ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ ನಿರ್ಮಾಣ ಮೇ ನಲ್ಲಿ ಆರಂಭ

ಕಲ್ಯಾಣ ಕರ್ನಾಟಕ ಯಾತ್ರಾ ಪರ್ವಕ್ಕೆ ಸಿಎಂ ಚಾಲನೆ
Last Updated 9 ಏಪ್ರಿಲ್ 2022, 15:45 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್ ಜಿಲ್ಲೆ): ಇಲ್ಲಿಯ ನೂತನ ಅನುಭವ ಮಂಟಪದ ನಿರ್ಮಾಣ ಕಾರ್ಯ ಮೇ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಸವಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ವಿಕಾಸ ಅಕಾಡೆಮಿ ವತಿಯಿಂದ ನಗರದ ತೇರು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಸವಕಲ್ಯಾಣವನ್ನು ಸುಂದರ ಸಾಂಸ್ಕೃತಿಕ ನಗರವನ್ನಾಗಿಸುವ ವಿವಿಧ ಯೋಜನೆಗಳ ‘ಕಲ್ಯಾಣ ಕರ್ನಾಟಕ ಯಾತ್ರಾ ಪರ್ವ (ಮುಂದಿನ ಐದು ವರ್ಷಗಳ ಯೋಜನೆ) ಅನಾವರಣ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅನುಭವ ಮಂಟಪ ನಿರ್ಮಾಣಕ್ಕೆ ಬಜೆಟ್‌ನಲ್ಲಿ ₹ 500 ಕೋಟಿ ಅನುದಾನ ಒದಗಿಸಿದರು. ಇದಕ್ಕೆ ಅವರ ಬದ್ಧತೆಯೇ ಕಾರಣವಾಗಿದೆ. ಅನುಭವ ಮಂಟಪ ನಿರ್ಮಾಣದ ಜತೆಗೆ ಪರುಷ ಕಟ್ಟೆ, ಇತರ ಸ್ಮಾರಕಗಳ ಅಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ’ ಎಂದರು.

ಅನುಭವ ಮಂಟಪ ನಿರ್ಮಾಣ ಪೂರ್ಣಗೊಳ್ಳುವುದರಲ್ಲಿ ವೈಚಾರಿಕ ಕ್ರಾಂತಿ ಮಾಡಲು ಬಸವರಾಜ ಪಾಟೀಲ ಸೇಡಂ ಪಣ ತೊಟ್ಟಿದ್ದಾರೆ. 12ನೇ ಶತಮಾನದ ಸಾಮಾಜಿಕ ಚಿಂತನೆ ಮತ್ತೆ ಶುರುವಾಗಬೇಕು. ಎಲ್ಲ ತರಹದ ವಿಚಾರಗಳು ಇಲ್ಲಿ ಚರ್ಚೆಗೆ ಬರಬೇಕು ಎಂದು ಹೇಳಿದರು.

ಸನ್ಮಾನ: ನಾಲ್ಕು ಶತಮಾನಗಳಿಂದ ಪರುಷಕಟ್ಟೆಯ ಜಾಗದ ಸಮಸ್ಯೆ ಇತ್ತು. ಅದನ್ನು ಬಗೆಹರಿಸುವಲ್ಲಿ ಸಹಕರಿಸಿದ ಹಾಗೂ ಮುಸ್ಲಿಮರ ಕೆಲ ಮನೆಗಳನ್ನು ತೆರವುಗೊಳಿಸಿ ಪರುಷಕಟ್ಟೆಗೆ ಹೆಚ್ಚಿನ ಜಾಗ ಒದಗಿಸುವ ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡಿದ ಜಮೈತ್ ಉಲ್ ಕುರೇಶಿ ಸಮಾಜ ಸಂಘದ ಸಲಹಾ ಮಂಡಳಿ ಅಧ್ಯಕ್ಷ ಮುಜಾಹಿದ್‌ಪಾಷಾ ಕುರೇಶಿ, ಅಬ್ದುಲ್ ಗಫಾರಸಾಬ್ ಕುರೇಶಿ, ಮುಸ್ತಾಕ್ ಚೌಧರಿ, ಯುನೂಸ್ ಕುರೇಶಿ ಹಾಗೂ ಅಕ್ಬರ್ ಅಲಿ ಕುರೇಶಿ ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.

ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಚಿವ ಪ್ರಭು ಚವಾಣ್‌ ಹಾಗೂ ಜಿಲ್ಲೆಯ ಮಠಾಧೀಶರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT