ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು, ಗಂಡು ತಾರತಮ್ಯ ಸಲ್ಲ: ಕೆ.ಸಿ.ವೀರಣ್ಣ

ಮಹಿಳಾ ಸಾಧಕಿಯರಿಗೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ
Published 12 ಫೆಬ್ರುವರಿ 2024, 7:23 IST
Last Updated 12 ಫೆಬ್ರುವರಿ 2024, 7:23 IST
ಅಕ್ಷರ ಗಾತ್ರ

ಬೀದರ್‌: ನಾವದಗೇರಿಯ ಅಕ್ಕಮಹಾದೇವಿ ಮಹಿಳಾ ಸಭಾಂಗಣ ಉದ್ಘಾಟನೆ, ರಾಜಾರಾಮ ಮೋಹನ್‌ ರಾಯ್‌ ಅವರ 250ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆರು ಜನ ಮಹಿಳಾ ಸಾಧಕಿಯರಿಗೆ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಚಿಕಪೇಟ್‌ ಸಮೀಪ ಭಾನುವಾರ ನಡೆಯಿತು.

ರೇಷ್ಮಾ ಕೌರ್ (ಶೈಕ್ಷಣಿಕ ಕ್ಷೇತ್ರ), ಡಾ. ಗುರಮ್ಮಾ ಸಿದ್ದಾರೆಡ್ಡಿ (ಸಮಾಜ ಮತ್ತು ಮಹಿಳಾ ಸಬಲೀಕರಣ), ಶಕುಂತಲಾ ಬೆಲ್ದಾಳೆ (ಸಹಕಾರ), ಪ್ರೇಮಾ ಸಿರ್ಸೆ (ಸಾಹಿತ್ಯ), ಪ್ರೊ. ಲೀಲಾವತಿ ಚಾಕೋತೆ (ಶಿಕ್ಷಣ), ಭಾರತಿ ವಸ್ತ್ರದ್ (ಸಾಹಿತ್ಯ– ಸಂಸ್ಕೃತಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ.ವೀರಣ್ಣ ಕಾರ್ಯಕ್ರಮ ಉದ್ಘಾಟಿಸಿ, ಪುರುಷ, ಮಹಿಳೆ ಎಂಬ ಭೇದಭಾವ ಮಾಡುವುದು ಸರಿಯಲ್ಲ. ಹೋಲಿಕೆಯೂ ಸರಿಯಲ್ಲ. ಇಬ್ಬರೂ ಕೂಡಿ ಬಾಳಿದರೆ ಬದುಕು ಸುಖಮಯವಾಗುತ್ತದೆ. ಮಹಿಳೆಗೆ ಒಂದಿಷ್ಟು ಪ್ರೇರಣೆ ನೀಡಿದರೆ ಮೇಲ್ಮಟ್ಟಕ್ಕೆ ಬೆಳೆಯುತ್ತಾಳೆ ಎಂದು ತಿಳಿಸಿದರು.

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ರಾಜಾರಾಮ ಮೋಹನ್‌ ರಾಯ್‌ ಅವರು ಅಂದು ಸಮಾಜದಲ್ಲಿ ತಾಂಡವವಾಡುತಿದ್ದ ಸತಿ ಸಹಗಮನ ಪದ್ಧತಿಯನ್ನು ಹೋಗಲಾಡಿಸಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿದ್ದರು. ಅಂಧಶ್ರದ್ಧೆ, ಮೂಢನಂಬಿಕೆಯನ್ನು ಹೋಗಲಾಡಿಸಿದ್ದರು ಎಂದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನಿರ್ಮಲ್‌ ವೈದ್ಯ ಮಾತನಾಡಿ, ಹೊಟ್ಟೆಯಲ್ಲಿ ಹೆಣ್ಣಿದೆ ಎಂದು ಗೊತ್ತಾದಾಗ ಭ್ರೂಣಹತ್ಯೆ ಮಾಡುವರು. ಬರೀ ಗಂಡು ಜನಿಸಿದರೆ ಈ ಮನುಷ್ಯ ಜಾತಿಯೇ ಸರ್ವನಾಶವಾಗುತ್ತದೆ. ಮಗ ಮತ್ತು ಮಗಳಿಗೆ ಸರಿ ಸಮಾನತೆ ಇರಲಿ. ಗಂಡಿಗೆ ಸಿಗುವ ಎಲ್ಲಾ ಸೌಲಭ್ಯಗಳು ಹೆಣ್ಣಿಗೂ ಸಿಗಲಿ. ಗೃಹಲಕ್ಷ್ಮೀ ಎಂದು ಹೇಳುತ್ತಲೇ ಹೆಣ್ಣನ್ನು ಅಗೌರವದಿಂದ ನಡೆಸಿಕೊಳ್ಳದಿರಲಿ. ನಮ್ಮ ಮಗಳು ನಮ್ಮ ಹೆಮ್ಮೆ ಎಂಬ ಅಭಿಯಾನ ನಮ್ಮ ಮನೆಯಿಂದಲೇ ಆರಂಭವಾಗಲಿ ಎಂದು ಪ್ರತಿಪಾದಿಸಿದರು.

ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಹರಳಯ್ಯ ಪೀಠದ ಅಕ್ಕ ಗಂಗಾಂಬಿಕೆ,  ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ, ಅಕ್ಕಮಹಾದೇವಿ ಮಹಿಳಾ ಮಂಡಳದ ಕಾರ್ಯದರ್ಶಿ ಮಹಾದೇವಿ ಹೆಬ್ಬಾಳೆ, ಬೀದರ್‌ ವಿ.ವಿ. ಕನ್ನಡ ನಿಕಾಯದ ಡೀನ್ ಜಗನ್ನಾಥ ಹೆಬ್ಬಾಳೆ, ಕರ್ನಾಟಕ ಕೇಂದ್ರೀಯ ವಿ.ವಿ ಕಲಬುರಗಿ ಅಧ್ಯಯನಾಂಗದ ನಿರ್ದೇಶಕ ಪ್ರೊ. ಬಸವರಾಜ ಡೊಣೂರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನೋಳಿ, ಮಲ್ಲಮ್ಮ ಹೆಬ್ಬಾಳೆ, ಮಹಾನಂದ ಹೆಬ್ಬಾಳೆ, ಮಂಡಳಿಯ ಅಧ್ಯಕ್ಷೆ ನೀಲಗಂಗಾ ಹೆಬ್ಬಾಳೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಗೀತಾ ಪೋಸ್ತೆ, ಲಕ್ಷ್ಮೀ ಕುಂಬಾರ, ಸುನೀತಾ ಕೂಡ್ಲಿಕರ್, ಮಹಾನಂದ ಮಡಕಿ, ಮಾನಾ ಸಂಗೀತಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT