ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮಾರ್ಗಸೂಚಿಯಂತೆ ಸರಳ ಜಯಂತಿ

ಡಾ.ಚನ್ನಬಸವ ಪಟ್ಟದ್ದೇವರ 131ನೇ ಜಯಂತ್ಯುತ್ಸವ ಪೂರ್ವಭಾವಿ ಸಭೆ
Last Updated 10 ಡಿಸೆಂಬರ್ 2020, 5:24 IST
ಅಕ್ಷರ ಗಾತ್ರ

ಭಾಲ್ಕಿ: ಇಲ್ಲಿನ ಹಿರೇಮಠ ಸಂಸ್ಥಾನದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 131ನೆಯ ಜಯಂತ್ಯುತ್ಸವ ನಿಮಿತ್ತ ಬುಧವಾರ ಪೂರ್ವಭಾವಿ ಸಭೆ ಜರುಗಿತು.

ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಕೋವಿಡ್ ಮಾರ್ಗಸೂಚಿಯಂತೆ ಡಿ.22 ರಂದು ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯಲ್ಲಿ, ನಾಡಿನ ವಿವಿಧ ಪೂಜ್ಯರ ಸಮ್ಮುಖದಲ್ಲಿ ಪಟ್ಟದ್ದೇವರ 131ನೇ ಜಯಂತ್ಯುತ್ಸವ ಜರುಗಲಿದೆ’ ಎಂದು ತಿಳಿಸಿದರು.

‘ಡಾ.ಚನ್ನಬಸವ ಪಟ್ಟದ್ದೇವರು 109 ವರ್ಷಗಳ ಕಾಲ ಗಂಧದಂತೆ ಬದುಕು ಸವೆಸಿ ನಡೆದಾಡುವ ದೇವರಾಗಿ ಈ ಭಾಗಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅಂತವರ ಜೀವನ, ಸಾಧನೆ ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿವರ್ಷ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಜಯಂತ್ಯುತ್ಸವ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ, ಈ ವರ್ಷ ಕೋವಿಡ್-19 ಹರಡುವಿಕೆ ಭೀತಿ ಇರುವುದರಿಂದ ಸರಳವಾಗಿ ಜಯಂತಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.

‘ಜಯಂತ್ಯುತ್ಸವ ಅಂಗವಾಗಿ ಡಿ.14ರಿಂದ 21ರ ವರೆಗೆ ಚನ್ನಬಸವಾ ಶ್ರಮದಲ್ಲಿ ಬೆಳಿಗ್ಗೆ 6ರಿಂದ 7 ಗಂಟೆ ವರೆಗೆ ಯೋಗ, 8ರಿಂದ 9 ಗಂಟೆವರೆಗೆ ಪಟ್ಟಣದ ನಾನಾ ಬಡಾವಣೆಗಳಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಪ್ರತಿದಿನ ಸಂಜೆ 5 ರಿಂದ 6 ಗಂಟೆ ವರೆಗೆ ಚನ್ನಬಸವಾಶ್ರಮದಲ್ಲಿ ಸುಖಿ ಜೀವನದ ಸೂತ್ರಗಳು ವಿಷಯದ ಕುರಿತು ಪ್ರವಚನ ನಡೆಯಲಿದ್ದು, ನಿರಂಜನ ಸ್ವಾಮೀಜಿ ಅವರು ಪ್ರವಚನ ನಡೆಸಿ ಕೊಡಲಿದ್ದಾರೆ’ ಎಂದು ವಿವರಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ತಾಲ್ಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ಪ್ರಮುಖರಾದ ಸಿಕ್ರೇಶ್ವರ ಶೆಟಕಾರ್, ಶಿವಾನಂದ ಗುಂದಗಿ, ಶರಣಪ್ಪ ಬಿರಾದಾರ, ಜಿ.ಆರ್.ವಾಲಿ, ಸಂತೋಷ ಬಿಜಿ ಪಾಟೀಲ, ಬಸವರಾಜ ಮರೆ, ಸಂತೋಷ ಹಡಪದ, ಸುರೇಶ ಪುರವಂತ, ಶಾಂತಯ್ಯ ಸ್ವಾಮಿ, ಶಿವಪುತ್ರ ದಾಬಶೆಟ್ಟೆ ಇದ್ದರು.

ಬಸವಜ್ಯೋತಿ ಪಾದಯಾತ್ರೆ

ಡಾ.ಚನ್ನಬಸವ ಪಟ್ಟದ್ದೇವರ 131ನೇ ಜಯಂತ್ಯುತ್ಸವ ನಿಮಿತ್ತ ಡಿ.12 ರಂದು ಪಟ್ಟದ್ದೇವರ ಹುಟ್ಟೂರಾದ ಕಮಲನಗರದಿಂದ ಬಸವಜ್ಯೋತಿ ಪಾದಯಾತ್ರೆ ನಡೆಯಲಿದ್ದು, ಡಿ.13ರಂದು ಭಾಲ್ಕಿಗೆ ತಲುಪಲಿದೆ.

ಸಿ.ಸೋಮಶೇಖರಗೆ ಪಟ್ಟದ್ದೇವರು ಕಾಯಕ ಪ್ರಶಸ್ತಿ

ಭಾಲ್ಕಿ: ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ.ಸಿ.ಸೋಮಶೇಖರ ಅವರು ಲಿಂ. ಡಾ.ಚನ್ನಬಸವ ಪಟ್ಟದ್ದೇವರು ಕಾಯಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯು ₹11 ಸಾವಿರ ನಗದು, ಪ್ರಮಾಣ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ. ಡಿ.22ರಂದು ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಿ.ಸೋಮಶೇಖರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಜನಿಸಿದ್ದಾರೆ. ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಕನ್ನಡದಲ್ಲಿ ಉತ್ತರಿಸಿದ ಪ್ರಪ್ರಥಮ ಕನ್ನಡಿಗ ಇವರಾಗಿರುವುದು ಇಡೀ ಕನ್ನಡ ನಾಡಿಗೆ ಅಭಿಮಾನದ ಸಂಗತಿ.

ಕರ್ನಾಟಕ ಸರ್ಕಾರದ ಯುವಜನ ಸೇವಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ, ಕ್ರೀಡಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಾಗ್ಮಿ, ಸಾಹಿತಿಯಾಗಿ ಹೆಸರು ವಾಸಿಯಾಗಿರುವ ಇವರು ದಕ್ಷ ಆಡಳಿತದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಇವರ ವಚನಗಳಲ್ಲಿ ಸಾಮಾಜಿಕ ಚಿಂತನೆ ಪ್ರೌಢ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಿ.ಲಿಟ್ ಪದವಿ ನೀಡಿದೆ.

ಬಸವ ವೇದಿಕೆ ಎಂಬ ಸಂಸ್ಥೆಯನ್ನು ಕಟ್ಟಿ ಪ್ರತಿ ವರ್ಷ ಬಸವತತ್ವ ಪ್ರಸಾರ ಮಾಡುವ ಸಾಧಕರಿಗೆ ಬಸವಶ್ರೀ ಪುರಸ್ಕಾರ ನೀಡುತ್ತಾ ಬಂದಿದ್ದಾರೆ. ಇವರ ಸಮಗ್ರ ಕಾರ್ಯವನ್ನು ಪರಿಗಣಿಸಿ ಪ್ರಸಕ್ತ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರು ಕಾಯಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT