ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ | ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು

Published 26 ಡಿಸೆಂಬರ್ 2023, 6:49 IST
Last Updated 26 ಡಿಸೆಂಬರ್ 2023, 6:49 IST
ಅಕ್ಷರ ಗಾತ್ರ

ಹುಲಸೂರ: ಐದೇ ಐದು ಜನ ಕುಳಿತುಕೊಳ್ಳಬಹುದಾದ ಜಾಗದಲ್ಲಿ 30ಕ್ಕೂ ಹೆಚ್ಚು ಮಕ್ಕಳನ್ನು ಕೂಡಿಸಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.

ತಾಲ್ಲೂಕಿನ ವಾಂಜರವಾಡಿ, ಬೇಲುರ, ಹುಲಸೂರ, ಆನಂದವಾಡಿ, ಹಾಲಹಳ್ಳಿ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆಗೆ ತಕ್ಕಂತೆ ಜಾಗವಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂಡು ಕುಳಿತು ಪಾಠ ಕೇಳುವ ಸ್ಥಿತಿ ಇದೆ. ಇವುಗಳು ಸಹ ಸುಮಾರು ವರ್ಷ ಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಪ್ಪಂದದ ಪ್ರಕಾರ ಕಟ್ಟಡಕ್ಕೆ ತಿಂಗಳಿಗೆ ₹1 ಸಾವಿರದಿಂದ ₹1,500 ಬಾಡಿಗೆ ಪಾತಿಸಲಾಗುತ್ತಿದೆ. ‘ದಶಕಗ ಳಿಂದ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರ್ಕಾರದ ಕಟ್ಟಡ ಲಭಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ನೌಕರರೂ ನೆಮ್ಮದಿಯಿಂದ ಕೆಲಸ ಮಾಡಬಹುದು. ಆದರೆ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಅಳಲು. ಹಲವೆಡೆ ಸ್ವಂತ ಕಟ್ಟಡವಿದ್ದರೂ ಅಡುಗೆ ಮನೆ, ಫ್ಯಾನ್ ವ್ಯವಸ್ಥೆ ಹಾಗೂ ವಿದ್ಯುತ್‌ ಸಂಪರ್ಕ ಇಲ್ಲ. ಅಂಗನವಾಡಿ ಕೇಂದ್ರ ಎಂದು ನಾಮಫಲಕ ಹಾಕುವುದಕ್ಕೂ ಜಾಗ ಸಾಕಾಗುತ್ತಿಲ್ಲ. ಪ್ರತ್ಯೇಕ ಶೌಚಾಲಯವಂತೂ ಇಲ್ಲವೇ ಇಲ್ಲ. ಹೀಗಾಗಿ ಅಂಗನವಾಡಿ ಸ್ಥಾಪನೆಯ ಮೂಲ ಉದ್ದೇಶವೇ ಇಲ್ಲಿ ಈಡೇರದಂತಾಗಿದೆ.

‘ಬಾಡಿಗೆ ಪಾವತಿಸದ ಇಲಾಖೆ’

‘ಬಾಡಿಗೆ ಕಟ್ಟಡದಲ್ಲಿ ಬಹಳ ಸಮಸ್ಯೆಗಳಿವೆ. ಮಾಲೀಕರು ಪದೇ ಪದೇ ಬಾಡಿಗೆ ಹೆಚ್ಚು ಮಾಡಿ ಎಂದು ಕೇಳುತ್ತಾರೆ. ಬೇರೆಯವರು ತಮ್ಮ ಮನೆಯನ್ನು ಬಾಡಿಗೆಗೆ ಕೊಡಲು ಹಿಂಜರಿಯುತ್ತಿದ್ದಾರೆ. ಮಕ್ಕಳಿಗೆ ಕುಳಿತುಕೊಳ್ಳಲು ಸಾಕಷ್ಟು ಸಮಸ್ಯೆಯಾಗುತ್ತಿದೆ. ನಮಗೆ ಸ್ವಂತ ಕಟ್ಟಡ ಕಟ್ಟಿಸಿಕೊಟ್ಟರೆ ಉತ್ತಮ. ಬಾಡಿಗೆ ಹಣವನ್ನೂ ಸರ್ಕಾರ ಕೊಡುತ್ತಿಲ್ಲ. ನಾವೇ ಹಣ ಕಟ್ಟುವಂಥ ಸ್ಥಿತಿ ಇದೆ’ ಎಂದು ಅಂಗನವಾಡಿ ಕಾರ್ಯಕರ್ತೆಯರು ತಿಳಿಸುತ್ತಾರೆ. 

ಸಮಸ್ಯೆ ಗಮನಕ್ಕೆ ಬಂದಿದೆ. ಕಟ್ಟಡ ನಿರ್ಮಿಸುವುದಕ್ಕೆ ಜಾಗದ ಸಮಸ್ಯೆ ಇದೆ. ಮೇಲಧಿಕಾರಿಗಳಿಗೆ ಈ ಬಗ್ಗೆ ತಿಳಿಸುತ್ತೇನೆ.
–ಗೌತಮ ಕಾಂಬಳೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಸವಕಲ್ಯಾಣ
ಅಂಗನವಾಡಿಗೆ ಭೇಟಿ ನೀಡಿದಾಗ ಕಲಿಕೆಗೆ ಸೂಕ್ತ ವಾತಾವರಣ ಇರಲಿಲ್ಲ. ಬಾಡಿಗೆ ಮನೆಯಲ್ಲಿ ವ್ಯವಸ್ಥೆ ಕಲ್ಪಿಸಿದ್ದೇವೆ. ಶೌಚಾಲಯ ಸೇರಿ ಮೂಲ ಸೌಕರ್ಯ ಒದಗಿಸಲಾಗುವುದು.
–ಜಗದೀಶ, ಪಿಡಿಒ, ಮೀರಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT