ಸೋಮವಾರ, ಮೇ 23, 2022
28 °C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಮತ

ಕ್ರಿಯಾಶೀಲ ಸಾಂಸ್ಕೃತಿಕ ಸಂಘಗಳು ಅಗತ್ಯ: ಟಿ.ಎಸ್.ನಾಗಾಭರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸಾಂಸ್ಕೃತಿಕ ವಲಯ ಸಂಸ್ಕೃತಿಯ ವಾಹಕವಾಗಿದೆ. ಇಂದು ನಾಡಿನ ಕಲೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂಥ ಕ್ರಿಯಾಶೀಲ ಸಾಂಸ್ಕೃತಿಕ ಸಂಘಗಳ ಅಗತ್ಯವಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ `ಬಿದರಿ' ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೇ ಒಂದು ಸಮಾಜ ಸಾಂಸ್ಕೃತಿಕವಾಗಿ ತನ್ನ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳದಿದ್ದರೆ ಆ ಸಮಾಜ ಉಳಿಯುವುದಿಲ್ಲ. ಉಳಿದರೂ ಸಾಮಾಜಿಕವಾಗಿ ತನ್ನನ್ನು ತಾನು ಮುಂದೆ ತೆಗೆದುಕೊಂಡು ಹೋಗುವುದಿಲ್ಲ. ಸಾಂಸ್ಕೃತಿಕವಾದ ಹೃದಯ ಇದ್ದರೆ ಸಂಸ್ಕಾರ ಸಹಜವಾಗಿಯೇ ಬೆಳೆಯುತ್ತದೆ’ ಎಂದು ತಿಳಿಸಿದರು.

‘ಕಲಾವಿದರು ನಿರಂತರ ಕಲಿಕೆಯಲ್ಲಿರಬೇಕು. ಅದು ಕಲಾವಿದರ ಬದುಕು ಹಸನು ಮಾಡುತ್ತದೆ. ಕಲಾವಿದ ನೋವು ಒಳಗಿಟ್ಟು ನಲಿವನ್ನು ಎಲ್ಲರಿಗೂ ಕೊಡುತ್ತಾನೆ. ಕಲಾವಿದರು ಇನ್ನೊಬ್ಬರ ಕಲೆ ಗುರುತಿಸಿ ಆಸ್ವಾದಿಸಿದರೆ ತಾವೂ ಬೆಳೆಯಲು ಸಾಧ್ಯವಿದೆ’ ಎಂದು ಹೇಳಿದರು.

‘ಕಾವ್ಯವನ್ನು ಕತೆಯಾಗಿ ಮಾಡಿ ಮೈಸೂರು ಮಲ್ಲಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದಾಗ ಯುವಕನ ಹಾಡಿಗೆ ಗಾಯಕ ಸಿ. ಅಶ್ವಥ್ ಅವರ ಧ್ವನಿ ಬಳಸಿಕೊಳ್ಳುವುದು ಸೂಕ್ತ ಎನಿಸಿರಲಿಲ್ಲ. ಹೀಗಾಗಿ ಅಶ್ವಥ್ ಅವರ ಮನವೊಲಿಸಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದ್ದೆ. ಕನ್ನಡಿಗರು ಪ್ರಯೋಗಶೀಲ ಮನಸ್ಸು ಹೊಂದಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ’ ಎಂದರು.

ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಇದ್ದರು.

ನಂತರ ಗಾಯಕರಾದ ಸಿ. ಅಶ್ವಥ್, ರಾಜನ್, ಡಾ. ಎಸ್‍.ಪಿ. ಬಾಲಸುಬ್ರಹ್ಮಣ್ಯಂ ಅವರ ನೆನಪಿಗಾಗಿ `ಬಿದರಿ' ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾದ್ ಸೌದಿ ಅವರ ನೇತೃತ್ವದಲ್ಲಿ ಗಾಯಕರಾದ ಅಮಿತ್ ಜನವಾಡಕರ್, ಬೆಂಗಳೂರಿನ ಗೋವಿಂದ ಕರ್ನೂಲ್, ನಾಗರಾಜ ಜೋಗಿ, ರಾಜೇಶ ಕುಲಕರ್ಣಿ, ಎನ್.ಎಸ್. ಕುಲಕರ್ಣಿ, ವಿಷ್ಣು ಜನವಾಡಕರ್ ವೈವಿಧ್ಯಮಯ ಹಾಡುಗಳ ಮೂಲಕ ಸಂಗೀತ ಪ್ರೇಮಿಗಳ ಮನ ತಣಿಸಿದರು.

ಸೊಲ್ಲಾಪುರದ ಸ್ಟಾರ್ ಆಫ್ ಮೆಲೋಡಿಸ್ ವಾದ್ಯ ತಂಡದವರು ಹಿಂದಿ, ಕನ್ನಡ ಚಲನಚಿತ್ರ ಗೀತೆಗಳಿಗೆ ಸಂಗೀತ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ವೈಕುಂಠದತ್ತ ಮಹಾರಾಜರಿಗೆ `ಬಿದರಿ' ದತ್ತಿ ಪ್ರಶಸ್ತಿ ಪ್ರದಾನ
ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಸಂಗೀತ ವಿದ್ವಾಂಸ ವೈಕುಂಠದತ್ತ ಮಹಾರಾಜ್ ಅವರಿಗೆ ರಾಜ್ಯ ಮಟ್ಟದ `ಬಿದರಿ' ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಅವರು ವೈಕುಂಠದತ್ತ ಮಹಾರಾಜ್ ಅವರಿಗೆ ಪ್ರಶಸ್ತಿ ಫಲಕ, ₹ 15 ಸಾವಿರ ನಗದು ಹಾಗೂ ಶ್ರೀಫಲ ಪ್ರದಾನ ಮಾಡಿದರು.

ಜನಪದ ಕಲೆಗೆ ವಿಶಿಷ್ಟ ಸ್ಥಾನ
ಕರ್ನಾಟಕದ ಜನಪದ ಕಲೆಗೆ ವಿಶಿಷ್ಟ ಸ್ಥಾನವಿದೆ. ಜನರ ಬಾಯಿಂದ ಬರುವ ಸ್ವರಗಳು ಬದಲಾವಣೆ ಆಗಬಾರದು. ಜನಪದದ ಮೂಲ ಸಂಯೋಜನೆ ಯಾರೂ ಕೆಡಿಸಬಾರದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹೇಳಿದರು.
ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಸಂಗೀತ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ‘ಜಿಲ್ಲೆಯ ಕಲಾವಿದರನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಕಾರ್ಯವನ್ನು ಬಿದರಿ ಸಂಸ್ಥೆ ಮಾಡುತ್ತಿದೆ’ ಎಂದು ಬಣ್ಣಿಸಿದರು. ರೇಖಾ ಸೌದಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಗೀತಗಾರ ರಾಜೇಂದ್ರಸಿಂಗ್ ಪವಾರ್ ಇದ್ದರು. ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು