ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲರಲ್ಲಿ ಅಡಗಿರುತ್ತದೆ ವಿಶೇಷ ಕಲೆ’

ಮನ್ನಾನ್ ಸೇಠ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್
Last Updated 28 ಜನವರಿ 2023, 8:49 IST
ಅಕ್ಷರ ಗಾತ್ರ

ಬೀದರ್: ’ಅಂಗವಿಕಲರು ಭಯಮುಕ್ತವಾಗಿ ಅಂತರಂಗದಿಂದ ಮಾತನಾಡುತ್ತಾರೆ. ಅವರಲ್ಲಿ ಅಂತರಂಗ ಬಹಿರಂಗ ಎಂಬ ಭೇದಭಾವ ಇರುವುದಿಲ್ಲ. ಹೀಗಾಗಿ ಅವರ ಮಾತುಗಳು ಮತ್ತು ಹಾಡುಗಳು ಜನರ ಹೃದಯಕ್ಕೆ ಮುಟ್ಟುತ್ತವೆ’ ಎಂದು ಮನ್ನಾನ್ ಸೇಠ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಹೇಳಿದರು.

ಜೀವನ ಪ್ರಕಾಶ ಕಲ್ಚರಲ್ ಮತ್ತು ವೆಲ್ಫೇರ್ ಸೊಸೈಟಿ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ 2022-23 ನೇ ಸಾಲಿನ ಸಾಮಾನ್ಯ ಸಂಘ ಸಂಸ್ಥೆಗಳ ಸಾಂಸ್ಕೃತಿಕ ಚಟುವಟಿಕೆಗಳ ಧನಸಹಾಯ ಯೋಜನೆಯಡಿಯಲ್ಲಿ ಆಯೋಜಿಸಿದ್ದ ‘ವಿಶೇಷಚೇತನರ ರಾಜ್ಯಮಟ್ಟದ ಕಲಾ ಪ್ರತಿಭೋತ್ಸವ’ ಉದ್ಘಾಟಿಸಿ ಮಾತನಾಡಿದರು.

‘ಕಪಟ, ಮೋಸ, ವಂಚನೆಗಳ ಬಗ್ಗೆ ಅಂಗವಿಕಲರಿಗೆ ಅರಿವು ಕೂಡಾ ಇರುವುದಿಲ್ಲ. ಭಗವಂತ ಅವರಿಗೆ ವಿಶೇಷ ಕಲೆ ನೀಡಿರುತ್ತಾನೆ. ಅಂತಹ ಸುಂದರವಾದ ಕಲೆಯನ್ನು ಇಲ್ಲಿ ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಕಲಾವಿದ ದಿಲೀಪ ಕಾಡವಾದ ಅವರ ಪ್ರಯತ್ನಕ್ಕೆ ಯಶ ದೊರಕಿದೆ’ ಎಂದರು.

‘ಅಂಗವಿಕಲರ ಮಾತುಗಳು ಯಾರ ಮನಸ್ಸಿಗೂ ನೋವು ಕೊಡುವುದಿಲ್ಲ. ಅವರಲ್ಲಿರುವ ಉತ್ಸಾಹ, ಪ್ರಯತ್ನದ ಗುಣ ನಿಜಕ್ಕೂ ಮಾದರಿ. ರಾಯಚೂರು, ಕಾರವಾರ, ಧಾರವಾಡ, ಮೈಸೂರು, ಬೆಂಗಳೂರಿನಿಂದ ಆಗಮಿಸಿ ತಮ್ಮ ಕಲೆ ಪ್ರಸ್ತುತಪಡಿಸಿದ ಎಲ್ಲ ಕಲಾವಿದರಿಗೆ ಅಭಿನಂದನೆಗಳು’ ಎಂದು ಹೇಳಿದರು.‘

ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ‘ಪಂಡಿತ್ ಪುಟ್ಟರಾಜ ಗವಾಯಿಗಳು ಅಂಧರ ಬಾಳಿನ ಬೆಳಕಾಗಿದ್ದಾರೆ. ಅವರ ಆಶೀರ್ವಾದದಿಂದ ಇಂದು ಲಕ್ಷಾಂತರ ಅಂಧ ಅನಾಥರು ತಮ್ಮ ಕಲೆಯನ್ನು ಪ್ರದರ್ಶಿಸುತ್ತ ಬದುಕು ಕಟ್ಟಿಕೊಂಡಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ದಿಲೀಪ ಕಾಡವಾದ ಅವರ ತಂಡ ಸಾಂಸ್ಕೃತಿಕ, ಸಾಮಾಜಿಕ ಮತ್ತು ಕಲಾತ್ಮಕ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆ ಅಗಣಿತ ಮತ್ತು ಅನನ್ಯವಾಗಿದೆ. ವಿಶೇಷಚೇತನರ ಧೈರ್ಯ, ಸಾಹಸ, ಪ್ರಯತ್ನ ನಿಜಕ್ಕೂ ಮಾದರಿ. ಸದಾ ಅವರ ಸಹಕಾರಕ್ಕೆ ನಿಲ್ಲುವೆ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಅವರಿಗೆ ಹೆಲ್ತ್ ಕಾರ್ಡ್ ಮಾಡಿಸಿ ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೌತಮ ಅರಳಿ ಮಾತನಾಡಿ, ‘ಇಲಾಖೆ ವತಿಯಿಂದ ವಿಶೇಷಚೇತನರಿಗಾಗಿಯೇ ಮುಡುಪಾಗಿಟ್ಟು ಅನುದಾನ ನೀಡಲಾಗುತ್ತಿದೆ. ದಿಲೀಪ ಕಾಡವಾದ ಅವರಂಥ ಅದ್ಭುತ ಕಲಾವಿದರಿಗೆ ಪ್ರತಿಯೊಬ್ಬರೂ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು’ ಎಂದು ತಿಳಿಸಿದರು.

‘18 ವರ್ಷ ಮೇಲ್ಪಟ್ಟ ವಿಶೇಷಚೇತನರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇನ್ನೂ ಯಾರಾದರೂ ಉಳಿದರೆ ದಯವಿಟ್ಟು ಹೆಸರು ಸೇರ್ಪಡೆ ಮಾಡಬೇಕು. ಪ್ರತಿಬಾರಿಯೂ ಚುನಾವಣೆಯಲ್ಲಿ ಶೇ. 99.6 ಪ್ರತಿಶತ ವಿಶೇಷಚೇತನರು ಮತದಾನ ಮಾಡುತ್ತಿದ್ದಾರೆ. ಕೈಕಾಲು ನೆಟ್ಟಗಿದ್ದರೂ ಎಷ್ಟೋ ಜನರು ಮನೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹ ಜವಾಬ್ದಾರಿಯುತ ವಿಶೇಷಚೇತನರು ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ’ ಎಂದು ಶ್ಲಾಘಿಸಿದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ‘ಇಂತಹ ಪ್ರತಿಭೆಗಳಿಗೆ ಇಲಾಖೆ ಹಾಗೂ ಸಮಾಜದ ಗಣ್ಯರು ನಿರಂತರವಾಗಿ ಹೆಚ್ಚು ಸಹಕಾರ ನೀಡಬೇಕು. ವಿಶೇಷ ಚೇತನರು ಎಂದರೆ ದೇವರಿಗೆ ಸಮಾನ. ಅವರ ಕಲೆಯನ್ನು ಆಸ್ವಾದಿಸಬೇಕು’ ಎಂದು ತಿಳಿಸಿದರು.

ಕಲಾವಿದರಾದ ಲೋಕನಾಥ ಚಾಂಗಲೇರಾ ಅವರ ವಚನಗಾಯನ, ರಮೇಶ ಸೂರ್ಯಕಾಂತ ಅವರ ಭಾವಗೀತೆ, ತುಕಾರಾಮ ಅವರ ತತ್ವಪದಗಳು, ಜಾನ್ಸನ್ ಅವರ ಜನಪದಗೀತೆಗಳು, ನರಸಿಂಹಲು ಡಪ್ಪೂರ ಅವರ ದಾಸರ ಪದಗಳು, ಬೇಬಾವತಿ ತುಕಾರಾಮ ಅವರ ಭಜನಾಗೀತೆ, ಜಾನ್ಸನ್ ಡೊಂಗುರಗಿ, ಏಕನಾಥ ಅವರ ಭಾವಗೀತೆಗಳು ಸೇರಿದಂತೆ ಅನೇಕ ವಿಕಲಚೇತನ ಕಲಾವಿದರು ತಮ್ಮ ಕಲಾ ಪ್ರದರ್ಶನ ಪ್ರಸ್ತುತಪಡಿಸಿ ಸಭೀಕರ ಗಮನ ಸೆಳೆದರು.

ಜೀವನ ಪ್ರಕಾಶ ಕಲ್ಚರಲ್ ಮತ್ತು ವೆಲ್ಫೇರ್ ಸೊಸೈಟಿ ಅಧ್ಯಕ್ಷ ದಿಲೀಪ ಕಾಡವಾದ ಅಧ್ಯಕ್ಷತೆ ವಹಿಸಿದ್ದರು. ಜೀವನ ಪ್ರಕಾಶ ಕಲ್ಚರಲ್ ಮತ್ತು ವೆಲ್ಫೇರ್ ಸೊಸೈಟಿ ಕಾರ್ಯದರ್ಶಿ ಎಸ್ತೇರ್ ದಿಲೀಪ ಕಾಡವಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸ್ಸಿ ಸೋನವಾನೆ ಸ್ವಾಗತಿಸಿದರು. ಎಸ್.ಬಿ. ಕುಚಬಾಳ ನಿರೂಪಿಸಿದರು. ಸತೀಷ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT