ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಆರೋಪಿಗಳೊಂದಿಗೆ ಅಸಾದುದ್ದೀನ್ ಚರ್ಚೆ

ಶಾಹೀನ್‌ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶನ
Last Updated 2 ಫೆಬ್ರುವರಿ 2020, 9:54 IST
ಅಕ್ಷರ ಗಾತ್ರ

ಬೀದರ್‌: ಶಾಹೀನ್‌ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಮಾಡಿಸಿದ್ದಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣದಡಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಶನಿವಾರ ಇಲ್ಲಿಯ ಜೈಲಿನಲ್ಲಿ ಭೇಟಿಯಾದರು.

ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಫರೀದಾ ಬೇಗಂ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಮಾಡಿದ ಬಾಲಕಿಯ ತಾಯಿ ಅನುಜಾ ಮಿನ್ಸಾ ಅವರಿಗೆ ಧೈರ್ಯ ತುಂಬಿದರು. ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಲು ಎಐಎಂಐಎಂ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

‘ನಾನೊಬ್ಬಳು ವಿಧವೆ. ಮಗಳು ಮಾಡಿದ ತಪ್ಪಿಗೆ ನಾನು ಜೈಲು ಸೇರುವಂತಾಗಿದೆ’ ಎಂದು ಅನುಜಾ ಮಿನ್ಸಾ ಪಶ್ಚಾತಾಪ ಪಟ್ಟರು ಎನ್ನಲಾಗಿದೆ.

ಇದಕ್ಕೂ ಮೊದಲು ಅಸಾದುದ್ದೀನ್‌ ಒವೈಸಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಅವರನ್ನು ಭೇಟಿ ಮಾಡಿ ಮುಖ್ಯಶಿಕ್ಷಕಿ ಹಾಗೂ ಪಾಲಕಿಯ ವಿರುದ್ಧ ದಾಖಲಿಸಿರುವ ದೇಶದ್ರೋಹದ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಮನವಿ ಮಾಡಿದರು.

ಪೊಲೀಸರು ಬೀದರ್‌ ಭೇಟಿಗೆ ಅನುಮತಿ ನೀಡದಿರುವ ಸಾಧ್ಯತೆ ಇದ್ದ ಕಾರಣ ಅಸಾದುದ್ದೀನ್‌ ಒವೈಸಿ ಅನಿರೀಕ್ಷಿತವಾಗಿ ಬಂದು ಹೋದರು. ತೆಲಂಗಾಣದ ಎಐಎಂಐಎಂ ಶಾಸಕ ಕೌಸರ್ ಮೊಹಿದ್ದೀನ್, ಬೀದರ್‌ ನಗರಸಭೆ ಮಾಜಿ ಸದಸ್ಯರಾದ ಅಜೀಜ್‌ಸಾಬ ಯಾಮಿನ್‌ ಖಾನ್, ಸಯ್ಯದ್‌ ಮನ್ನೂರ್‌ ಖಾದ್ರಿ ಇದ್ದರು.

ದೊರೆಯದ ನಿರೀಕ್ಷಣಾ ಜಾಮೀನು

ನ್ಯಾಯಾಧೀಶರು ರಜೆ ಮೇಲಿದ್ದ ಕಾರಣ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್ ಹಾಗೂ ಇತರ ನಾಲ್ವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಶನಿವಾರವೂ ನಡೆಯಲಿಲ್ಲ.

‘ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಬಾಲಕಿಯ ತಾಯಿ ಅನುಜಾ ಮಿನ್ಸಾ ಅವರ ಜಾಮೀನು ಅರ್ಜಿಯನ್ನು ಶನಿವಾರ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ದಾಖಲಿಸಲಾಗಿದೆ’ ಎಂದು ವಕೀಲ ಕೇಶವರಾವ್ ಶ್ರೀಮಾಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT