ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ: ಮಳೆಯ ನಡುವೆಯೇ ಡಾಂಬರೀಕರಣ

ಕಾಮಗಾರಿ ಸ್ಥಗಿತಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದರೂ ಕಿವಿಗೊಡದ ಗುತ್ತಿಗೆದಾರ
Last Updated 3 ಜೂನ್ 2021, 23:03 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದ ಉಪನಗರದ ಬಳಿಯ ಸೋಮೇಶ್ವರನಗರದಲ್ಲಿ ಸುರಿವ ಮಳೆಯ ನಡುವೆಯೇ ಗುರುವಾರ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೂ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

‘ಸೋಮೇಶ್ವರನಗರದ 3 ಎ ಮುಖ್ಯರಸ್ತೆ, 2ಎ ಅಡ್ಡ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಮಳೆ ಬರುವಾಗ ಡಾಂಬರು ಹಾಕಬೇಡಿ ಎಂದು ನಾವು ವಿನಂತಿಸಿದೆವು. ಆದರೂ ಕೆಲಸಗಾರರು ಕಿವಿಗೊಡದೇ ಟಿಪ್ಪರ್‌ ಲಾರಿಯಲ್ಲಿ ಡಾಂಬರ್‌ ಮಿಶ್ರಣ ತಂದು ಸುರಿದರು. ಮಳೆ ಬರುವಾಗ ಡಾಂಬರು ಹಾಕದಂತೆ ಸ್ಥಳದಲ್ಲಿ ಸಿಗರೇಟ್‌ ಸೇದುತ್ತಾ ನಿಂತಿದ್ದ ಮೇಲ್ವಿಚಾರಕರಲ್ಲಿ ನಾವು ನಿವೇದಿಸಿದೆವು. ನಮ್ಮ ಮಾತಿಗೆ ಕಿವಿಗೊಡದೆ ಕೆಲಸ ಮುಂದುವರಿಸಿದರು. ಈ ವಿಷಯವನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದೆವು. ಡಾಂಬರೀಕರಣ ಮುಗಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಬಂದರು’ ಎಂದು ಸ್ಥಳೀಯ ನಿವಾಸಿ ಡಾ.ಆನಂದ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಾಂಬರೀಕರಣ ನಡೆಸುವಾಗ ನಿಯಮಗಳನ್ನು ಪಾಲಿಸುತ್ತಿಲ್ಲ. ಕಾಟಾಚಾರಕ್ಕೆ ಬೇಕಾಬಿಟ್ಟಿ ಡಾಂಬರು ಹಾಕಿದ್ದಾರೆ. ಹಾಕಿದ ಡಾಂಬರು ಈಗಲೇ ಕಿತ್ತುಬರಲಾರಂಭಿಸಿದೆ. ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಗುತ್ತಿಗೆದಾರರನ್ನು ಹೇಳುವವರು ಕೇಳುವವರು ಯಾರೂ ಇಲ್ಲ. ಪಾಲಿಕೆ ಹುಚ್ಚರ ಸಂತೆಯಂತೆ ಆಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಮಳೆ ಬರುವಾಗ ಡಾಂಬರು ಹಾಕಿದರೆ ಅದು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಡಾಂಬರೀಕರಣದ ವೇಳೆ ಮಿಶ್ರಣದ ಉಷ್ಣಾಂಶ ಕಾಯ್ದುಕೊಳ್ಳುವಿಕೆ ತುಂಬಾ ಮುಖ್ಯ. ಅದರ ಆಧಾರದಲ್ಲೇ ಡಾಂಬರೀಕರಣದ ಗುಣಮಟ್ಟ ನಿರ್ಧಾರವಾಗುತ್ತದೆ’ ಎಂದು ಹಿರಿಯ ಎಂಜಿನಿಯರ್‌ ಒಬ್ಬರು ಅಭಿಪ್ರಾಯಪಟ್ಟರು.

‘ಬಿಸಿ ಡಾಂಬರು– ಜಲ್ಲಿ ಮಿಶ್ರಣವು ಕನಿಷ್ಠ ಪಕ್ಷ 160 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶವನ್ನು ಹೊಂದಿರಬೇಕು. ಜಲ್ಲಿ–ಡಾಂಬರು ಮಿಶ್ರಣವನ್ನು ರಸ್ತೆಗೆ ಹಾಕುವಾಗ ಅದರ ಉಷ್ಣಾಂಶ ಕಡಿಮೆ ಎಂದರೂ 120 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಇರಬೇಕು. ಅದಕ್ಕಿಂತ ಕಡಿಮೆ ಆದರೆ ರಸ್ತೆಯ ಮೇಲ್ಮೈಗೆ ಮಿಶ್ರಣವು ಸರಿಯಾಗಿ ಅಂಟಿಕೊಳ್ಳುವುದಿಲ್ಲ. ರಸ್ತೆ ಮೇಲ್ಮೈಗೆ ಅಂಟು ಪದರದ ರೂಪದಲ್ಲಿ ಹಾಕುವ ದ್ರವ ಡಾಂಬರು ಕೂಡಾಮಳೆ ಬರುವಾಗ ತಣ್ಣಗಾಗುತ್ತದೆ. ಆಗ ರಸ್ತೆಯ ಮೇಲ್ಮೈ ಡಾಂಬರು ಮಿಶ್ರಣವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ’ ಎಂದು ಅವರು ವಿವರಿಸಿದರು.

‘ಮಳೆಗಾಲದಲ್ಲಿ ಡಾಂಬರೀಕರಣ ಕಾಮಗಾರಿ ನಡೆಸಬಾರದು ಎಂದು ಲೋಕೋಪಯೋಗಿ ಇಲಾಖೆ ಪ್ರತಿವರ್ಷವೂ ಸುತ್ತೋಲೆ ಹೊರಡಿಸುತ್ತದೆ. ಮಳೆ ಬರುವಾಗ ಡಾಂಬರೀಕರಣ ನಡೆಸಬಾರದು ಎಂದು ಗುತ್ತಿಗೆದಾರರಿಗೂ ಸೂಚನೆ ನೀಡಲಾಗಿರುತ್ತದೆ. ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳುವುದಕ್ಕಾಗಿಯೇ ಯೋಜನಾ ನಿರ್ವಹಣೆ ಸಲಹೆಗಾರರನ್ನು (ಪಿಎಂಸಿ) ನೇಮಿಸಲಾಗುತ್ತದೆ. ಜಲ್ಲಿ– ಡಾಂಬರು ಮಿಶ್ರಣ ನಿಗದಿತ ಉಷ್ಣಾಂಶದಲ್ಲಿದೆಯೇ ಎಂಬುದನ್ನು ತಪಾಸಣೆ ನಡೆಸುವುದು ಅವರ ಜವಾಬ್ದಾರಿ’ ಎಂದರು.

‘ತಣ್ಣಗಾದ ಜಲ್ಲಿ– ಡಾಂಬರು ಮಿಶ್ರಣ ಬಳಸಿದರೆ ಅದು ದೋಸೆಯಂತೆ ಕಿತ್ತುಬರುತ್ತದೆ. ಈ ಡಾಂಬರೀಕರಣ ಮೂರು ತಿಂಗಳು ಬಾಳಿಕೆ ಬಂದರೆ ಹೆಚ್ಚು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT