ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 10 ಕಂಪ್ಯೂಟರ್ ಉಚಿತ ವಿತರಣೆ

Last Updated 7 ಜನವರಿ 2022, 12:45 IST
ಅಕ್ಷರ ಗಾತ್ರ

ಜನವಾಡ: ಕಾಂಗ್ನಿಜೆಂಟ್ ತಂತ್ರಜ್ಞಾನ ವತಿಯಿಂದ ಉಚಿತವಾಗಿ ನೀಡಲಾದ 10 ಕಂಪ್ಯೂಟರ್‍ಗಳನ್ನು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿತರಿಸಿದೆ.

ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ ಅವರು ಕಾಲೇಜು ಪ್ರಾಚಾರ್ಯ ಪ್ರೊ. ವಿನಾಯಕ ಕೊತಮಿರ ಅವರಿಗೆ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ವಿತರಿಸಲು ಕಾಂಗ್ನಿಜೆಂಟ್ ತಂತ್ರಜ್ಞಾನವು ರಾಜ್ಯ ಸರ್ಕಾರಕ್ಕೆ ಕಂಪ್ಯೂಟರ್‍ಗಳನ್ನು ಉಚಿತವಾಗಿ ನೀಡಿದೆ. ಸರ್ಕಾರ, ಕಂಪ್ಯೂಟರ್ ಸಾಗಣೆ ಸೇರಿದಂತೆ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ರೋಟರಿ ಸಂಸ್ಥೆಗೆ ವಹಿಸಿದೆ ಎಂದು ಅವರು ತಿಳಿಸಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಣಕಯಂತ್ರದ ಜ್ಞಾನ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಉಚಿತ ಕಂಪ್ಯೂಟರ್‍ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ಚಿಟಗುಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 30 ಕಂಪ್ಯೂಟರ್‍ಗಳನ್ನು ಕೊಡಲಾಗಿದೆ. ಜಿಲ್ಲೆಯ ಇನ್ನೂ ಅನೇಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಉಚಿತ ಕಂಪ್ಯೂಟರ್‌ಗಳನ್ನು ಒದಗಿಸುವ ಯೋಜನೆ ಇದೆ ಎಂದು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಶಿವಕುಮಾರ ಯಲಾಲ್ ತಿಳಿಸಿದರು.

ರೋಟರಿ ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ವಿಶೇಷ ಕಾಳಜಿ ವಹಿಸುತ್ತಿದೆ ಎಂದು ಪ್ರೊ. ವಿನಾಯಕ ಕೋತಮಿರ ಹೇಳಿದರು.

ಕಾಲೇಜಿಗೆ ಉಚಿತವಾಗಿ ಕಂಪ್ಯೂಟರ್‌ಗಳನ್ನು ಒದಗಿಸಿದ್ದರಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ನಿಯೋಜಿತ ಅಧ್ಯಕ್ಷ ನಿತಿನ್ ಕರ್ಪೂರ, ಸದಸ್ಯರಾದ ಸತೀಶ ಸ್ವಾಮಿ, ಸಚ್ಚಿದಾನಂದ ಚಿದ್ರೆ, ರಾಜಕುಮಾರ ಅಳ್ಳೆ, ಡಾ. ಲೋಕೇಶ ಹಿರೇಮಠ, ಕಾಲೇಜಿನ ಡಾ. ಹೇಮಾವತಿ ಪಾಟೀಲ, ಊರ್ವಶಿ ಕೂಡ್ಲಿ ಇದ್ದರು.

ಪ್ರಾಧ್ಯಾಪಕ ಸಂಜೀವಕುಮಾರ ತಾಂದಳೆ ನಿರೂಪಿಸಿದರು. ಮಹೇಶಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT