ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿಯಾಗಿ ನೆರವೇರಿದ ಅನುಭವ ಮಂಟಪದ ಭೂಮಿಪೂಜೆ

ಮಠಾಧೀಶರು, ರಾಜಕೀಯ ಮುಖಂಡರ ಸಮ್ಮುಖದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪೂಜೆ
Last Updated 7 ಜನವರಿ 2021, 3:48 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿ ಬುಧವಾರ ನೂತನ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಬಸವಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ‘ಬಸವಣ್ಣ ನವರಿಗೆ ಜಯವಾಗಲಿ’, ‘ಅನುಭವ ಮಂಟಪಕ್ಕೆ ಜಯವಾಗಲಿ’ ಎಂದು ಜಯಘೋಷ ಕೂಗಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ಬೀದರ್‌ನಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು 12.30 ಕ್ಕೆ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣದ ಕ್ರೀಡಾಂಗಣಕ್ಕೆ ಬಂದಿಳಿದರು. ನಂತರ ವಾಹನದ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಬಂದು ಭೂಮಿ ಪೂಜೆ ನೆರವೇರಿಸಿದರು. ವೇದಿಕೆಗೆ ಬರುವ ಮೊದಲು ಅದರ ಪಕ್ಕದಲ್ಲಿಯೇ ವ್ಯವಸ್ಥೆಗೊಳಿಸಲಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪುಷ್ಪಗಳಿಂದ ಅಲಂಕೃತವಾದ ಬಸವಣ್ಣನವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಭೂಮಿಪೂಜೆಗೈದರು.

ಅದೇ ಸ್ಥಳದಲ್ಲಿ ಮೈಕ್ ಹಿಡಿದು ಮಾತನಾಡಲು ಆರಂಭಿಸಿದ ಯಡಿಯೂರಪ್ಪ, ‘ಇದೊಂದು ನನ್ನ ಜೀವನದ ಅಪೂರ್ವ ಹಾಗೂ ಐತಿಹಾಸಿಕ ಕ್ಷಣವಾಗಿದೆ. ಈ ಭಾಗ ದವರ ಬಹುದಿನದ ಬೇಡಿಕೆಯಾಗಿದ್ದ ಹಾಗೂ ಜಗತ್ತಿಗೆ ಇಂದು ಅತ್ಯಂತ ಅವಶ್ಯಕವಾಗಿರುವ ಸಮಾನತೆಯ ತತ್ವ ಸಾರಿದ ಬಸವಾದಿ ಶರಣರ ಸಂದೇಶ ಸಾರುವ ಸದುದ್ದೇಶದ ಅನುಭವ ಮಂಟಪ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ನನ್ನ ಪುಣ್ಯ. ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಲಿರುವ ಈ ಕಟ್ಟಡ 2 ವರ್ಷದಲ್ಲಿ ಸಿದ್ಧವಾಗುವಂತೆ ಪ್ರಯತ್ನಿಸುತ್ತೇನೆ’ ಎಂದರು.

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ವಚನಗಳನ್ನು ಹೇಳಿದರು. ಹಾರಕೂಡ ಚನ್ನವೀರ ಶಿವಾಚಾರ್ಯ, ಬೆಲ್ದಾಳ ಸಿದ್ದರಾಮ ಶರಣರು, ಹುಲಸೂರ ಶಿವಾನಂದ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯ, ಗುರುಬಸವ ಪಟ್ಟದ್ದೇವರು, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಕೆ.ಸುಧಾಕರ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದರಾದ ಭಗವಂತ ಖೂಬಾ, ಡಾ.ಉಮೇಶ ಜಾಧವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್, ರಘುನಾಥ ಮಲ್ಕಾಪುರೆ, ಶಶೀಲ್ ನಮೋಶಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಸಾಹಿತಿ ಗೊ.ರು.ಚನ್ನಬಸಪ್ಪ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಉಪಸ್ಥಿತರಿದ್ದರು.

ಸಮಾರಂಭದ ಆಮಂತ್ರಣ ಪತ್ರದಲ್ಲಿ ಈ ಭಾಗದ ಮಠಾಧೀಶರ ಹೆಸರು ಕೈ ಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ ಇನ್ನೊಂದು ಆಮಂತ್ರಣ ಪತ್ರಿಕೆಯಲ್ಲಿ ಕೊನೆ ಗಳಿಗೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಮಠಾಧೀಶರಿಗೆ ಹಾಗೂ ಈ ಭಾಗದ ಎಲ್ಲ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿದ ಕಾರಣ ಪಕ್ಷಭೇದ ಮರೆತು ಎಲ್ಲರೂ ಪಾಲ್ಗೊಂಡಿದ್ದರು. ಹತ್ತಾರು ಮಠಾಧೀಶರು ಇದ್ದರು.

ಊಟದ ವ್ಯವಸ್ಥೆ
ಕಾರ್ಯಕ್ರಮದ ಸ್ಥಳದಲ್ಲಿ ಹಾಗೂ ಅಲ್ಲಿಗೆ ಸಮೀಪದ ಮುಖಂಡ ಶರಣು ಸಲಗರ ಅವರ ಕಾರ್ಯಾಲಯದ ಹತ್ತಿರವೂ ಜನರಿಗೆ ಊಟದ ವ್ಯವಸ್ಥೆ ಇತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ಅವರು ಯಡಿಯೂರಪ್ಪ ಅವರಿಗೆ 25 ಅಡಿ ಉದ್ದದ ದೊಡ್ಡ ಪುಷ್ಪಮಾಲೆ ಹಾಕಿ ಸತ್ಕರಿಸಿದರು.

ಹೆಲಿಪ್ಯಾಡ್ ಸ್ಥಳವಾದ ಸರ್ಕಾರಿ ಕ್ರೀಡಾಂಗಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಹಾಗೂ ನಗರದ ಮುಖ್ಯ ರಸ್ತೆಯಲ್ಲಿ ಕಟೌಟ್, ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಬಿಜೆಪಿ ಧ್ವಜಗಳನ್ನು ಅಲ್ಲಲ್ಲಿ ತೋರಣದಂತೆ ಕಟ್ಟಿ ಸಿಂಗರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT