ನೆಲವಾಡ(ಜನವಾಡ): ಕಾರಂಜಾ ನೀರಾವರಿ ಯೋಜನೆ ಪುನರ್ವಸತಿ ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ₹20 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ತಾಲ್ಲೂಕಿನ ನೆಲವಾಡ ಗ್ರಾಮದಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತಾವಕ್ಕೆ ಸರ್ಕಾರದಿಂದ ಆದಷ್ಟು ಬೇಗ ಮಂಜೂರಾತಿ ಪಡೆದು, ಕಾಮಗಾರಿ ಆರಂಭಿಸುವ ದಿಸೆಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಾರಂಜಾ ಮುಳುಗಡೆ ಪ್ರದೇಶ ಹೆಚ್ಚು ಇದೆ. ಪುನರ್ವಸತಿ ಗ್ರಾಮಗಳ ಜನ ಎದುರಿಸುತ್ತಿರುವ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಕಾರಂಜಾ ಯೋಜನೆಗೆ ಭೂಮಿ ಒದಗಿಸಿದ ರೈತರಿಗೆ ಪರಿಹಾರ ನೀಡಿಕೆಯಲ್ಲಿ ಅನ್ಯಾಯ ಆಗಿದೆ. ಇದನ್ನು ಸರಿಪಡಿಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಲಾಗುತ್ತಿದೆ. ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಕಲ್ಪಿಸುವುದು ಸೇರಿ ವಿವಿಧ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊರೆಸಲಾದ ಕೊಳವೆಬಾವಿ ಹಾಗೂ ಗ್ರಾಮದಲ್ಲಿ ₹20 ಲಕ್ಷ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಅವರು ಚಾಲನೆ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಸದಾನಂದ ಜೋಶಿ, ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ಗುರುನಾಥ ಎಂ. ರಾಜಗೀರಾ, ಮುಖಂಡರಾದ ಶಿವಕುಮಾರ ಸ್ವಾಮಿ, ಅಶೋಕ ಪಾಟೀಲ, ಅಶೋಕ ಉದಗಿರೆ, ರಾಜಕುಮಾರ ಸೋಶೆಟ್ಟಿ, ನಾಗಮ್ಮ ರಾಜಕುಮಾರ ಇದ್ದರು.