ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371 (ಜೆ): 2016ರ ಸುತ್ತೋಲೆ ಪ್ರಕಾರ ನೇಮಕಾತಿ ನಡೆಸಿ–ಈಶ್ವರ ಖಂಡ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯ
Last Updated 19 ಮೇ 2022, 3:12 IST
ಅಕ್ಷರ ಗಾತ್ರ

ಭಾಲ್ಕಿ: ‘ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ 371(ಜೆ) ಸ್ಥಾನಮಾನದಡಿ ನೇಮಕಾತಿಗಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ 2016ರಲ್ಲಿ ಹೊರಡಿಸಿದ್ದ ಸುತ್ತೋಲೆ ಸಮರ್ಪಕವಾಗಿದ್ದು, ಅದರಂತೆ ಎಲ್ಲ ನೇಮಕಾತಿ ನಡೆಸಬೇಕು ಮತ್ತು ದೋಷ ಪೂರಿತವಾಗಿರುವ 2020ರ ಸುತ್ತೋಲೆ ರದ್ದು ಮಾಡಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು ನೇಮಕಾತಿ ವೇಳೆ ಮೆರಿಟ್ ರೀತಿ ಆಯ್ಕೆ ಪಟ್ಟಿ ತಯಾರಿಸುವಾಗ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳನ್ನು ಪರಿಗಣಿಸಬೇಕು. ತದನಂತರ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಎದುರಾಗಿ ಅರ್ಹ ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಮಾಡಬೇಕು. ಆದರೆ 2020ರ ಸುತ್ತೋಲೆ ಇದಕ್ಕೆ ತದ್ವಿರುದ್ಧವಾಗಿದ್ದು, ನೂರಾರು ಹುದ್ದೆಗಳು ಕಲ್ಯಾಣ ಕರ್ನಾಟಕದ ಕೈಬಿಟ್ಟು ಹೋಗುತ್ತಿವೆ ಎಂದು ತಿಳಿಸಿದ್ದಾರೆ.

ಯಾರೂ ಕೇಳದಿ ದ್ದರೂ, ಯಾವುದೇ ಬೇಡಿಕೆ ಇಲ್ಲದಿ ದ್ದರೂ 2016ರ ಸುತ್ತೋಲೆ ತಿದ್ದುಪಡಿ ಮಾಡಿ ದ್ದೇಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದಿದ್ದಾರೆ. 2020ರ ಸುತ್ತೋಲೆ ದೋಷ ಪೂರಿತವಾಗಿದೆ ಎಂಬುದು ಸರ್ಕಾರಕ್ಕೂ ಮನವರಿಕೆಯಾಗಿದೆ. ಅದನ್ನೇ ಮತ್ತೆ ತಿದ್ದುಪಡಿ ಮಾಡಲು ಹೊರಟಿದೆ. ಅದರ ಬದಲು ಸೂಕ್ತ ಮತ್ತು ಸಮರ್ಪಕವಾಗಿರುವ 2016ರ ಸುತ್ತೋಲೆಯನ್ನೇ ಅಂತಿಮಗೊಳಿಸಬೇಕು. ಒಂದು ವಾರದಲ್ಲಿ ಸರ್ಕಾರ ಈ ಬಗ್ಗೆ ಸ್ಪಷ್ಟ ಪಡಿಸದಿದ್ದರೆ, ಕಲ್ಯಾಣ ಕರ್ನಾಟಕದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳದೆ ಲಕ್ಷಾಂತರ ಯುವಕರಿಗೆ ಅನ್ಯಾಯ ಎಸಗುತ್ತಿದೆ. ಖಾಲಿ ಇರುವ ಸರ್ಕಾರಿ ಹುದ್ದೆಗಳ ಕುರಿತಂತೆ ವಿಧಾನಮಂಡಲದಲ್ಲಿ ನೀಡುವ ಅಂಕಿ ಅಂಶಕ್ಕೂ, ಆರ್‌ಟಿಐನಲ್ಲಿ ನೀಡುವ ಅಂಕಿ ಅಂಶಕ್ಕೂ, ಶಾಸಕರಿಗೆ ಇಲಾಖೆಯ ವತಿಯಿಂದ ಒದಗಿಸುವ ಅಂಕಿ ಅಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ರೀತಿ ಸರ್ಕಾರ ಕಣ್ಣಾಮುಚ್ಚಾಲೆ ಏಕೆ ಆಡುತ್ತಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ ಹೊರಗೆ ಕೂಡ ಶೇ 8ರಷ್ಟು ಮೀಸಲನ್ನು 371 ಜೆ ಒದಗಿಸುತ್ತದೆ. ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಭರ್ತಿಯಾಗದ ಖಾಲಿ ಹುದ್ದೆ ಇದ್ದು, ಒಟ್ಟಾರೆ ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳ ಯುವಕರಿಗೆ 50 ಸಾವಿರಕ್ಕೂ ಹೆಚ್ಚು ಹುದ್ದೆಗಳು ಲಭಿಸಬೇಕಾಗುತ್ತದೆ. ಸರ್ಕಾರ ಕೂಡಲೇ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು. ನೇಮಕಾತಿಗೆ 16.11.2016ರ ಸುತ್ತೋಲೆಯೇ ಅಂತಿಮ ಎಂದು ಪ್ರಕಟಿಸಬೇಕು. ಒಂದು ವಾರದೊಳಗೆ ಸರ್ಕಾರ ಆದೇಶ ಹೋರಡಿಸದಿದ್ದರೆ, ಅನಿವಾರ್ಯವಾಗಿ ಹೋರಾಟದ ಮಾರ್ಗ ತುಳಿಯಲಾಗುವುದು, ಕಾಂಗ್ರೆಸ್ ಪಕ್ಷ ಈ ಹೋರಾಟದ ನೇತೃತ್ವ ವಹಿಸುತ್ತದೆ ಎಂದು ಸ್ಪಷ್ಟ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT