ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಭಾರತದ ಪಿತಾಮಹ ಅಂಬೇಡ್ಕರ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣನೆ

Last Updated 6 ಡಿಸೆಂಬರ್ 2021, 8:17 IST
ಅಕ್ಷರ ಗಾತ್ರ

ಬೀದರ್: ‘ಬಾಬಾಸಾಹೇಬರು ಗಟ್ಟಿಯಾದ ಸಂವಿಧಾನ ಬರೆಯುವ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಸಂವಿಧಾನದ ಮೂಲಕವೇ ಸರ್ವರಿಗೂ ಸಮಾನತೆ ಹಾಗೂ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಅವರು ಆಧುನಿಕ ಭಾರತದ ಪಿತಾಮಹ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 65ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಬಾಬಾಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ‘ಎಲ್ಲರೂ ಬಾಬಾಸಾಹೇಬರ ತತ್ವ ಹಾಗೂ ಆದರ್ಶ ಪಾಲಿಸಿ ಅವರಿಗೆ ಗೌರವ ಸಲ್ಲಿಸೋಣ’ ಎಂದರು.

‘ಅಂಬೇಡ್ಕರ್ ಶೋಷಿತರಿಗೆ ಹಾಗೂ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಅವರು ಬರೆದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಸಂವಿಧಾನ ನಮ್ಮ ದೇಶದ ಧರ್ಮಗ್ರಂಥವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಹೇಳಿದ್ದಾರೆ. ಬಿಜೆಪಿ ಸರ್ಕಾರ ಸಂವಿಧಾನ ಬದ್ಧವಾಗಿ ಆಡಳಿತ ನಡೆಸಲಿದೆ’ ಎಂದು ಹೇಳಿದರು.

‘ನಗರದಲ್ಲಿ ಅಂಬೇಡ್ಕರ್‌ ಸಮುದಾಯ ಭವನ ನಿರ್ಮಾಣಕ್ಕೆ ಬುದ್ಧಿಸ್ಟ್‌ ಸೊಸೈಟಿ ಆಫ್‌ ಇಂಡಿಯಾ ₹ 5 ಕೋಟಿ ಅನುದಾನ ಕೇಳಿದೆ. ತಕ್ಷಣ ಹಣ ಬಿಡುಗಡೆ ಮಾಡುವೆ ಹಾಗೂ ಕಟ್ಟಡದ ಉದ್ಘಾಟನೆಗೂ ಬರುವೆ’ ಎಂದು ಭರವಸೆ ನೀಡಿದರು.

ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಶಾಸಕರಾದ ಬಂಡೆಪ್ಪ ಕಾಶೆಂಪೂರ, ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಕೆಎಸ್‌ಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಡಿ.ಕೆ.ಸಿದ್ರಾಮ, ಹಣಮಂತ ಬುಳ್ಳಾ, ಅಶೋಕ ಹೊಕ್ರಾಣೆ ಇದ್ದರು.

ವಿವಿಧ ಸಂಘಟನೆಗಳ ಮುಖಂಡರಾದ ಮಾರುತಿ ಬೌದ್ಧೆ, ಅನಿಲಕುಮಾರ ಬೆಲ್ದಾರ್, ಬಾಬು ಪಾಸ್ವಾನ್, ಸುಬ್ಬಣ್ಣ ಕರಕನಳ್ಳಿ, ವಿಜಯಕುಮಾರ ಸೋನಾರೆ, ವಿಜಯಕುಮಾರ ಕೌಡ್ಯಾಳ, ಲುಂಬಿಣಿ ಗೌತಮ ಪಾಲ್ಗೊಂಡಿದ್ದರು.

* * *
ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಪಣೆ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 64ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಸಮತಾ ಸೈನಿಕ ದಳ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ದಲಿತರು ಬಾಬಾಸಾಹೇಬ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಬಾಬಾಸಾಹೇಬರ ಅಭಿಮಾನಿಗಳು ಪ್ರತಿಮೆ ಬಳಿ ಮೇಣದಬತ್ತಿಯನ್ನು ಬೆಳಗಿಸಿ ಭಕ್ತಭಾವ ಮೆರೆದರು. ಭಾರತೀಯ ಬೌದ್ಧ ಮಹಾಸಭಾದ ನೇತೃತ್ವದಲ್ಲಿ ಸಮತಾ ಸೈನಿಕ ದಳದ ಮಹಿಳಾ ಕಾರ್ಯಕರ್ತೆಯರು ಜನವಾಡ ರಸ್ತೆಯಲ್ಲಿರುವ ಬೌದ್ಧ ವಿಹಾರದಿಂದ ಡಾ.ಅಂಬೇಡ್ಕರ್‌ ವೃತ್ತದ ವರೆಗೆ ಪಥಸಂಚಲನ ನಡೆಸಿದರು.

ಅಂಬೇಡ್ಕರ್‌ ಪ್ರತಿಮೆ ಸಮ್ಮುಖದಲ್ಲಿ ಪರೇಡ್‌ ನಡೆಸಿ ಗೌರವ ವಂದನೆ ಸಲ್ಲಿಸಿದರು. ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ಮಾತನಾಡಿದರು.

ಜಾನಪದ ಅಕಾಡೆಮಿ ಮಾಜಿ ಸದಸ್ಯ ವಿಜಯಕುಮಾರ ಸೋನಾರೆ, ಪರಿನಿರ್ವಾಣ ಆಯೋಜನಾ ಸಮಿತಿಯ ವಿನಯ ಮಾಳಗೆ, ಮಹೇಶ ಗೋರನಾಳಕರ್, ಸಂದೀಪ್ ಕಾಂಟೆ, ಡಾ.ಸುಜಾತಾ ಹೊಸಮನಿ, ಶ್ರೀ‍ಪತರಾವ್‌ ದೀನೆ, ಶಿವಕುಮಾರ ನೀಲಿಕಟ್ಟಿ, ಅರುಣ ಕುದರೆ, ಉಮೇಶ ಸ್ವಾರಳ್ಳಿಕರ್, ಕಲ್ಯಾಣರಾವ್ ಭೋಸಲೆ, ವಿನೋದ ಅಪ್ಟೆ, ಪ್ರದೀಪ ನಾಟೇಕರ್, ಮಲ್ಲಿಕಾರ್ಜುನ ಚಿಟ್ಟಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT