ಶನಿವಾರ, ಆಗಸ್ಟ್ 13, 2022
24 °C
ಜಿಲ್ಲಾ ಆಡಳಿತ ಕಾರ್ಯಕ್ಕೆ ಶಾಹೀನ್ ಶಿಕ್ಷಣ ಸಂಸ್ಥೆ ಸಾಥ್

106 ಬಡ ವಿದ್ಯಾರ್ಥಿಗಳಿಗೆ ಪಿಯು ಉಚಿತ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬಡ ವಿದ್ಯಾರ್ಥಿಗಳಿಗೆ ಜಿಲ್ಲೆಯ ಖಾಸಗಿ ಕಾಲೇಜುಗಳಲ್ಲಿ ಪಿಯು ಉಚಿತ ಪ್ರವೇಶ ಕಲ್ಪಿಸಿ ನೆರವಾಗುವ ಜಿಲ್ಲಾ ಆಡಳಿತದ ಕಾರ್ಯಕ್ಕೆ ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆ ಸಾಥ್ ನೀಡಿದೆ.

ಪ್ರಸಕ್ತ ವರ್ಷ ಬೀದರ್, ಭಾಲ್ಕಿ, ಹುಮನಾಬಾದ್, ಔರಾದ್ ಹಾಗೂ ಬಸವಕಲ್ಯಾಣ ಸೇರಿದಂತೆ ಜಿಲ್ಲೆಯ ತನ್ನ ಆರು ಕಾಲೇಜು ಶಾಖೆಗಳಲ್ಲಿ ಒಟ್ಟು 106 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಒದಗಿಸಿದೆ.

ಜಿಲ್ಲಾ ಆಡಳಿತವು ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ಪಿಯು ಪ್ರವೇಶ ಒದಗಿಸಲು ಬೀದರ್‍ನಲ್ಲಿ ನಡೆಸಿದ ಕೌನ್ಸೆಲಿಂಗ್‍ಗೆ ಒಟ್ಟು 1,276 ವಿದ್ಯಾರ್ಥಿಗಳು ಹಾಜರಾಗಿದ್ದರು. 695 ಸ್ಥಾನಗಳ ಪೈಕಿ 645 ಸ್ಥಾನಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು, ಜಿಲ್ಲಾ ಆಡಳಿತ ಪ್ರತಿ ವರ್ಷ ಜಿಲ್ಲೆಯ ಖಾಸಗಿ ಪದವಿಪೂರ್ವ ಕಾಲೇಜುಗಳಲ್ಲಿ ಉಚಿತ ಪ್ರವೇಶ ಕಲ್ಪಿಸುತ್ತಿರುವ ಕಾರಣ ಬಹಳಷ್ಟು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಡಾ. ಪಿ.ಸಿ. ಜಾಫರ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಬಡ ವಿದ್ಯಾರ್ಥಿಗಳಿಗೆ ಪಿಯು ಉಚಿತ ಪ್ರವೇಶ ಒದಗಿಸುವ ಕುರಿತು ಪ್ರಸ್ತಾಪಿಸಿದ್ದೆ. ಈ ಕುರಿತು ಚರ್ಚೆ ನಡೆಸಿದ್ದ ಜಿಲ್ಲಾಡಳಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ತನ್ನ ಮೂಲಕ ಉಚಿತ ಪಿಯು ಪ್ರವೇಶ ಕಲ್ಪಿಸುವ ಯೋಜನೆ ಜಾರಿಗೆ ತಂದಿತ್ತು. ಅದು ಇಂದಿಗೂ ಮುಂದುವರಿದಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ರಾಮಚಂದ್ರನ್ ಅವರ ಆಸಕ್ತಿಯ ಫಲವಾಗಿ ಈ ವರ್ಷವೂ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಅವಕಾಶ ದೊರಕಿದೆ. ಜಿಲ್ಲಾಡಳಿತದ ಕಾರ್ಯಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೈಜೋಡಿಸಿವೆ ಎಂದು ತಿಳಿಸಿದರು.

ನೂರು ವೈಷ್ಣವಿ: ಈ ಬಾರಿ ಕೌನ್ಸೆಲಿಂಗ್‍ನಲ್ಲಿ ಶಾಹೀನ್ ಕಾಲೇಜಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಲ್ಲಿ 8 ಜನ ವೈಷ್ಣವಿ ಇದ್ದಾರೆ. ಕಳೆದ ವರ್ಷ ವೈಷ್ಣವಿ ಹೆಸರಿನ 76 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇದ್ದರು. ಪ್ರಸಕ್ತ ವರ್ಷ ಇನ್ನೂ ಪ್ರವೇಶ ಪ್ರಕ್ರಿಯೆ ನಡೆಯುತ್ತಿರುವಾಗಲೇ ಶಾಹೀನ್‍ನಲ್ಲಿ ವೈಷ್ಣವಿ ಹೆಸರಿನವರ ಒಟ್ಟು ಸಂಖ್ಯೆ 100ಕ್ಕೆ ತಲುಪಿದೆ ಎಂದು ಹೇಳಿದರು.

ಸದ್ಯ ಪರಿಸ್ಥಿತಿ ಬದಲಾಗಿದೆ. ಬೀದರ್ ಶಿಕ್ಷಣ ಕ್ಷೇತ್ರದಲ್ಲಿ ತೀವ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಪರಿಣಾಮವಾಗಿ, ಬೆಂಗಳೂರು, ಮೈಸೂರು, ಮಂಗಳೂರಿನ ವಿದ್ಯಾರ್ಥಿಗಳು ಬೀದರ್‌ನತ್ತ ತಿರುಗಿ ನೋಡುತ್ತಿದ್ದಾರೆ. ಬರುವ ವರ್ಷಗಳಲ್ಲಿ ಬೀದರ್ ಶೈಕ್ಷಣಿಕವಾಗಿ ಉತ್ತುಂಗಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.