ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಅನಾಮಧೇಯ ಬಿತ್ತನೆ ಬೀಜ: ಎಚ್ಚರಿಕೆ ವಹಿಸಿ

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್ ಹೇಳಿಕೆ
Last Updated 3 ಜೂನ್ 2021, 17:12 IST
ಅಕ್ಷರ ಗಾತ್ರ

ಬೀದರ್: ಅನಾಮಧೇಯ ಬಿತ್ತನೆ ಬೀಜಗಳ ಕುರಿತು ರೈತರು ಎಚ್ಚರಿಕೆ ವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್ ತಿಳಿಸಿದ್ದಾರೆ.

ಕೆಲ ತಿಂಗಳಿಂದ ಮೂಲ ಇಲ್ಲದ ಬೀಜಗಳ ಪಾರ್ಸೆಲ್ ಅಮೆರಿಕ, ಕೆನಡಾ, ಇಂಗ್ಲಂಡ್, ನ್ಯೂಜಿಲಂಡ್, ಜಪಾನ್ ಹಾಗೂ ಯುರೋಪಿನ್ ದೇಶಗಳಲ್ಲಿನ ರೈತರಿಗೆ ಸರಬರಾಜು ಆಗಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.

ವಿದೇಶಗಳಲ್ಲಿ ಸಾವಿರಾರು ಬೀಜಗಳ ಕಳ್ಳಸಾಗಣೆಯಾಗುತ್ತಿರುವ ಕುರಿತು ವರದಿಯಾಗಿದೆ. ಅಮೆರಿಕ ದೇಶವು ಈ ವ್ಯವಹಾರವನ್ನು ಬ್ರಶಿಂಗ್ ಸ್ಕ್ಯಾಮ್ ಹಾಗೂ ಅಗ್ರಿಕಲ್ಚರ್ ಸ್ಮಗ್‍ಲಿಂಗ್ ಎಂದು ಕರೆದಿದೆ ಎಂದು ತಿಳಿಸಿದ್ದಾರೆ.

ಮೂಲ ಇಲ್ಲದ ಬಿತ್ತನೆ ಬೀಜಗಳ ಪಾರ್ಸೆಲ್ ಪಡೆಯುವುದರಿಂದ ಮುಂದಿನ ದಿನಗಳಲ್ಲಿ ಆ ಬೀಜಗಳಲ್ಲಿ ಹೊಸ ರೋಗ ಹಾಗೂ ಕೀಟಗಳು ಕಂಡುಬರುವ ಸಂಭವ ಇದೆ. ಪರಿಸರ, ಕೃಷಿ ವೈವಿಧ್ಯತೆ ಹಾಗೂ ರಾಷ್ಟ್ರೀಯ ಭದ್ರತೆಗೂ ಧಕ್ಕೆ ಉಂಟಾಗಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ರೈತರು, ಕೃಷಿ ಪರಿಕರ ಮಾರಾಟಗಾರರು ಹಾಗೂ ಸಾರ್ವಜನಿಕರು ಸರಬರಾಜಿನ ಮೂಲ ಕುರಿತು ನಿಖರ ಮಾಹಿತಿ ಇಲ್ಲದಿದ್ದಲ್ಲಿ ಅಂತಹ ಪಾರ್ಸೆಲ್ ಬೀಜಗಳನ್ನು ಪಡೆಯಬಾರದು. ಅಂತಹ ಬೀಜದ ಪೊಟ್ಟಣಗಳ ಪಾರ್ಸೆಲ್ ಬಂದರೆ ವಾಪಸ್ ಕಳಿಸಬೇಕು. ಒಂದು ವೇಳೆ ಸ್ವೀಕರಿಸಿದರೂ ಸುಟ್ಟು ಹಾಕಬೇಕು. ಇಲ್ಲವೇ ಸಮೀಪದ ಕೃಷಿ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಬಿತ್ತನೆ ಬೀಜ ವಿತರಣೆ:ಜಿಲ್ಲೆಯ ಎಲ್ಲ ರೈತರ ಕೇಂದ್ರಗಳಲ್ಲಿ ಗುರುವಾರ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು.

ಬೀದರ್‌ ತಾಲ್ಲೂಕಿನಲ್ಲಿ ಶಾಸಕ ರಹೀಂ ಖಾನ್‌, ಬೀದರ್‌ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಯಾ ಅಧ್ಯಕ್ಷರು ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು.

ಲಾಕ್‌ಡೌನ್‌ ಇದ್ದರೂ ಜಿಲ್ಲಾಡಳಿತ ಬೆಳಿಗ್ಗೆ ಬೀಜ ಖರೀದಿಗೆ ಅವಕಾಶ ನೀಡಿದ್ದರಿಂದ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಬಂದು ಬಿತ್ತನೆ ಬೀಜ ಖರೀದಿಸಿದರು.

ಸೋಯಾಬೀನ್ ರಿಯಾಯಿತಿ ದರದಲ್ಲಿ ಕೊಡಿ
ಬೀದರ್:
ಸೋಯಾಬೀನ್ ಬಿತ್ತನೆ ಬೀಜ ರೈತರಿಗೆ ರಿಯಾಯಿತಿ ದರದಲ್ಲಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ಹಾಗೂ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಈ ಕುರಿತು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ್ದಾರೆ.

ಪ್ರಸ್ತುತ ಸೋಯಾಬೀನ್ ಬೀಜದ ದರ ಪ್ರತಿ ಕೆ.ಜಿ ಗೆ ₹ 104 ಇದೆ. ಸಾಮಾನ್ಯ ರೈತರಿಗೆ ಶೇ 50 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ 60ರಷ್ಟು ರಿಯಾಯಿತಿ ದರದಲ್ಲಿ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT