ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ಉಪ ಚುನಾವಣೆ: 81 ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆ

Last Updated 17 ಮಾರ್ಚ್ 2021, 16:17 IST
ಅಕ್ಷರ ಗಾತ್ರ

ಬೀದರ್: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿರುವ ಕಾರಣ 81 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 264 ಮೂಲ ಮತಗಟ್ಟೆ ಹಾಗೂ ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು 345 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ತಿಳಿಸಿದರು.

‘ಮಾರ್ಚ್‌ ಅಂತ್ಯದ ವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಬಸವಕಲ್ಯಾಣದ ಮಿನಿ ವಿಧಾನಸೌಧ ಕಟ್ಟಡದಲ್ಲಿ ಮತದಾರರ ಮಾಹಿತಿ ಕೇಂದ್ರವನ್ನೂ (ಮೊಬೈಲ್‌ ಸಂಖ್ಯೆ: 9480347656) ತೆರೆಯಲಾಗಿದೆ’ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಪ್ರಸ್ತುತ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 1,24,530 ಪುರುಷರು ಹಾಗೂ 1,14,325 ಮಹಿಳೆಯರು ಸೇರಿ ಒಟ್ಟು 2,38,855 ಮತದಾರರು ಇದ್ದಾರೆ’ ಎಂದು ತಿಳಿಸಿದರು.

ನೀತಿ ಸಂಹಿತೆ ಜಾರಿ: ಮಾರ್ಚ್‌ 16ರಿಂದ ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಮೇ 4ರ ವರೆಗೂ ಮುಂದುವರಿಯಲಿದೆ.

ಜಿಲ್ಲೆಯ ಎಲ್ಲ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಪ್ರವಾಸಿ ಮಂದಿರಗಳನ್ನು ರಾಜಕೀಯ ಪ್ರೇರಿತ ವ್ಯಕ್ತಿಗಳಿಗೆ ಹಾಗೂ ಮುಖಂಡರಿಗೆ ನೀಡದಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ. ಚುನಾಯಿತ ಹಾಗೂ ನಾಮ ನಿರ್ದೇಶಿತಗೊಂಡ ರಾಜಕೀಯ ಮುಖಂಡರಿಗೆ ನೀಡಲಾಗಿರುವ ಸರ್ಕಾರಿ ವಾಹನ ಸೌಲಭ್ಯವನ್ನು ಮರಳಿ ಪಡೆದು ಜಿಲ್ಲಾಡಳಿತ ಆಧೀನದಲ್ಲಿ ಇಟ್ಟು ಕೊಳ್ಳಲಾಗಿರುತ್ತದೆ.

ಮತದಾರರ ಪ್ರಭಾವಕ್ಕೊಳಪಡುವ ರಾಜಕೀಯ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಭಿತ್ತಿ ಪತ್ರಗಳನ್ನು, ಕಟೌಟ್‌ ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸಲು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಚುನಾವಣಾಧಿಕಾರಿ ಪರವಾನಗಿ ಪಡೆದ ನಂತರ ಪ್ರಚಾರ ಸಭೆ ಆಯೋಜಸಬೇಕು. ಅಭ್ಯರ್ಥಿಗಳು ಹಾಗೂ ಅವರ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದರೂ ಪೂರ್ವಾನುಮತಿ ಅಗತ್ಯ. ನಾಮಪತ್ರ ಸಲ್ಲಿಸಲು ಬರುವ ಸಂದರ್ಭದಲ್ಲಿ ಎರಡು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿ ಸೇರಿ ಐವರಿಗಿಂತ ಹೆಚ್ಚು ಇರುವಂತಿಲ್ಲ‌ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಚೆಕ್‌ಪೋಸ್ಟ್‌: ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜಿಲ್ಲೆಯ ಗಡಿಯಲ್ಲಿ ಹುಲಸೂರು ಹಾಗೂ ಕಮಲನಗರ ತಾಲ್ಲೂಕಿನ ಚಿಕಲಿ ಬಳಿ ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು ಎಂದು ರಾಮಚಂದ್ರನ್‌ ತಿಳಿಸಿದರು.

ಈಗಾಗಲೇ ಮೂರು ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಒಟ್ಟು ಐದು ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸಲಿವೆ. ಬಿಸಿಲು ಅಧಿಕ ಇರುವ ಕಾರಣ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ. ಹೀಗಾಗಿ ಮೂರು ಸಿಫ್ಟ್‌ಗಳಲ್ಲಿ ಕೆಲಸ ಮಾಡಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಕೋವಿಡ್‌ ನಿಯಮ ಹಾಗೂ ಚುನಾವಣಾ ನೀತಿ ಸಂಹಿತೆಯನ್ನು ಏಕ ಕಾಲದಲ್ಲಿ ಪಾಲಿಸಬೇಕಾಗಿದೆ. ಎಲ್ಲವನ್ನೂ ಜಿಲ್ಲಾಡಳಿತದ ಮೂಲಕ ಮಾಡಲು ಸಾಧ್ಯವಾಗದು. ಸಾರ್ವಜನಿಕರ ಸಹಕಾರ ನೀಡಿದರೆ ಕೋವಿಡ್‌ ನಿಯಂತ್ರಣಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಂದಾಯ, ಪೊಲೀಸ್‌ ಹಾಗೂ ಅಬಕಾರಿ ಇಲಾಖೆಯ ಸಿಬ್ಬಂದಿ ತಂಡವಾಗಿ ಕಾರ್ಯನಿರ್ವಹಿಸಲಿದ್ದಾರೆ. ಗಡಿಯಲ್ಲಿ ಪ್ರತಿಯೊಂದು ವಾಹನ ತಪಾಸಣೆ ಮಾಡಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT