ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌| ಮಹಿಳೆಯರಿಗೆ ₹10 ಲಕ್ಷ ಬಡ್ಡಿ ರಹಿತ ಸಾಲ: ಸಚಿವ ಈಶ್ವರ ಖಂಡ್ರೆ ಭರವಸೆ

ಗುರುಪಾದಪ್ಪ ನಾಗಮಾರಪಳ್ಳಿ ಜನ್ಮ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ
Published 11 ನವೆಂಬರ್ 2023, 16:02 IST
Last Updated 11 ನವೆಂಬರ್ 2023, 16:02 IST
ಅಕ್ಷರ ಗಾತ್ರ

ಬೀದರ್‌: ‘ಸ್ವಸಹಾಯ ಸಂಘದ ಮಹಿಳೆಯರಿಗೆ ₹10 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದರು.

ಮಾಜಿಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಸಹಾಯ ಸಂಘಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ‘ಹಿಂದಿನ ಸರ್ಕಾರದಲ್ಲಿ ₹3ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿತ್ತು. ನಮ್ಮ ಸರ್ಕಾರದ ಬಂದ ನಂತರ ಅದನ್ನು ₹5 ಲಕ್ಷದ ವರೆಗೆ ಹೆಚ್ಚಿಸಿದೆ. ಚುನಾವಣೆಗೂ ಮುನ್ನ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಅರ್ಹರೆಲ್ಲರಿಗೂ ಸಾಲ ಸೌಲಭ್ಯ ಸಿಗಲಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಒಟ್ಟು 5 ಲಕ್ಷ ಸ್ವಸಹಾಯ ಸಂಘದ ಮಹಿಳೆಯರಿದ್ದಾರೆ. ಎರಡು ಲಕ್ಷ ಜನ ಪರಿಶಿಷ್ಟ ಜಾತಿ, 50 ಸಾವಿರ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿದ್ದಾರೆ. ಶೇ 99ರಷ್ಟು ಸಾಲ ಮರು ಪಾವತಿ ಆಗುತ್ತಿದೆ. ದೇಶದಲ್ಲಿ ಅನೇಕ ಜನ ಬಂಡವಾಳಶಾಹಿಗಳು ಸಾಲ ಪಡೆದು ದೇಶ ಬಿಟ್ಟು ಹೋಗಿದ್ದಾರೆ. ಆದರೆ, ಸ್ವಸಹಾಯ ಸಂಘದ ಮಹಿಳೆಯರು ಹಾಗಿಲ್ಲ. ಈ ರೀತಿ ಮಾಡಿದರೆ ಬ್ಯಾಂಕಿನ ಠೇವಣಿದಾರರಿಗೆ ಭರವಸೆ ಬರುತ್ತದೆ’ ಎಂದರು.

‘ಯಾವುದೇ ಜಿಲ್ಲೆ, ಪ್ರದೇಶ ಅಭಿವೃದ್ಧಿ ಆಗಬೇಕಾದರೆ ಆರ್ಥಿಕವಾಗಿ ಸಬಲರಾಗಬೇಕು. ಎಲ್ಲಾ ಅಭಿವೃದ್ಧಿಗೆ ಅದೇ ಮೂಲ. ಹಣ ಇಲ್ಲದೇ ಇದ್ದರೆ ಏನೂ ಮಾಡಲಾಗುವುದಿಲ್ಲ. ಬೆಂಗಳೂರು, ಮೈಸೂರು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಪ್ರಗತಿ ಸಾಧಿಸಿವೆ. ಆ ಭಾಗದಲ್ಲಿ ಕೆನರಾ, ಸಿಂಡಿಕೇಟ್‌ ಸೇರಿದಂತೆ ಇತರೆ ಬ್ಯಾಂಕುಗಳು ಆರಂಭಗೊಂಡಿದ್ದರಿಂದ ಸುಲಭವಾಗಿ ಸಾಲ ಸೌಲಭ್ಯ ಸಿಗುತ್ತಿತ್ತು. ನಮ್ಮ ಭಾಗದಲ್ಲಿ ಇರಲಿಲ್ಲ. ಇತ್ತೀಚೆಗೆ ರಾಷ್ಟ್ರೀಕೃತ ಬ್ಯಾಂಕುಗಳು ಆರಂಭಗೊಂಡಿವೆ’ ಎಂದರು.

‘ಈ ಭಾಗದಲ್ಲಿ ಬೀದರ್‌ ಡಿಸಿಸಿ ಬ್ಯಾಂಕ್‌ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ನೂರು ವರ್ಷಗಳ ಇತಿಹಾಸವಿದೆ. ಆರ್‌.ವಿ. ಬಿಡಪ್ಪ, ಆರ್‌.ಬಿ. ಶೆಟಕಾರ, ಭೀಮಣ್ಣ ಖಂಡ್ರೆ, ಅಬ್ದುಲ್‌ ನಬಿ, ವೀರಶೆಟ್ಟಿ ಕುಶನೂರ ಅವರು ಇದನ್ನು ಕಟ್ಟಿ ಬೆಳೆಸಿದ್ದಾರೆ. 1985ರಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಅವರು ಆಡಳಿತದ ಚುಕ್ಕಾಣಿ ಹಿಡಿದರು. ಅವರು ಹಾಗೂ ಅವರ ನಂತರ ಬಂದ ಅಧ್ಯಕ್ಷರು ಮತ್ತಷ್ಟು ಬೆಳೆಸಿದರು. ಸಹಕಾರ ಸಂಘಗಳು, ಸಣ್ಣ ವ್ಯಾಪಾರಿಗಳು, ಕೃಷಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಬ್ಯಾಂಕ್‌ ಕೊಡುಗೆ ದೊಡ್ಡದಿದೆ’ ಎಂದು ಹೇಳಿದರು.

‘ರಾಷ್ಟ್ರೀಕೃತ ಬ್ಯಾಂಕಿಗಿಂತ ದೊಡ್ಡ ಮಟ್ಟದಲ್ಲಿ ಡಿಸಿಸಿ ಬ್ಯಾಂಕ್‌ ಬೆಳೆದಿದೆ. ಇದಕ್ಕೆ ಬರುವ ದಿನಗಳಲ್ಲಿ ದೊಡ್ಡ ಶಕ್ತಿ ಕೊಟ್ಟು ಮುನ್ನಡೆಸಿಕೊಂಡು ಹೋಗಬೇಕಿದೆ. ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣ ಆಗಬೇಕು. ಪುರುಷರಷ್ಟೇ ಮಹಿಳೆಯರ ಪಾತ್ರ ದೊಡ್ಡದಿದೆ.1970ರಲ್ಲಿ ಇಂದಿರಾ ಗಾಂಧಿಯವರ ಕಾಲದಲ್ಲಿ ಸ್ವಸಹಾಯ ಗುಂಪುಗಳ ರಚನೆಗೆ ಚಿಂತನೆ ನಡೆದಿತ್ತು. ಅನಂತರ ನಬಾರ್ಡ್‌ ಬ್ಯಾಂಕುಗಳ ಜೊತೆ ಸೇರಿಸಿ ಅನೇಕ ಗುಂಪುಗಳನ್ನು ಡಿಸಿಸಿ ಬ್ಯಾಂಕ್‌ ಮೂಲಕ ಅನೇಕ ಯೋಜನೆಗಳನ್ನು ರೂಪಿಸಲಾಯಿತು. ಅನೇಕರ ಶ್ರಮದಿಂದ ಡಿಸಿಸಿ ಬ್ಯಾಂಕ್‌ ಬೆಳೆದಿದೆ’ ಎಂದರು.

‘37 ಸಾವಿರ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಐದು ಲಕ್ಷ ಮಹಿಳೆಯರು ಸ್ವಸಹಾಯ ಸಂಘಗಳ ಸದಸ್ಯರಾಗಿದ್ದಾರೆ. ಅವರಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ₹800 ಕೋಟಿ ಸಾಲ ಅವರಿಗೆ ಕೊಡಲಾಗಿದೆ. ಈಗ ಅವರೆಲ್ಲ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಮರಕುಮಾರ ಖಂಡ್ರೆ, ಉಪಾಧ್ಯಕ್ಷ ಅಭಿಷೇಕ್‌ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ, ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ, ಬಸವರಾಜ ಹೆಬ್ಬಾಳೆ, ಶಕುಂತಲಾ ಬೆಲ್ದಾಳೆ, ವಿಜಯಕುಮಾರ ಪಾಟೀಲ ಗಾದಗಿ, ಬಸವರಾಜ ಕಾಮಶೆಟ್ಟಿ, ರೇವಣಸಿದ್ದಪ್ಪ ಪಾಟೀಲ, ಭೀಮರೆಡ್ಡಿ ವರವಟ್ಟಿ, ಮಂಜುಳಾ, ಲೀಲಾ ಮಲ್ಲಿಕಾರ್ಜುನ ಕಾರಟಗಿ, ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸ್‌, ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ ಇತರರು ಹಾಜರಿದ್ದರು.

‘ವಿಜಯೇಂದ್ರ ನೇಮಕದಿಂದ ಬದಲಾವಣೆ ಆಗೊಲ್ಲ’:

‘ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿರುವುದರಿಂದ ಯಾವುದೇ ರೀತಿಯ ಬದಲಾವಣೆ ಆಗೊಲ್ಲ. ಬಿಜೆಪಿಯಲ್ಲಿ ದೊಡ್ಡ ಮಟ್ಟದ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಮೊದಲು ಅವರು ಆಂತರಿಕ ಕಚ್ಚಾಟದಿಂದ ಹೊರಬರಲಿ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಿಜಯೇಂದ್ರ ನೇಮಕ ಅವರ ಪಕ್ಷದ ಆಂತರಿಕ ವಿಚಾರ. ಬಿಜೆಪಿ ಈಗಾಗಲೇ ದಿವಾಳಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷ ಸ್ಥಾನ ಅತ್ಯಂತ ಮಹತ್ವವಾದದ್ದು. ಆ ಸ್ಥಾನ ಭರ್ತಿ ಮಾಡಿದ್ದಾರಾ? ಇವತ್ತು ಬರೀ ನಾಟಕ ಮಾಡುತ್ತ ಬರ ವೀಕ್ಷಣೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಕೇಂದ್ರದಿಂದ ಅನುದಾನ ಕೊಡಿಸಬೇಕಿತ್ತು’ ಎಂದರು. ‘ರಾಜ್ಯದಲ್ಲಿ ಬಿಜೆಪಿಯ 25 ಜನ ಸಂಸದರಿದ್ದಾರೆ. ಒಬ್ಬರು ಕೂಡ ಬರದ ಬಗ್ಗೆ ತುಟಿಪಿಟಿಕ್‌ ಅಂದಿಲ್ಲ. ಮೋದಿ ಎದುರು ಮಾತಾಡೋ ಧೈರ್ಯ ಇಲ್ಲ. ಅಂಜುಬುರುಕರಿದ್ದಾರೆ. ಕಾಂಗ್ರೆಸ್‌ನಲ್ಲಿ ಎಲ್ಲಾ ಸಮುದಾಯದವರನ್ನು ತೆಗೆದುಕೊಂಡು ಹೋಗುವ ಕೆಲಸ ಆಗ್ತಾ ಇದೆ. ನಾವೆಲ್ಲಾ ಲಿಂಗಾಯತರಿಲ್ವಾ ನಮಗೆ ಕಾಂಗ್ರೆಸ್‌ನಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ವಾ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT