ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕನ ಸಂದೇಶ ಬದುಕಿಗೆ ದಾರಿದೀಪ; ಪಟ್ಟದ್ದೇವರು

Last Updated 17 ಏಪ್ರಿಲ್ 2022, 4:12 IST
ಅಕ್ಷರ ಗಾತ್ರ

ಭಾಲ್ಕಿ: ಅಕ್ಕಮಹಾದೇವಿಯ ಬದುಕು, ಬರಹ ಮನುಕುಲಕ್ಕೆ ದಾರಿದೀಪ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಒಬ್ಬ ಮಹಿಳೆ ಉಡುತಡಿಯಿಂದ ಕಲ್ಯಾಣದವರೆಗೆ ನಡೆದುಕೊಂಡು ಬಂದದ್ದು ದೊಡ್ಡ ಸಾಹಸ. ಅನುಭವ ಮಂಟಪದಲ್ಲಿ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ನಡುವಿನ ಸಂವಾದ ಆಧ್ಯಾತ್ಮ ಜಗತ್ತಿನಲ್ಲಿ ಅಪರೂಪದ್ದು. ಅಕ್ಕಮಹಾದೇವಿ ಶ್ರೇಷ್ಠ ವಚನಕಾರ್ತಿ. ಅವರ ವಚನಗಳು ನಮ್ಮ ಬದಕನ್ನು ಹಸನಗೊಳಿಸುತ್ತವೆ ಎಂದರು.

‘ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ದಾಳದೆ ಸಮಾಧಾನಿಯಾಗಿರಬೇಕು’ ಎಂಬ ವಚನದ ಸಾಲು ಸುಖಿ ಜೀವನದ ಪಾಠವನ್ನು ತಿಳಿಸಿಕೊಡುತ್ತದೆ ಎಂದು ಹೇಳಿದರು.

ಅಕ್ಕನ ಬಳಗದವರು ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀದೇವಿ ಶಾಂತಯ್ಯ ಸ್ವಾಮಿ, ರಾಮಚಂದ್ರ ಯರನಾಳೆ, ಪ್ರೇಮಲಾ ತೊಂಡಾರೆ, ರೇಖಾಬಾಯಿ ಅಷ್ಟೂರೆ, ತಾರಾಮತಿ ಕರಕಾಳೆ, ಪುಷ್ಪಾ ಗಂಗೆ, ಶ್ರೀದೇವಿ ಪಟ್ನೆ, ತೇಜಮ್ಮ ಕಾರಾಮುಂಗೆ, ರೇಖಾ ತೊಂಡಾರೆ, ನಾಗಮ್ಮ ಕೊಡಗೆ, ಲಲಿತಾಬಾಯಿ ಮೀನಕೆರೆ, ಆಶಾ ರಕ್ಷೆ, ಬಸಮ್ಮತಾಯಿ ಇದ್ದರು.

‘ಅಕ್ಕಮಹಾದೇವಿ ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿ’

ಭಾಲ್ಕಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಕೊಡಿಸಲು ಶ್ರಮಿಸಿದ್ದ ಅಕ್ಕಮಹಾದೇವಿ ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿ ಆಗಿದ್ದರು ಎಂದು ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ, ವಚನಗಾರ್ತಿ ಆಗಿರುವ ಅಕ್ಕಮಹಾದೇವಿ ಅವರು ವಚನ ಶರಣರಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಚಿಕ್ಕ ವಯಸ್ಸಿನಲ್ಲಿ ಸುಖವನ್ನು ತ್ಯಜಿಸಿದ್ದ ಅವರು, ಎದುರಿಸಿದ ಕಷ್ಟ, ಪರೀಕ್ಷೆಗಳು ಅಪಾರ. ಸಾಕ್ಷಾತ್‌ ಶಿವನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ ಕೇಶಾಂಬರೆಯಾಗಿ ಹೊರಟಿದ್ದ ಅಕ್ಕಮಹಾದೇವಿ ಅಸಂಖ್ಯ ಭಕ್ತರಿಗೆ ಮಾದರಿ ಆಗಿದ್ದರು ಎಂದರು.

ಜೀವನದಲ್ಲಿ ಉನ್ನತವಾದದ್ದನ್ನು ಸಾಧಿಸಲು ನೆಮ್ಮದಿಯಿಂದ ಬದುಕಲು ಎಲ್ಲರೂ ಅಕ್ಕನ ವಚಗಳನ್ನು ಅಧ್ಯಯನ ಮಾಡಬೇಕು. ಅವುಗಳ ಆಶಯದಂತೆ ಬದುಕಬೇಕು ಎಂದು ತಿಳಿಸಿದರು.

ಶಾಖಂಬರಿ, ಸ್ನೇಹಾ ಪಾಟೀಲ ಮಾತನಾಡಿದರು. ಪ್ರಾಚಾರ್ಯ ಬಸವರಾಜ್‌ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ನಾಗೇಶ, ಸಪ್ನಾ ಇದ್ದರು.

ಸ್ಪೂರ್ತಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಪ್ರೀತಿ ಸ್ವಾಗತಿಸಿದರು. ಸಂಜನಾ ನಿರೂಪಿಸಿದರು. ನಂದಿತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT