ಭಾನುವಾರ, ಸೆಪ್ಟೆಂಬರ್ 25, 2022
29 °C
ಏರ್ ಶೋ ವೀಕ್ಷಿಸಿ ಸಂಭ್ರಮಿಸಿದ ಶಾಲಾ, ಕಾಲೇಜು ವಿದ್ಯಾರ್ಥಿಗಳು

ಬೀದರ್| ಆಗಸದಲ್ಲಿ ಲೋಹದ ಹಕ್ಕಿಗಳ ಚಿತ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪರಂಪರೆ ನಗರಿಯ ಐತಿಹಾಸಿಕ ಕೋಟೆ ಪ್ರದೇಶದಲ್ಲಿ ಲೋಹದ ಹಕ್ಕಿಗಳು ಶುಕ್ರವಾರ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದವು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬೀದರ್ ವಾಯುಪಡೆ ತರಬೇತಿ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾದ ಮೊದಲ ದಿನದ ಏರ್ ಶೋ ಅಂಗವಾಗಿ ಸೂರ್ಯಕಿರಣ ವಿಮಾನಗಳು ಅತ್ಯಾಕರ್ಷಕ ಪ್ರದರ್ಶನ ನೀಡಿದವು.

ಏಕಾಂಗಿ, ಜೋಡಿ ಹಾಗೂ ತಂಡದ ರೂಪದಲ್ಲಿ ಹಲವು ಸುತ್ತು ಪ್ರದರ್ಶನ ನೀಡಿ, ಆಗಸದಲ್ಲಿ ಬಣ್ಣದ ಲೋಕ ಸೃಷ್ಟಿಸಿದವು. ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರನ್ನು ಪುಳಕಿತಗೊಳಿಸಿದವು. ವಿಮಾನಗಳು ಸನಿಹದಲ್ಲೇ ಹಾರಾಡುತ್ತ ನೀಡಿದ ಸಾಹಸಮಯ ಪ್ರದರ್ಶನವನ್ನು ನೆರೆದಿದ್ದ ಸಾವಿರಾರು ಜನ ಕಣ್ತುಂಬಿಕೊಂಡರು. ಶಿಳ್ಳೆ, ಕೇಕೆ ಹಾಕಿ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಅನೇಕರು ತಮ್ಮ ಸ್ಮಾರ್ಟ್‍ಫೋನ್‍ಗಳಲ್ಲಿ ವಿಮಾನ ಪ್ರದರ್ಶನದ ದೃಶ್ಯ ಚಿತ್ರೀಕರಿಸಿದರು.

ಗ್ರುಪ್ ಕ್ಯಾಪ್ಟನ್ ಜಿ.ಎಸ್.ದಿಲ್ಲೊನ್ ನೇತೃತ್ವದಲ್ಲಿ 9 ಸೂರ್ಯಕಿರಣ ವಿಮಾನಗಳು ಪ್ರದರ್ಶನ ನೀಡಿದವು.

ಬೀದರ್ ಉತ್ಸವದ ನಂತರ ಕೋಟೆಯೊಳಗೆ ಏಕಕಾಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಕಂಡು ಬಂದರು. ಏರ್ ಶೋ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದ್ದರಿಂದ ಕೋಟೆಗೆ ಹೋಗಲಾಗದ ಅನೇಕರು ನಗರದ ವಿವಿಧೆಡೆ ವೈಮಾನಿಕ ಪ್ರದರ್ಶನದ ಅಪರೂಪದ ದೃಶ್ಯಗಳನ್ನು ವೀಕ್ಷಿಸಿದರು.

ನಗರದ ವಿವಿಧ ಶಾಲಾ, ಕಾಲೇಜುಗಳು ಏರ್ ಶೋ ಪ್ರಯುಕ್ತ ವಿದ್ಯಾರ್ಥಿಗಳನ್ನು ಬೀದರ್ ಕೋಟೆಗೆ ಕರೆದುಕೊಂಡು ಬಂದಿದ್ದವು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕೇಂದ್ರ ಬಸ್ ನಿಲ್ದಾಣ ಹಾಗೂ ಹಳೆಯ ಬಸ್ ನಿಲ್ದಾಣದಿಂದ ಕೋಟೆವರೆಗೆ ಏರ್ ಶೋ ವೀಕ್ಷಣೆಗೆ ಹೋಗುವವರಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು.

ಕೋಟೆ ಆವರಣದಲ್ಲಿ ವಾಯುಪಡೆ ತರಬೇತಿ ಕೇಂದ್ರದ ಅಧಿಕಾರಿಗಳಿಗೆ ಪ್ರತ್ಯೇಕ ಗ್ಯಾಲರಿ, ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಅಗ್ನಿಶಾಮಕ ದಳದ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಲಾಗಿತ್ತು.

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕ ರಹೀಂಖಾನ್, ಬಿಡಿಎ ಅಧ್ಯಕ್ಷ ಬಾಬುವಾಲಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ ಏರ್ ಶೋಗೆ ಸಾಕ್ಷಿಯಾದರು.

ಮೊದಲ ದಿನ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಏರ್ ಶೋ ಏರ್ಪಡಿಸಲಾಗಿತ್ತು. ಶನಿವಾರ (ಸೆ. 3) ಸಾರ್ವಜನಿಕರಿಗಾಗಿ ಏರ್ ಶೋ ನಡೆಯಲಿದೆ.

15 ಸಾವಿರ ಜನರಿಂದ ಏರ್ ಶೋ ವೀಕ್ಷಣೆ: ನಗರದ ಕೋಟೆಯಲ್ಲಿ ಹಮ್ಮಿಕೊಂಡ ಏರ್ ಶೋ ಮೊದಲ ದಿನ 12 ಸಾವಿರದಿಂದ 15 ಸಾವಿರ ಶಾಲಾ, ಕಾಲೇಜು ವಿದ್ಯಾರ್ಥಿಗಳು ವಿಮಾನಗಳ ಪ್ರದರ್ಶನ ವೀಕ್ಷಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ಏರ್ ಶೋ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಪ್ರದರ್ಶನ ವೀಕ್ಷಣೆಗೆ ಕರೆ ತರಲು ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ವಿವಿಧ ಶಾಲಾ, ಕಾಲೇಜುಗಳ 200 ಬಸ್‍ಗಳಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಣೆಗೆ ಬಂದಿದ್ದರು ಎಂದು ತಿಳಿಸಿದರು.

ಶನಿವಾರ (ಸೆ. 3) ಸಾರ್ವಜನಿಕರಿಗಾಗಿ ಏರ್ ಶೋ ಇದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.