ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ | ಬೀದರ್‌: ಲಾಡ್ಜ್‌ನಲ್ಲಿ ಬಂಧಿಯಾಗಿರುವ 17 ಕಾರ್ಮಿಕರು

ಜಿಲ್ಲೆಯಲ್ಲಿ ಸಿಲುಕಿಕೊಂಡ ವಿವಿಧ ರಾಜ್ಯಗಳ ಕುಶಲಕರ್ಮಿಗಳು
Last Updated 1 ಮೇ 2020, 3:41 IST
ಅಕ್ಷರ ಗಾತ್ರ

ಬೀದರ್‌: ಉದ್ಯೋಗ ಅರಸಿ ಉತ್ತರ ಭಾರತದಿಂದ ಬೀದರ್‌ಗೆ ಬಂದಿದ್ದ 17 ಕಾರ್ಮಿಕರು ಲಾಕ್‌ಡೌನ್‌ ನಂತರ ಇಲ್ಲಿಯ ಖಾಸಗಿ ಲಾಡ್ಜ್‌ವೊಂದರಲ್ಲಿ ಲಾಕ್‌ ಆಗಿದ್ದಾರೆ. ಜಿಲ್ಲಾಡಳಿತದ ಸಿಬ್ಬಂದಿ ಒಂದು ಬಾರಿ 10 ದಿನಗಳ ಅಕ್ಕಿ ಹಾಗೂ ಬೇಳೆ ಕೊಟ್ಟು ಹೋದ ನಂತರ ಮತ್ತೆ ಇತ್ತ ಸುಳಿದಿಲ್ಲ.

ಲಾಡ್ಜ್‌ನಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಿಂದ ಬಂದಿರುವ ಬಹುತೇಕ ಮಿಕ್ಸರ್‌ ದುರಸ್ತಿ ಮಾಡುವವರು, ಕಸಬರಿಕೆ ಮಾರಾಟ ಮಾಡುವವರು ಹಾಗೂ ಇನ್ನಿತರ ಸಣ್ಣಪುಟ್ಟ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರೇ ಇದ್ದಾರೆ. ಅವರಿಗೆ ಹತ್ತು ದಿನಗಳಿಂದ ಎರಡು ಹೊತ್ತು ಸರಿಯಾಗಿ ಊಟ ದೊರಕುತ್ತಿಲ್ಲ. ಲಾಡ್ಜ್‌ ಮುಂದೆ ಯಾರಾದರೂ ಹಾದು ಹೋದರೂ ದಾನಿಗಳು ಬಂದಿರಬಹುದು ಎನ್ನುವ ಆಸೆಗಣ್ಣಿನಿಂದ ಹೊರಗಡೆ ನೋಡುತ್ತಿದ್ದಾರೆ.

‘ನಾನು ಪ್ರತಿ ವರ್ಷ ಇಲ್ಲಿಗೆ ಬಂದು ಹೋಗುತ್ತೇನೆ. ಈ ಬಾರಿ ಲಾಕ್‌ಡೌನ್‌ನಿಂದಾಗಿ ಮೂವರು ಇಲ್ಲಿ ಸಿಲುಕಿಕೊಂಡಿದ್ದೇವೆ. ಲಾಡ್ಜ್‌ನಲ್ಲಿ ವಾಸವಾಗಿರುವ ಕಾರಣ ಅಧಿಕಾರಿಗಳು ನಮ್ಮನ್ನು ಸ್ಥಿತಿವಂತರೆಂದು ಭಾವಿಸಿದ್ದಾರೆ. ಆದರೆ, ಕೆಲಸ ಮಾಡಿದ ಮೇಲೆಯೇ ನಮ್ಮ ಹೊಟ್ಟೆ ತುಂಬುತ್ತದೆ. ಸದ್ಯ ನಮಗೆ ಒಂದು ಬಾಟಲಿ ನೀರು ಕೊಡುವವರೂ ಇಲ್ಲ’ ಎಂದು ಔರಂಗಾಬಾದ್‌ನ ಸಲೀಂ ಅಳಲು ತೋಡಿಕೊಂಡರು.

‘ನಾನು ನನ್ನ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಕಸಬರಿಕೆ ಮಾರಾಟ ಮಾಡಲು ಬಂದು ಬೀದರ್‌ನಲ್ಲಿ ಸಿಲುಕಿಕೊಂಡಿದ್ದೇನೆ. ದಾನಿಗಳು ಏಪ್ರಿಲ್‌ 11 ರಂದು ಒಂದಿಷ್ಟು ಅಕ್ಕಿ ಹಾಗೂ ಬೇಳೆಕಾಳು ಕೊಟ್ಟು ಹೋಗಿದ್ದಾರೆ. ಸ್ಟೌ ಮೇಲೆ ಉಪ್ಪು, ಖಾರ ಹಾಕಿ ಅಡಿಗೆ ಮಾಡಿಕೊಂಡಿದ್ದೇವೆ. ಈಗ ನಮ್ಮ ಬಳಿ ಏನೂ ಇಲ್ಲ’ ಎಂದು ಕೊಲ್ಕತ್ತದ ಹಾಸೀಂ ಹೇಳಿದರು.

‘ನಮಗೆ ಹಸಿವಾದರೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೀರು ಕುಡಿದು ಮಲಗಬಹುದು. ಏನೂ ಅರಿಯದ ಈ ಮಕ್ಕಳಿಗೆ ಏನು ಹೇಳಲಿ‘ ಎಂದು ಕೊಂಕಳಲ್ಲಿದ್ದ ಮಗುವನ್ನು ತೋರಿಸುತ್ತ ಮಹಿಳೆ ಕಣ್ಣೀರು ಹಾಕಿದರು.

‘ನಮ್ಮ ಬಳಿ ಇದ್ದ ಸೀಮೆ ಎಣ್ಣೆ ಮುಗಿದಿದೆ. ಗ್ಯಾಸ್‌ ಸಿಲಿಂಡರ್‌ ತರುವ ಶಕ್ತಿ ನಮಗಿಲ್ಲ. ಕಾಗದದ ಚೂರುಗಳನ್ನು ಬಳಸಿ ಅಡುಗೆ ಮಾಡಬೇಕೆಂದರೂ ಶೇಂಗಾ ಎಣ್ಣೆ ಇಲ್ಲ. ದಯವಿಟ್ಟು ಜಿಲ್ಲಾಡಳಿತ ವತಿಯಿಂದ ನಮಗೆ ಸಹಾಯ ಮಾಡಿಸಿ’ ಎಂದು ಕೈಮುಗಿದು ಕೇಳಿಕೊಂಡರು.

‘ನಮ್ಮ ಲಾಡ್ಜ್‌ನಲ್ಲಿ ಒಂದು ತಿಂಗಳಿಂದ 17 ಜನರು ವಾಸವಾಗಿದ್ದಾರೆ. ಸಂಕಷ್ಟದಲ್ಲಿರುವ ಕಾರಣ ಮಾಲೀಕರು ಅವರಿಂದ ಕೊಠಡಿಯ ಬಾಡಿಗೆಯನ್ನೂ ಪಡೆದಿಲ್ಲ. ಲಾಕ್‌ಡೌನ್‌ ಮುಗಿಯುವ ವರೆಗೂ ಇಲ್ಲಿಯೇ ಇರುವಂತೆ ಹೇಳಿ ಆಶ್ರಯ ಒದಗಿಸಿದ್ದಾರೆ’ ಎಂದು ಲಾಡ್ಜ್‌ನ ವ್ಯವಸ್ಥಾಪಕ ವಿಜಯಕುಮಾರ ತಿಳಿಸಿದರು.

ಈ ಕುಶಲಕರ್ಮಿಗಳು ಎರಡು ತಿಂಗಳ ಅವಧಿಗೆ ನಗರಕ್ಕೆ ಬಂದಿದ್ದರು. ಕಡಿಮೆ ಅವಧಿಗೆ ಬಾಡಿಗೆ ಮನೆಗಳು ಲಭಿಸುವುದಿಲ್ಲ ಎನ್ನುವ ಕಾರಣಕ್ಕೆ ಲಾಡ್ಜ್‌ಗಳಲ್ಲಿ ಉಳಿದುಕೊಂಡಿದ್ದರು.
ಇಲ್ಲಿಗೆ ಬಂದ ಒಂದು ವಾರದಲ್ಲೇ ಲಾಕ್‌ಡೌನ್‌ ಘೋಷಣೆ ಆಯಿತು. ಮರಳಿ ಊರಿಗೆ ಹೋಗಲಾಗದೆ ಇಲ್ಲಿ ಉಳಿದುಕೊಂಡಿದ್ದಾರೆ.

ಊರಿನಿಂದ ಬರುವಾಗ ತಂದಿದ್ದ ಹಣ ಖಾಲಿಯಾದ ಮೇಲೆ ಕಂಗಾಲಾಗಿದ್ದಾರೆ. ಬೀದರ್‌ ತಹಶೀಲ್ದಾರ್‌ ರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಅವರಿಂದ ಸರಿಯಾದ ಸ್ಪಂದನೆ ದೊರೆಯದಿದ್ದಾಗ ಸಾಮಾಜಿಕ ಸಂಘಟನೆಗಳ ಮೊರೆ ಹೋಗಿದ್ದರು. ಓಲ್ಡ್‌ಸಿಟಿಯ ಎಚ್‌ಆರ್‌ಎಸ್‌ ಆರಂಭದಲ್ಲಿ ಅವರಿಗೆ ಸಹಾಯ ಮಾಡಿದೆ.ಈಗ ಯಾರೊಬ್ಬರೂ ಸಹಾಯಕ್ಕೆ ಬರುತ್ತಿಲ್ಲ.

..........BOx-1


ಖಾಸಗಿ ಕಂಪನಿಗಳ ನೆರವು
ಬೀದರ್‌ ತಾಲ್ಲೂಕಿನ ಕೊಳಾರ ಕೈಗಾರಿಕೆ ಪ್ರದೇಶದಲ್ಲಿ 100, ಬಸವಕಲ್ಯಾಣದ ಅನುಭವ ಮಂಟಪದಲ್ಲಿ 8, ಭಾಲ್ಕಿಯಲ್ಲಿ 12 ಹೀಗೆ ಕೈಗಾರಿಕೆಗಳು ಇರುವ ಪ್ರದೇಶಗಳಲ್ಲಿ ಒಟ್ಟು 340 ಜನ ಕಾರ್ಮಿಕರು ಅಲ್ಲಲ್ಲಿ ಉಳಿದುಕೊಂಡಿದ್ದಾರೆ.
ಕೆಲವು ಫ್ಯಾಕ್ಟರಿಗಳ ಮಾಲೀಕರು ತಮ್ಮ ಉಚಿತ ಊಟ ಕೊಟ್ಟು ಫ್ಯಾಕ್ಟರಿಗಳಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಲಾಕ್‌ಡೌನ್‌ ನಂತರ ಇಲ್ಲಿ ಉಳಿದುಕೊಳ್ಳಲು ಆಗದ, ಊರಿಗೂ ಮರಳಲಾಗದ ಸ್ಥಿತಿಯಲ್ಲಿ ಇದ್ದಾರೆ.

........BOX-2........

ಕಾರ್ಮಿಕರ ನೆರವಿಗೆ ನಿಂತ ಜಿಲ್ಲಾಡಳಿತ


ಬೀದರ್‌: ಜಿಲ್ಲಾಡಳಿತ ಶಹಾಪುರ ಗೇಟ್‌ ಸಮೀಪದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಪ್ರಸ್ತುತ ಮಧ್ಯಪ್ರದೇಶದ 16, ತಮಿಳುನಾಡಿನ 17, ಛತ್ತಿಸಗಡ ಹಾಗೂ ತುಮಕೂರಿನ ತಲಾ ಒಬ್ಬರು ಹೀಗೆ ಒಟ್ಟು 39 ಜನರಿಗೆ ಆಶ್ರಯ ಒದಗಿಸಿದೆ. ಇವರನ್ನು ಹೊರತು ಪಡಿಸಿ 33 ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸಿಕೊಟ್ಟಿದೆ.

ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ ನಂತರ ತೆಲಂಗಾಣ, ಮಧ್ಯಪ್ರದೇಶಕ್ಕೆ ನಡೆದುಕೊಂಡು ಹೊರಟಿದ್ದ ಕಾರ್ಮಿಕರನ್ನು ತಡೆದು ಮೊದಲು ಸಮುದಾಯ ಭವನದಲ್ಲಿ ಇಡಲಾಗಿತ್ತು. ಅಂತರ ರಾಜ್ಯ ಪ್ರವೇಶ ನಿರ್ಬಂಧಿಸಿದ ನಂತರ ವಸತಿ ನಿಲಯದಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗಿದೆ.

‘ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಸಾಬೂನು, ಟೂತ್ ಪೇಸ್ಟ್ ಹಾಗೂ ಬ್ರಶ್ ಕೊಡಲಾಗಿದೆ. ಗುರುದ್ವಾರ ಹಾಗೂ ಇಂದಿರಾ ಕ್ಯಾಂಟೀನ್‌ ಮೂಲಕ ಎರಡು ಹೊತ್ತು ಊಟ, ಉಪಾಹಾರ ಕೊಡಲಾಗುತ್ತಿದೆ’ ಎಂದು ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟಪ್ಪಗೋಳ ಹೇಳುತ್ತಾರೆ.

‘ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳಿಸಿಕೊಡಲು ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಜಿಲ್ಲಾಡಳಿತಕ್ಕೆ ಇನ್ನಷ್ಟು ಮಾರ್ಗಸೂಚಿಗಳು ಬರಬೇಕಿದೆ. ಶೀಘದಲ್ಲಿ ಅವರನ್ನು ಊರಿಗೆ ಕಳಿಸಿಕೊಡಲು ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT