಿಸದ ಕಾರಣ ಇಲ್ಲಿ ದಟ್ಟಣೆ ಅವಧಿಯಲ್ಲಿ ವಾಹನಗಳು ನಾಲ್ಕು ಬದಿಯಿಂದಲೂ ಅಡ್ಡಾದಿಡ್ಡಿಯಾಗಿ ನುಗ್ಗುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ.

ಸೇತುವೆ ಕೆಳಗಿನ ಮಾರ್ಗ ಕೋಗಿಲು ವೃತ್ತ, ಬೆಂಗಳೂರು, ಜಕ್ಕೂರು, ಯಲಹಂಕ ಓಲ್ಡ್‌ ಟೌನ್‌, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವೆಂಕಟಾಲ ಕಡೆಗೆ ಸಂಪರ್ಕ ಕಲ್ಪಿಸುತ್ತದೆ. ಸೇತುವೆಯ ಕೆಳಮಾರ್ಗ ಕಿರಿದಾಗಿದೆ. ಬೇರೆ ಬೇರೆ ಮಾರ್ಗಗಳಿಂದ ಬರುವ ವಾಹನಗಳು ಒಮ್ಮೆಲೇ ಕೆಳಸೇತುವೆ ಕಡೆಗೆ ನುಗ್ಗಿದಾಗ ಇಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುತ್ತವೆ. 

ಪ್ರತಿದಿನ ಇಲ್ಲಿ ನಡೆಯುವ ರೈತರ ಸಂತೆಗೆ ನಗರದ ಹೊರಭಾಗಗಳಿಂದ ತರಕಾರಿ ಹೊತ್ತು ಬರುವ ಭಾರಿ ವಾಹನಗಳಿಂದ ಜಕ್ಕೂರು ಮುಖ್ಯರಸ್ತೆಯಲ್ಲಿ ಮುಂಜಾನೆಯಿಂದ ಬೆಳಿಗ್ಗೆ 10ರವರೆಗೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಭಾನುವಾರವಂತೂ ಇಲ್ಲಿನ ರಸ್ತೆಗಳಲ್ಲಿ ರೈತರ ಸಂತೆಯಿಂದ ಹಿಡಿದು ಯಲಹಂಕ ಓಲ್ಡ್‌ ಟೌನ್‌ವರೆಗೆ ವಾಹನಗಳ ಸಾಲು ಮುಂದುವರಿಯುತ್ತದೆ.  

ನೆರಳು ಅರಸಿ ಸೇತುವೆ ಕೆಳಗೆ ಜಾನುವಾರುಗಳು ಆಶ್ರಯ ಪಡೆಯುತ್ತವೆ. ಇದರಿಂದಾಗಿ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ನಡೆದಾಡಲು ಜಾಗವೇ ಇರುವುದಿಲ್ಲ. ಇತ್ತ ಬೆಂಗಳೂರು, ಹೆಬ್ಬಾಳದಿಂದ ವೇಗವಾಗಿ ಬರುವ ವಾಹನಗಳು ಸೇತುವೆ ಕೆಳಗೆ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಪ್ರಕರಣಗಳೂ ನಡೆದಿವೆ ಎಂದು ಸ್ಥಳೀಯರು ದೂರಿದರು.  

‘ಕಿರಿದಾದ ರಸ್ತೆಯಲ್ಲೇ ದೊಡ್ಡ ಟ್ರಕ್‌, ಲಾರಿ ಅಥವಾ ಬಸ್‌ ಸಂಚರಿಸಿದರೆ ಇದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿ ಸಾಲುಗಟ್ಟಿ ನಿಲ್ಲುತ್ತವೆ. ಕೆಲವು ಬಾರಿ ಕೋಗಿಲು ವೃತ್ತದಿಂದ ರೈತರ ಸಂತೆ ವೃತ್ತದವರೆಗೂ ವಾಹನದಟ್ಟಣೆ ಇರುತ್ತದೆ. ಸಂಚಾರ ಪೊಲೀಸರು ಎರಡೂ ಬದಿ ನಿಂತು ದಟ್ಟಣೆ ನಿಯಂತ್ರಿಸಲು ಹರಸಾಹಸ ಪಡುತ್ತಾರೆ’ ಎಂದು ಸ್ಥಳೀಯ ಅಂಗಡಿಯೊಂದರ ವ್ಯಾಪಾರಿ ಪ್ರಭುದೇವ್‌ ವಿವರಿಸಿದರು.

ವಿಭಜಕ ಅಳವಡಿಸಿ: ‘ಸೇತುವೆ ಕೆಳಗಿನ ಮಾರ್ಗದಲ್ಲಿ ರಸ್ತೆ ವಿಭಜಕ ಇಲ್ಲದ ಕಾರಣ ಕೆಲವೊಮ್ಮೆ ರಸ್ತೆಯಲ್ಲಿ ಸಾಗುವ ವಾಹನಗಳೆಲ್ಲವೂ ಏಕಮುಖವಾಗಿ ಸಂಚರಿಸುವುದರಿಂದ ದಟ್ಟಣೆ ಹೆಚ್ಚಾಗಿರುತ್ತದೆ. ಈ ಸಮಸ್ಯೆ ತಪ್ಪಿಸಲು ರಸ್ತೆ ವಿಭಜಕ ಅಳವಡಿಸಬೇಕಿದೆ. ಇದರಿಂದ ವಾಹನಗಳು ಎರಡೂ ಬದಿ ಸಂಚರಿಸಲು ಅನುಕೂಲವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಸೇತುವೆ ಬಳಿ ವಾಹನ ದಟ್ಟಣೆ ಹೆಚ್ಚಾಗುವ ಕುರಿತು ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ದೂರು ನೀಡಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಚರ್ಚಿಸಿದ್ದೇನೆ. ಬಿಎಂಟಿಸಿ ಬಸ್‌ಗಳನ್ನು ರೈತರ ಸಂತೆ ವೃತ್ತದ ಬದಲಾಗಿ ಕೋಗಿಲು ವೃತ್ತದಿಂದ ನೇರವಾಗಿ ಯಲಹಂಕ ಓಲ್ಡ್‌ ಟೌನ್‌ ಕಡೆಗೆ ಸಾಗುವಂತೆ ಸೂಚನೆ ನೀಡಲಾಗುವುದು. ಇದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ’ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಚಂದ್ರಮ್ಮ ಕೆಂಪೇಗೌಡ ತಿಳಿಸಿದರು.

‘ಪ್ರತ್ಯೇಕ ಸುರಂಗ ಮಾರ್ಗ ನಿರ್ಮಿಸಿ’

‘ಇಲ್ಲಿ ರಸ್ತೆ ದಾಟುವುದು ಪಾದಚಾರಿಗಳ ಪಾಲಿಗೆ ಸವಾಲಿನ ಕೆಲಸ. ನಗರದ ಹೊರಭಾಗಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳು ಈ ರಸ್ತೆಯನ್ನು ದಾಟಿ ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ. ರೈತರ ಸಂತೆಗೆ ಹೋಗುವವರೂ ಈ ರಸ್ತೆ ದಾಟಬೇಕಾಗುತ್ತದೆ. ವಾಹನಗಳು ಸದಾ ನುಗ್ಗುತ್ತಲೇ ಇರುತ್ತವೆ. ಇಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಿದರೆ ವಾಹನಗಳ ಸಂಚಾರ ನಿಯಂತ್ರಣಕ್ಕೆ ಬರುತ್ತದೆ. ಆಗ ಪಾದಚಾರಿಗಳು ಸುಲಭವಾಗಿ ರಸ್ತೆ ದಾಟಬಹುದು ಅಥವಾ ಪಾದಚಾರಿಗಳಿಗೆ ಪ್ರತ್ಯೇಕ ಸುರಂಗ ಮಾರ್ಗವನ್ನಾದರೂ ನಿರ್ಮಿಸಿದರೆ, ವಾಹನಗಳ ಕಿರಿಕಿರಿಯೇ ಇಲ್ಲದೆ ರಸ್ತೆ ದಾಟಲು ಅನುಕೂಲವಾಗಲಿದೆ’ ಎಂದು ಯಲಹಂಕ ನಿವಾಸಿ ಮೋಹನ್‌ ಸಲಹೆ ನೀಡಿದರು.

***

ಕಾಲೇಜಿಗೆ ತೆರಳಲು ಇದೇ ಕೆಳಸೇತುವೆ ದಾಟಿ ಹೋಗಬೇಕು. ಒಂದು ಕಡೆ ದಾಟಿ ಹೋಗುವಷ್ಟರಲ್ಲಿ ಮತ್ತೊಂದೆಡೆ ವಾಹನಗಳು ವೇಗವಾಗಿ ಸಂಚರಿಸುತ್ತಲೇ ಇರುತ್ತವೆ. ಟ್ರಾಫಿಕ್‌ ಸಿಗ್ನಲ್‌ ಅಳವಡಿಸಿದರೆ ನಮಗೂ ಅನುಕೂಲ.
– ಚೇತನ್‌, ವಿದ್ಯಾರ್ಥಿ

ರೈತರ ಸಂತೆಗೆ ಬರುವ ಭಾರಿ ವಾಹನಗಳು ರಸ್ತೆಯಲ್ಲೇ ಹೆಚ್ಚು ಕಾಲ ನಿಂತಿರುತ್ತವೆ. ಇದರಿಂದ ರಸ್ತೆಯಲ್ಲಿ ದಟ್ಟಣೆ ಹೆಚ್ಚಾಗಿರುತ್ತದೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು.
–ಮಹೇಶ್‌, ಯಲಹಂಕ ನಿವಾಸಿ

Post Comments (+)