ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಜನಾಂಗದ ಶಾಂತಿಯ ತೋಟಕ್ಕೆ ಚ್ಯುತಿ ಬಾರದಿರಲಿ: ಬಸವಲಿಂಗ ಪಟ್ಟದ್ದೇವರ

21ನೇ ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಆಶಯ
Published 9 ಮಾರ್ಚ್ 2024, 14:18 IST
Last Updated 9 ಮಾರ್ಚ್ 2024, 14:18 IST
ಅಕ್ಷರ ಗಾತ್ರ

ಬೀದರ್‌: ‘ಅಸಮಾನತೆ, ಅಂಧಶ್ರದ್ಧೆ, ಮೂಢನಂಬಿಕೆ, ಜಾತೀಯತೆ, ಹಿಂದೂ–ಮುಸ್ಲಿಂ, ದಲಿತ–ಸವರ್ಣೀಯರ ಸಂಘರ್ಷ ಕೊನೆಗೊಳ್ಳಬೇಕು. ಶಾಂತಿ, ಸೌಹಾರ್ದತೆ ನೆಲೆಸಬೇಕು. ಸರ್ವಜನಾಂಗದ ಶಾಂತಿಯ ತೋಟವೆಂಬ ಕವಿವಾಣಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಕನ್ನಡಿಗರ ಕರ್ತವ್ಯ’

-ಇದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಮಾತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 21ನೇ ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.

ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಹೆಮ್ಮೆಯ ಸಂಗತಿ. ಇದರ ಜೊತೆಗೆ ಶರಣರ ಜೀವನ ಚರಿತ್ರೆ ಹಾಗೂ ವಚನ ಸಾಹಿತ್ಯವನ್ನು ಎಲ್ಲ ತರಗತಿಯ ಮಕ್ಕಳ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು. ಬಸವಣ್ಣನವರ ಕಾಯಕ-ದಾಸೋಹ, ಸಮತೆ, ವೈಚಾರಿಕತೆ, ಮಾನವೀಯತೆ ಮುಂತಾದ ಮೌಲ್ಯಗಳ ಪ್ರಜ್ಞೆಯನ್ನು ಹೆಚ್ಚಿಸುವಂತಾಗಬೇಕು ಎಂದರು.

ಶರಣರು ಬೋಧಿಸಿದ ಮೌಲ್ಯಗಳನ್ನು ಯುವಕರಲ್ಲಿ ಬಿತ್ತುವುದಕ್ಕಾಗಿ ಸರ್ಕಾರವು ರಾಜ್ಯದ ಎಲ್ಲಾ ಶಾಲಾ– ಕಾಲೇಜುಗಳಲ್ಲಿ ವಚನ ಸಾಹಿತ್ಯ ಅರಿವು ಅಭಿಯಾನ ಕೈಗೊಳ್ಳಬೇಕು. ಜಾಗತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಅದನ್ನು ಅನ್ಯಭಾಷೆಗೆ ಅನುವಾದಿಸುವ ಅದರ ಕುರಿತು ಸಂಶೋಧನೆ ನಡೆಸುವುದಕ್ಕಾಗಿ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆಗೆ ಈಗಾಗಲೇ ಸಿ.ಎಂ. ಸಮ್ಮತಿ ಸೂಚಿಸಿದ್ದು ಹರ್ಷದ ವಿಚಾರ ಎಂದು ಹೇಳಿದರು.

ವಚನ ಸಾಹಿತ್ಯ ಜಗತ್ತಿನ ಎಲ್ಲ ಭಾಷೆಗಳಲ್ಲಿ ಅನುವಾದ ಆಗಬೇಕು. ಅನುವಾದದ ಮೂಲಕ ಕನ್ನಡದ ವಚನ ಸಂಸ್ಕೃತಿ ವೈಶ್ವಿಕ ಸಂಸ್ಕೃತಿಯಾಗಿ ಬೆಳೆಯಲು ಸಾಧ್ಯವಿದೆ. ಜೊತೆಗೆ ಕನ್ನಡದ ಜೀವಪರ, ಜನಪರ ಚಿಂತನೆಯ ಸರ್ವಶ್ರೇಷ್ಠ ಕೃತಿಗಳನ್ನು ಈ ದೇಶದ ಅನ್ಯಭಾಷೆಗಳಲ್ಲಿ ಭಾಷಾಂತರಗೊಳ್ಳಬೇಕು. ಅನ್ಯಭಾಷೆಯಲ್ಲಿದ್ದ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಅನುವಾದ ಆಗಬೇಕು. ನಮ್ಮ ಭಾಷೆ, ಸಂಸ್ಕೃತಿ ಮತ್ತಷ್ಟು ಸಮೃದ್ಧಗೊಳ್ಳುತ್ತದೆ ಎಂದರು.

ಕನ್ನಡಿಗರಾದ ನಮಗೆ ನಮ್ಮ ನೆಲದ ಮಹಾಪುರುಷರು, ನಾಯಕರು ಆದರ್ಶವಾಗಬೇಕು. ನಮ್ಮ ಆದರ್ಶಗಳು ಉತ್ತರದ ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಪರಿಚಯಿಸುವ ಕಾರ್ಯ ಆಗಬೇಕು. ಉತ್ತರ ಭಾರತದ ಆದರ್ಶಗಳಾದ ರಾಮ, ಕೃಷ್ಣ, ಕಬೀರ, ಮೀರಾಬಾಯಿ, ಝಾನ್ಸಿರಾಣಿ ಇವರನ್ನು ನಾವು ಓದುತ್ತೇವೆ. ಅಂದಮೇಲೆ ನಮ್ಮ ಬಸವಣ್ಣ, ಅಕ್ಕಮಹಾದೇವಿ, ಕುವೆಂಪು, ಕಿತ್ತೂರು ರಾಣಿ ಚನ್ನಮ್ಮ, ಸಂಗೋಳ್ಳಿ ರಾಯಣ್ಣ, ಕಂಬಳಿ ಸಿದ್ಧಪ್ಪ ಮೊದಲಾದವರನ್ನು ಅವರು ಯಾಕೆ ಓದಬಾರದು ಎಂದು ಪ್ರಶ್ನಿಸಿದರು.

ಕನ್ನಡಿಗರು ಉಳಿದರೆ ಕನ್ನಡ ಉಳಿಯುತ್ತದೆ. ಆದ್ದರಿಂದ ಕನ್ನಡಿಗರ ಆರ್ಥಿಕ ಅಭಿವೃದ್ಧಿಪರ ಕಾರ್ಯ ಯೋಜನೆಗಳನ್ನು ರೂಪಿಸಬೇಕು. ಈ ದೇಶ ಹಳ್ಳಿಗರ ದೇಶವಾದಂತೆ ಕೃಷಿ ಪ್ರಧಾನವಾದ ದೇಶವಾಗಿದ್ದು ಕೃಷಿಕರಿಗೆ, ಕೃಷಿಗೆ ಮೊದಲ ಆದ್ಯತೆ ನೀಡಬೇಕು. ವಿಶೇಷವಾಗಿ ರೈತರು ಬೆಳೆದ ಬೆಳೆಗೆ ಬೆಲೆ ನಿಗದಿಯಾಗಬೇಕು. ರೈತರ ಆತ್ಮಹತ್ಯೆ ಎಂದರೆ ಅದು ಕೃಷಿ ಆತ್ಮಹತ್ಯೆಯೂ ಹೌದು. ಅದು ಆಹಾರದ ಆತ್ಮಹತ್ಯೆಯೂ ಹೌದು. ಆದಕಾರ ರೈತರ ಆತ್ಮಹತ್ಯೆ ತಡೆಗಟ್ಟಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರವು ಸಂಸತ್ತಿನ ಒಂದು ಅಧಿವೇಶನವನ್ನು ಕರ್ನಾಟಕದಲ್ಲಿ ಏಕೆ ನಡೆಸಬಾರದು. ಈ ದಿಶೆಯಲ್ಲಿ ರಾಜಕೀಯ ಗಣ್ಯರು, ಪ್ರಜ್ಞಾವಂತ ಕನ್ನಡಿಗರು ಯೋಚಿಸಬೇಕು. ಕೇಂದ್ರ ಸರ್ಕಾರದ ಮೇಲೆ ಯಾವಾಗಲೂ ಉತ್ತರದ ಪ್ರಭಾವ ಹಾಗೂ ಪ್ರತಿನಿಧಿತ್ವ ಹೆಚ್ಚಾಗಿರುತ್ತದೆ. ಅದನ್ನೆ ಬಳಸಿಕೊಂಡು ಅವರು ನಮ್ಮ ಮೇಲೆ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತಾರೆ. ದಕ್ಷಿಣದ ರಾಜ್ಯಗಳಲ್ಲಿ ರಾಷ್ಟ್ರೀಯ ನಾಯಕತ್ವ ಬೆಳೆಯಬೇಕು. ಅಂದಾಗಲೇ ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ ರಾಷ್ಟ್ರಮಟ್ಟದಲ್ಲಿ, ಜಾಗತಿಕ ಮಟ್ಟದಲ್ಲಿ ಪ್ರಸಾರ ಆಗುತ್ತದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ರಂಗಮಂದಿರಗಳು ಆಗಬೇಕು. ಗಡಿಭಾಗದ ಕನ್ನಡ ಶಾಲೆಗಳಿಗೆ ಸರ್ಕಾರ ವಿಶೇಷ ಅನುದಾನ ನೀಡುವ ಮೂಲಕ ಕನ್ನಡದ ಕೋಟೆ ಭದ್ರಗೊಳಿಸಬೇಕು. ಗಡಿನಾಡು ಪ್ರಾಧಿಕಾರಕ್ಕೆ ಗಡಿಭಾಗದ ಕನ್ನಡಾಭಿಮಾನಿ ಹೋರಾಟಗಾರರನ್ನೇ ನೇಮಿಸಬೇಕು. ಸಾಹಿತ್ಯ, ಸಂಸ್ಕೃತಿ, ನೆಲ, ಜಲ ಕುರಿತು ಪ್ರಾಧಿಕಾರಗಳು, ಸಂಘ ಸಂಸ್ಥೆಗಳಿಗೆ ಗಡಿಭಾಗ ಬೀದರ್‌ ಜಿಲ್ಲೆಯ ಸಾಹಿತಿ, ಚಿಂತಕರನ್ನು ನೇಮಕ ಮಾಡಬೇಕು ಎಂದು ತಮ್ಮ ಭಾಷಣದುದ್ದಕ್ಕೂ ಗಡಿ ಜಿಲ್ಲೆ, ಕನ್ನಡ ಭಾಷೆ, ಸಂಸ್ಕೃತಿ ಬೆಳೆಸಲು ಒತ್ತು ಕೊಡಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಈಶ್ವರ ಬಿ. ಖಂಡ್ರೆ, ಬೀದರ್‌ ಜಿಲ್ಲೆ ಕರ್ನಾಟಕದಲ್ಲಿ ಉಳಿಯಬೇಕಾದರೆ ಅದಕ್ಕೆ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ಕಾರಣೀಕರ್ತರು. ನಿಜಾಮನ ಆಳ್ವಿಕೆಯಲ್ಲಿ ಹೊರಗೆ ಉರ್ದು ಬೋರ್ಡ್‌ ಹಾಕಿ ಒಳಗೆ ಕನ್ನಡ ಕಲಿಸಿ, ಅದನ್ನು ಬೆಳೆಸಿದ್ದರು. ಅವರ ಮಾರ್ಗದಲ್ಲಿಯೇ ಬಸವಲಿಂಗ ಪಟ್ಟದ್ದೇವರು ಮುನ್ನಡೆಯುತ್ತಿದ್ದಾರೆ. ಮಹಾರಾಷ್ಟ್ರ, ತೆಲಂಗಾಣದಲ್ಲಿ ಬಸವತತ್ವ ಪ್ರಸಾರ ಮಾಡುತ್ತಿದ್ದಾರೆ. 36 ಕೃತಿಗಳನ್ನು ರಚಿಸಿದ್ದಾರೆ. 4 ಕೃತಿಗಳು ಪ್ರಕಟಗೊಳ್ಳಲು ಸಿದ್ಧವಾಗಿವೆ. ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆಯಾಗಲು ಅವರ ಶ್ರಮ ಇದೆ ಎಂದು ಹೊಗಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಮನು ಬಳಿಗಾರ ಸಮ್ಮೇಳನವನ್ನು ಉದ್ಘಾಟಿಸಿ, ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನೆರೆಯ ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕಕ್ಕೆ ಬಹಳ ಕಡಿಮೆ ಅನುದಾನ ಸಿಗುತ್ತಿದೆ. ಅದರ ವಿರುದ್ಧ ಧ್ವನಿ ಎತ್ತಬೇಕಿದೆ ಎಂದರು.

ಹಾರಕೂಡದ ಚನ್ನವೀರ ಶಿವಾಚಾರ್ಯರು ಮಾತನಾಡಿ, ಈ ನಾಡಿನಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಬಸವಲಿಂಗ ಪಟ್ಟದ್ದೇವರ ಕೊಡುಗೆ ಅಪಾರವಿದೆ ಎಂದರು.

ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಪೌರಾಡಳಿತ ಸಚಿವ ರಹೀಂಖಾನ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಪರಿಷತ್ ಧ್ವಜ ಹಸ್ತಾಂತರಿಸಿದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಪುಸ್ತಕ ಬಿಡುಗಡೆಗೊಳಿಸಿದರು.

ಆಣದೂರಿನ ಭಂತೇಜಿ, ಬಿಡಿಎ ನೂತನ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸೊದ್ದಿನ್, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಹಂಗರಗಿ, ಸ್ವಾಗತ ಸಮಿತಿ ಕೋಶಾಧ್ಯಕ್ಷ ಬಾಬುವಾಲಿ, ಪ್ರಮುಖರಾದ ಮಲ್ಲಮ್ಮ ಆರ್. ಪಾಟೀಲ, ರಾಜೇಂದ್ರಕುಮಾರ ಗಂದಗೆ, ಟಿ.ಎಂ. ಮಚ್ಚೆ, ಶಿವಶಂಕರ ಟೋಕರೆ, ಬಸವರಾಜ ಬಲ್ಲೂರ ಇತರರಿದ್ದರು.

‘ಹಿಂದಿ ಹೇರಿಕೆ ವಿರುದ್ಧ ಸಂಘಟಿತ ಹೋರಾಟ ಅಗತ್ಯ’

ಕೇಂದ್ರ ಸರ್ಕಾರ ರೂಪಿಸಿರುವ ಹೊಸ ರಾಷ್ಟ್ರೀಯ ಶೈಕ್ಷಣಿಕ ನೀತಿಯಲ್ಲಿ ತ್ರಿಭಾಷಾ ಸೂತ್ರ ಸ್ವೀಕರಿಸಿ, ಮಾತೃಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಆಂಗ್ಲ ಮಾಧ್ಯಮಕ್ಕೆ ಆದ್ಯತೆ ನೀಡುತ್ತಿರುವುದು ನಿಲ್ಲಿಸಬೇಕು. ಕೇಂದ್ರ ಸರ್ಕಾರವು ದಕ್ಷಿಣದ ರಾಜ್ಯಗಳ ಮೇಲೆ ಮಾಡುತ್ತಿರುವ ಹಿಂದಿ ಭಾಷೆಯ ಹೇರಿಕೆಯ ನೀತಿಯ ವಿರುದ್ಧ ಸಂಘಟಿತ ಹೋರಾಟ ರೂಪಿಸಬೇಕು ಎಂದು ಬಸವಲಿಂಗ ಪಟ್ಟದ್ದೇವರು ಹೇಳಿದರು.

ಭಾವುಕರಾದ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ

‘ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಅಧ್ಯಕ್ಷರು ಸೇರಿದಂತೆ ಬಹಳ ಜನರ ಪರಿಶ್ರಮದಿಂದ ಕನ್ನಡ ಭವನ ನಿರ್ಮಿಸಲಾಗಿದೆ. ಅದನ್ನು ಉಳಿಸುವ ಕೆಲಸ ಎಲ್ಲರೂ ಮಾಡಬೇಕು. ಯಾರೂ ಊಹಾಪೋಹಗಳಿಗೆ ಕಿವಿಗೊಡಬಾರದು’ ಎಂದು ಹೇಳುತ್ತಲೇ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಭಾವುಕರಾಗಿ ಕಣ್ಣೀರು ಹಾಕಿ ಭಾಷಣ ಮೊಟಕುಗೊಳಿಸಿದರು.

ಇದಕ್ಕೂ ಮುನ್ನ ಅವರು ಮಾತನಾಡಿ, ಕನ್ನಡ ಭವನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದೆ ಎಂದು ಜಿಲ್ಲಾಧಿಕಾರಿಗೆ ಪತ್ರ ಬಂದಿದೆ. ಕಸಾಪ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಎಲ್ಲರ ಶ್ರಮದಿಂದ ಭವನ ಆಗಿದೆ. ಅದಕ್ಕೆ ಸುರೇಶ ಚನ್ನಶೆಟ್ಟಿ ಒಬ್ಬನೇ ಕಾರಣನಲ್ಲ. ಈ ವಿಚಾರವನ್ನು ಸಚಿವ ಈಶ್ವರ ಬಿ. ಖಂಡ್ರೆಯವರ ಗಮನಕ್ಕೆ ತಂದಿದ್ದು, ಅದನ್ನು ಸರಿಪಡಿಸುತ್ತೇನೆ ಎಂಬ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಂಡ್ರೆ, ಈ ಸಂಬಂಧ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೊಂದಿಗೆ ಮಾತನಾಡುತ್ತೇನೆ. ಕಸಾಪ ವ್ಯಾಪ್ತಿಯಲ್ಲಿಯೇ ಭವನ ಇರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಅಭಯ ನೀಡಿದಾಗ ಕರತಾಡನ ಮುಗಿಲು ಮುಟ್ಟಿತ್ತು.

‘ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ, ತಾರತಮ್ಯ’

‘ಜಿಎಸ್ಟಿ ಸೇರಿದಂತೆ ವಿವಿಧ ತೆರಿಗೆ ಮೂಲಕ ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ₹4.30 ಲಕ್ಷ ಕೋಟಿ ಹಣ ಹೋಗುತ್ತದೆ. ಆದರೆ, ಕೇಂದ್ರವು ರಾಜ್ಯಕ್ಕೆ ಕೇವಲ ₹50 ಸಾವಿರ ಕೋಟಿ ನೀಡುತ್ತಿದೆ. ನಮಗಿಂತ ಕಡಿಮೆ ತೆರಿಗೆ ತುಂಬುವ ಉತ್ತರ ಪ್ರದೇಶಕ್ಕೆ ವಾರ್ಷಿಕ ₹2 ಲಕ್ಷ ಕೋಟಿ ನೀಡಲಾಗುತ್ತಿದೆ. ನಮ್ಮ ರಾಜ್ಯದ ನ್ಯಾಯಯುತ ಪಾಲು ನಮಗೆ ಸಿಗುತ್ತಿಲ್ಲ. ಇದರ ಬಗ್ಗೆ ಜಾಗೃತಿ ಮೂಡಬೇಕಿದೆ. ರಾಜ್ಯಕ್ಕೆ ಆಗುತ್ತಿರುವ ತಾರತಮ್ಯ ದೂರವಾಗಬೇಕಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT