ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಕರನ ಜತೆ ಜಗಳ: ಐಐಎಂ ವಿದ್ಯಾರ್ಥಿನಿ ನೇಣಿಗೆ ಶರಣು

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂ- ಬೆಂಗಳೂರು) ವಿದ್ಯಾರ್ಥಿನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಜಾರ್ಖಂಡ್ ಮೂಲದ ಮಾಲಿನಿ   (22) ಆತ್ಮಹತ್ಯೆ ಮಾಡಿಕೊಂಡವರು. ಪ್ರಥಮ ವರ್ಷದ ಎಂಬಿಎ ಓದುತ್ತಿದ್ದ ಅವರು, ಐಐಎಂಬಿ ಆವರಣದಲ್ಲೇ ಇರುವ ವಿದ್ಯಾರ್ಥಿನಿಲಯದಲ್ಲಿ ನೆಲೆಸಿದ್ದರು. ದೆಹಲಿ ಮೂಲದ ವ್ಯಕ್ತಿಯೊಬ್ಬರನ್ನು ಅವರು ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮಾಲಿನಿ ಮತ್ತು ಅವರ ಪ್ರಿಯಕರನ ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಪ್ರಿಯಕರ ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದ. ಪ್ರಿಯಕರ ದೂರವಾಗಿದ್ದರಿಂದ ಮನನೊಂದಿದ್ದ ಅವರು ವಿದ್ಯಾರ್ಥಿನಿಲಯದ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬೆಳಿಗ್ಗೆ ತರಗತಿಗೆ ಹಾಜರಾಗಿದ್ದ ಅವರು, ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ವಿದ್ಯಾರ್ಥಿನಿಲಯಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾರ್ಖಂಡ್‌ನಲ್ಲಿರುವ ಅವರ ಪೋಷಕರಿಗೆ ಮಾಹಿತಿ ರವಾನಿಸಲಾಗಿದ್ದು, ಅವರು ಮಂಗಳವಾರ ಬೆಳಿಗ್ಗೆ ನಗರಕ್ಕೆ ಬರಲಿದ್ದಾರೆ.

`ಪ್ರಿಯಕರ ನನಗೆ ಮೋಸ ಮಾಡಿದ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ~ ಎಂದು ಮಾಲಿನಿ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೈಕೊ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಚ್ಚಿ ಕೊಲೆ
ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಮೈಕೊ ಲೇಔಟ್ ಸಮೀಪದ ತಾವರೆಕೆರೆ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮಡಿವಾಳ ಸಮೀಪದ ಜೈ ಭೀಮ್‌ನಗರ ನಿವಾಸಿ ಮನು (24) ಕೊಲೆಯಾದ ವ್ಯಕ್ತಿ. ಮನು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಮೈಕೊ ಲೇಔಟ್ ಹಾಗೂ ಮಡಿವಾಳ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತನನ್ನು ಭೇಟಿ ಮಾಡಲು ರಾತ್ರಿ ಏಳು ಗಂಟೆ ಸುಮಾರಿಗೆ ಕಾರಿನಲ್ಲಿ ತಾವರೆಕೆರೆಗೆ ಬಂದಿದ್ದ ಮನು ಮೇಲೆ ದುಷ್ಕರ್ಮಿಗಳು ಮಚ್ಚು, ಲಾಂಗ್‌ಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ದ್ವೇಷದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ. ಆರೋಪಿಗಳ ಬಗ್ಗೆ ಮಾಹಿತಿ ಇದ್ದು, ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಡಾ.ಪಿ.ಎಸ್.ಹರ್ಷ, ಮೈಕೊ ಲೇಔಟ್ ವಿಭಾಗದ ಎಸಿಪಿ ಡಿ.ರಾಚಪ್ಪ, ಇನ್‌ಸ್ಪೆಕ್ಟರ್ ಬಿ.ಎಸ್.ಮೋಹನ್‌ಕುಮಾರ್  ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಕೊ ಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT