ಭಾನುವಾರ, ನವೆಂಬರ್ 28, 2021
20 °C

ಬೀದರ್‌: ಅಂಗವಿಕಲರ ಶೇಕಡ 5ರಷ್ಟು ಅನುದಾನ ಬಳಕೆಗೆ ನಿರ್ಲಕ್ಷ್ಯ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಂಸ್ಥೆಗಳು ಅಂಗವಿಕಲರ ಶೇಕಡ 5 ರಷ್ಟು ಅನುದಾನ ಬಳಕೆಗೆ ನಿರಾಸಕ್ತಿ ತೋರಿಸುತ್ತಿವೆ. ಸರ್ಕಾರ ಅಂಗವಿಕಲರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ರೂಪಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಅಂಗವಿಕಲರನ್ನು ಸಂಕಷ್ಟಕ್ಕೆ ದೂಡಿದೆ.

ಶೇಕಡ 5ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪದೇ ಪದೇ ಸೂಚನೆ ನೀಡಿದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳು ಅಂಗವಿಕಲರಿಗೆ ತಲುಪುತ್ತಿಲ್ಲ.

ಸಮೀಕ್ಷೆ ಪ್ರಕಾರ 21 ಅಂಗವೈಕಲ್ಯಗಳನ್ನು ಗುರುತಿಸಿ ಅಂಗವಿಕಲರ ಪ್ರಮಾಣಪತ್ರ ನೀಡಲಾಗುತ್ತದೆ. ಜಿಲ್ಲೆಯಲ್ಲಿ 16 ಸಾವಿರ ದೈಹಿಕ ಅಂಗವಿಕಲರು, 7 ಸಾವಿರ ಶ್ರವಣ ಮಾಂದ್ಯರು, 6 ಸಾವಿರ ಕುರುಡರು ಹಾಗೂ 4 ಸಾವಿರ ಬುದ್ಧಿ ಮಾಂದ್ಯರು ಸೇರಿ ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕ ಅಂಗವಿಕಲರು ಇದ್ದಾರೆ. ಅವರಿಗೆ ಯೋಜನೆ ತಲುಪಿಸಲು ಹಾಗೂ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು ಈ ದಿಸೆಯಲ್ಲಿ ಪ್ರಯತ್ನ ನಡೆಸಿದರೂ ನಗರ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡುತ್ತಿಲ್ಲ.

ರಾಜ್ಯ ಅಂಗವಿಕಲ ವ್ಯಕ್ತಿಗಳ ಕಚೇರಿ ಆಯುಕ್ತರ ನಿರ್ದೇಶನದಂತೆ ಅಂಗವಿಕಲ ಅಧಿಕಾರಿಗಳು ಸೆಪ್ಟೆಂಬರ್ 6ರಂದು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ ರಾಜ್‌ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳ 34 ಅಧಿಕಾರಿಗಳಿಗೆ ಲಿಖಿತ ಪತ್ರ ಬರೆದು 2020 ಹಾಗೂ 2021ನೇ ಸಾಲಿನ ಗುರಿ, ಮೀಸಲಿಟ್ಟ ಅನುದಾನ ಹಾಗೂ ಸಾಧನೆಯ ಬಗೆಗೆ ತುರ್ತು ಮಾಹಿತಿ ಕೇಳಿದ್ದಾರೆ. ಆದರೆ, ಒಬ್ಬ ಅಧಿಕಾರಿಯೂ ಮಾಹಿತಿ ಪೂರೈಕೆ ಮಾಡಿಲ್ಲ. ಇದು ಅನುದಾನ ಬಳಕೆ ಕಾಯ್ದೆಯನ್ನೇ ಅಣುಕಿಸುವಂತಿದೆ.

‘ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ತಿಂಗಳ ಹಿಂದೆಯೇ ಅನುದಾನ ಬಳಕೆಯ ವಿವರ ಹಾಗೂ ಮಾಹಿತಿ ಕೋರಿ ಪತ್ರ ಬರೆಯಲಾಗಿದೆ. ಇನ್ನೂ ಅಧಿಕಾರಿಗಳಿಂದ ಮಾಹಿತಿ ಬಂದಿಲ್ಲ. ಮಾಹಿತಿ ಬಂದ ನಂತರವೇ ಒಟ್ಟು ಅನುದಾನ ಹಾಗೂ ಬಳಕೆಯ ವಿವರ ಗೊತ್ತಾಗಲಿದೆ’ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಜಗದೀಶ ಹೇಳುತ್ತಾರೆ.

ಕೇಂದ್ರ ಸರ್ಕಾರ 2019ರಲ್ಲಿ ಅನುಷ್ಠಾನಕ್ಕೆ ತಂದಿರುವ ಅಂಗವಿಕಲರ ಹಕ್ಕುಗಳ ಕಾಯ್ದೆಯನ್ನು ಕರ್ನಾಟಕದಲ್ಲಿ ಕಳೆದ ವರ್ಷ ಜಾರಿಗೆ ತರಲಾಗಿದೆ. ಕಾಯ್ದೆಯಲ್ಲಿ ಅಂಗವಿಕಲರಿಗೆ ಸರ್ಕಾರದ ಎಲ್ಲ ಯೋಜನೆಗಳಲ್ಲಿ ಮೀಸಲು ಜತೆಗೆ ಒಟ್ಟು ಬಜೆಟ್‌ನಲ್ಲಿ ಶೇಕಡ 5ರಷ್ಟು ಬಳಕೆ ಕಡ್ಡಾಯಗೊಳಿಸಲಾಗಿದೆ.

ಸರ್ಕಾರದ 33 ಇಲಾಖೆಗಳಲ್ಲಿ ಈ ಕಾಯ್ದೆ ಅನುಷ್ಠಾನ ಕಡ್ಡಾಯವಾಗಿದೆ. ಪ್ರತಿ ತಾಲ್ಲೂಕಿಗೆ ಒಬ್ಬರು ಪುನಶ್ಚೇತನ ಅಧಿಕಾರಿಗಳು ಇದ್ದಾರೆ. ಸರ್ಕಾರ ನೋಡಲ್‌ ಆಧಿಕಾರಿಯನ್ನೂ ನೇಮಕ ಮಾಡಿದೆ. ಆದರೆ, ಯೋಜನೆಗಳ ಅನುಷ್ಠಾನದಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ.

ಶೇಕಡ 5ರಷ್ಟು ಮೀಸಲು ಕಾಯ್ದೆ ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸಗಳು ಆಗಿಲ್ಲ. ಇಂಧನ ಆಧಾರಿತ ತ್ರಿಚಕ್ರ ವಾಹನ ಕೊಡುವ ಕೆಲಸವಾಗಿದೆ. ಅವುಗಳನ್ನೂ ಅಂಗವೈಕಲ್ಯದ ಪ್ರಮಾಣ ಪರಿಗಣಿಸದೆ ರಾಜಕಾರಣಿಗಳ ಆಪ್ತರಿಗೆ ಕೊಡಲಾಗಿದೆ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ ಭಾಲ್ಕೆ ಆರೋಪಿಸುತ್ತಾರೆ.

‘ಸರ್ಕಾರದ ಯೋಜನೆಗಳು ಅರ್ಹರಿಗೆ ತಲು‍ಪುತ್ತಿಲ್ಲ. ಅಂಗವಿಕಲರಿಗೆ ಯೋಜನೆಯ ಮಾಹಿತಿ ಇಲ್ಲದ ಕಾರಣ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅಂಗವಿಕಲರಿಗೆ ನೆರವು ಅಂದರೆ ಕೇವಲ ಟ್ರೈಸಿಕಲ್ ಅಥವಾ ಇಂಧನ ಆಧಾರಿತ ತ್ರಿಚಕ್ರ ವಾಹನ ಕೊಡುವುದಲ್ಲ. ಅಂಧರು, ಮಾನಸಿಕ ಅಸ್ವಸ್ಥರು ಸಹ ಬದುಕು ರೂಪಿಸಿಕೊಳ್ಳವಂತಹ ಕಾರ್ಯಕ್ರಮಗಳಿಗೆ ಒತ್ತು ಕೊಡಬೇಕಿದೆ. ಆದರೆ, ಸ್ಥಳೀಯ ಸಂಸ್ಥೆಗಳು ಸರಿಯಾದ ಕ್ರಿಯಾ ಯೋಜನೆ ರೂಪಿಸುತ್ತಿಲ್ಲ. ಹೀಗಾಗಿ ಯೋಜನೆಗಳು ಸಫಲವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಎರಡು ವರ್ಷಗಳ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್‌ ಒಬ್ಬರೇ ಅಂಗವಿಕಲರಿಗೆ ಇಂಧನ ಆಧಾರಿತ ತ್ರಿಚಕ್ರ ವಾಹನ ಕೊಟ್ಟಿದ್ದಾರೆ. ಜಿಲ್ಲೆಯ ಉಳಿದ ವಿಧಾನ ಪರಿಷತ್‌ ಸದಸ್ಯರು ಹಾಗೂ ಶಾಸಕರು ಯಾವುದೇ ರೀತಿಯ ಅನುದಾನ ಒದಗಿಸಿಲ್ಲ.

‘ನಗರ ಸ್ಥಳೀಯ ಸಂಸ್ಥೆಗಳು ಎರಡು ವರ್ಷಗಳಿಂದ ಅಂಗವಿಕಲರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಸರ್ಕಾರ ಕಾಯ್ದೆ ಜಾರಿ ಮಾಡಿದರೂ ಅಂಗವಿಕಲರ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಜಿಲ್ಲಾಡಳಿತ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ’ ಎಂದು ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ ಹೇಳುತ್ತಾರೆ.

‘ಜೆಡಿಎಸ್ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂಗವಿಕಲರಿಗೆ ಒಂದಿಷ್ಟು ಸೌಲಭ್ಯಗಳು ದೊರಕಿವೆ. ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಅಂಗವಿಕಲರಿಗೆ ಯಾವುದೇ ಸೌಕರ್ಯಗಳು ದೊರಕದೆ ಇರುವುದು ವಿಷಾದನೀಯ’ ಎಂದು ಬುದ್ಧ, ಬಸವ, ಅಂಬೇಡ್ಕರ್‌ ವೇದಿಕೆಯ ಅಧ್ಯಕ್ಷ ಮಹೇಶ ಗೋರನಾಳಕರ್‌ ಬೇಸರ ವ್ಯಕ್ತಪಡಿಸುತ್ತಾರೆ.

* * *

ನಿರ್ವಹಣಾ ಭತ್ಯೆ

ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ₹ 12 ಸಾವಿರ ಹಾಗೂ ನಗರ ಪ್ರದೇಶದಲ್ಲಿ ₹ 17 ಸಾವಿರಕ್ಕಿಂತಲೂ ಕಡಿಮೆ ಇರುವ ಶೇ 40 ಹಾಗೂ ಶೇ 75 ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವ ಅಂಗವಿಕಲರಿಗೆ ತಿಂಗಳಿಗೆ
₹400 ಹಾಗೂ ಶೇಕಡ 75 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವವರಿಗೆ ₹ 1 ಸಾವಿರ ನಿರ್ವಹಣಾ ಭತ್ಯೆ ನೀಡಲಾಗುತ್ತಿದೆ.

ಕಂದಾಯ ಇಲಾಖೆಯ ಮೂಲಕ ನಿರ್ವಹಣಾ ಭತ್ಯೆ ಕೊಡಲಾಗುತ್ತಿದೆ. ಆಯಾ ತಾಲ್ಲೂಕಿನ ತಹಶೀಲ್ದಾರರು ದಾಖಲೆಗಳನ್ನು ಪರಿಶೀಲಿಸಿ ಮಂಜೂರು ಮಾಡುವ ಅಧಿಕಾರ ಹೊಂದಿರುತ್ತಾರೆ. ಆದರೆ, ಅನೇಕ ಅಂಗವಿಕಲರಿಗೆ ಸರಿಯಾದ ಪ್ರಮಾಣಪತ್ರ ದೊರೆಯದ ಕಾರಣ ಈ ಸೌಲಭ್ಯವೂ ದೊರಕುತ್ತಿಲ್ಲ.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಅಂಗವಿಕಲರಿಗೆ ಇರುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಗುರುತಿನ ಚೇಟಿಯನ್ನು ಉಚಿತವಾಗಿ ವಿತರಿಸಿದ್ದಾರೆ. ಆದರೆ, ಅಂಗವಿಕಲರಿಗೆ ವೈದ್ಯಕೀಯ ಪ್ರಮಾಣಪತ್ರ ಸುಲಭವಾಗಿ ದೊರಕುವಂತೆ ಮಾಡಲು ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ಮಾಡುವ ಅಗತ್ಯವಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
* * *
ಅಂಗವಿಕಲರ ಯೋಜನೆಗಳು
ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಕೊಡಲಾಗಿದೆ. ಅಂಗವಿಕಲರು ವಾರ್ಷಿಕ ₹550 ಪಾವತಿಸಿ 100 ಕಿ.ಮೀ.ವರೆಗೆ ಪ್ರಯಾಣಿಸಬಹುದಾಗಿದೆ. ‘ಸಾಧನೆ ಪ್ರತಿಭೆ’ ಯೋಜನೆಯಡಿಯಲ್ಲಿ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗಿದೆ.

 

ಅರ್ಧಕ್ಕಿಂತ ಹೆಚ್ಚಿನ ಪಂಚಾಯಿತಿಗಳಲ್ಲಿ ಅಂಗವಿಕಲರಿಗೆ ಸೌಲಭ್ಯ ಇಲ್ಲ

ಬಸವಕಲ್ಯಾಣ ತಾಲ್ಲೂಕಿನ ಅರ್ಧದಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಅಂಗವಿಕಲರಿಗೆ ಸಿಗಬೇಕಾದ ಶೇ 5 ರಷ್ಟು ಅನುದಾನ ಖರ್ಚಾಗುತ್ತಿಲ್ಲ. ತಾಲ್ಲೂಕಿನಲ್ಲಿ 5,280 ಅಂಗವಿಕಲರು ಇದ್ದಾರೆ, ಎಲ್ಲರಿಗೂ ಸರ್ಕಾರದ ಮಾಸಾಶನ, ಇತರೆ ಸೌಲಭ್ಯ ದೊರೆತಿದೆ, ಆದರೆ. ನಗರಸಭೆ ಮತ್ತು ಕೆಲ ಪಂಚಾಯಿತಿಯಿಂದ ಅನುದಾನ ಖರ್ಚು ಮಾಡುತ್ತಿಲ್ಲ ಎಂದು ಗ್ರಾಮೀಣ ವಿವಿಧೋದ್ದೇಶ ತಾಲ್ಲೂಕು ಪುನರ್ವಸತಿ ಕಾರ್ಯಕರ್ತ ಶಿವಕುಮಾರ ಪಾಟೀಲ ಹೇಳುತ್ತಾರೆ.

ಬಸವಕಲ್ಯಾಣ ನಗರಸಭೆ ಎದುರು ಅಂಗವಿಕಲರು ಅನುದಾನ ವಿತರಣೆಗಾಗಿ ಅನೇಕ ಬಾರಿ ಧರಣಿ ನಡೆಸಿದ್ದಾರೆ, ಆದರೂ ಕ್ರಮ ಕೈಗೊಂಡಿಲ್ಲ. ಲಾಡವಂತಿ, ಗುಂಡೂರ ಒಳಗೊಂಡು ಕೆಲ ಪಂಚಾಯಿತಿಗಳಲ್ಲಿ ಮಾತ್ರ ಅನುದಾನ ಬಳಕೆ ಮಾಡಲಾಗಿದೆ ಎನ್ನುತ್ತಾರೆ ಅವರು. ‘ಅಂಗವಿಕಲರ ಅನುದಾನ ಬಳಕೆಗೆ ಆಗ್ರಹಿಸಿ ಹಾಗೂ ಈ ಬಗ್ಗೆ ಮಾಹಿತಿ ನೀಡಲು ಕೆಲ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ಹಕ್ಕು ಅಡಿನಲ್ಲಿ ಅರ್ಜಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ’ ಎಂದು ಅಂಗವಿಕಲ ಬಾಬುರಾವ್ ಘೋರವಾಡೆ ಬೇಸರ ವ್ಯಕ್ತಪಡಿಸುತ್ತಾರೆ.
‘ಭಾಲ್ಕಿ ತಾಲ್ಲೂಕಿನ ನಿಟ್ಟೂರ(ಬಿ) ಗ್ರಾಮ ಪಂಚಾಯಿತಿ ಅಂಗವಿಕಲರಿಗೆ ಯಾವುದೇ ಸವಲತ್ತು ಒದಗಿಸಿಲ್ಲ. ಕನಿಷ್ಠ ಪಕ್ಷ
ಜಾಗೃತಿ ಕಾರ್ಯಕ್ರಮವನ್ನೂ ಮಾಡಿಲ್ಲ’ ಎಂದು ಹಜನಾಳ ಗ್ರಾಮದ ಸದಾನಂದ ಪವಾರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘2020-21ನೇ ಸಾಲಿನಲ್ಲಿ ಕೋವಿಡ್‌ ಕಾರಣ ಶೇ3 ರ ಅನುದಾನ ಬಂದಿರಲಿಲ್ಲ. ಈ ಸಾಲಿನಲ್ಲಿ ಶೇ 5 ರಷ್ಟು ಅನುದಾನ ಬಂದಿದೆ. ಶೀಘ್ರದಲ್ಲೇ ಕ್ರಿಯಾಯೋಜನೆ ರೂಪಿಸಿ ಅರ್ಹರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು’ ಎಂದು ಭಾಲ್ಕಿ ಪುರಸಭೆ ಮುಖ್ಯಾಧಿಕಾರಿ ಶಿವರಾಜ್ ರಾಠೋಡ್ ಹೇಳುತ್ತಾರೆ.

ಔರಾದ್ ಪಟ್ಟಣ ಪಂಚಾಯಿತಿಯಲ್ಲಿ ಎರಡು ವರ್ಷಗಳ ಹಿಂದೆ ಅಂಗವಿಕಲರಿಗೆ ಇಂಧನ ಆಧಾರಿತ ತ್ರಿಚಕ್ರ ವಾಹನ ವಿತರಣೆಗೆ ಅನುದಾನ ಬಳಸಲಾಗಿದೆ. ನಂತರ ಯಾವುದೇ ಸೌಲಭ್ಯಗಳು ಅಂಗವಿಕಲರಿಗೆ ತಲುಪಿಲ್ಲ. ಅಂಗವಿಕಲರ ಸಹಾಯವಾಣಿ ಕಟ್ಟಡಕ್ಕಾಗಿ ಅನುದಾನ ಇಡಲಾಗಿದ್ದು, ಕಾಮಗಾರಿ ಆರಂಭವಾಗಬೇಕಿದೆ ಎಂದು ತಾಲ್ಲೂಕು ಅಂಗವಿಕಲರ ಪುನರ್ವಸತಿ ಕಾರ್ಯಕರ್ತ ಬಸವರಾಜ ದೇಶಮುಖ ತಿಳಿಸಿದ್ದಾರೆ.
 

ಪೂರಕ ಮಾಹಿತಿ:
ಮಾಣಿಕ ಭುರೆ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ವೀರೇಶ ಮಠಪತಿ, ನಾಗೇಶ ಪ್ರಭಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು