ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಬ್ಯಾಂಕ್‌ ರಾಜಕಾರಣದಿಂದ ಪ್ರತ್ಯೇಕ ಧರ್ಮ ಮಾನ್ಯತೆಗೆ ಹಿನ್ನಡೆ: ಸಾಣೆಹಳ್ಳಿ ಶ್ರೀ

ಅನುಭವ ಮಂಟಪ ಉತ್ಸವದಲ್ಲಿ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅಸಮಾಧಾನ
Last Updated 27 ನವೆಂಬರ್ 2022, 16:08 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಮತಬ್ಯಾಂಕ್ ರಾಜಕೀಯದಿಂದಾಗಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಸಿಗುವಲ್ಲಿ ಹಿನ್ನಡೆಯಾಗಿದೆ. ಸರ್ಕಾರದಿಂದ ಈ ಬಗ್ಗೆ ಘೋಷಣೆ ಆಗದಿದ್ದರೂ ಲಿಂಗಾಯತ ಎಂಬುದು ಮೊದಲಿನಿಂದಲೂ ಧರ್ಮವೇ ಆಗಿದೆ’ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಅನುಭವ ಮಂಟಪ ಉತ್ಸವದ ಎರಡನೇ ದಿನದ ‘ಲಿಂಗಾಯತ ಧರ್ಮ ಜಾಗತಿಕ ಪ್ರಸಾರದ ರೀತಿ’ ಗೊಷ್ಠಿಯಲ್ಲಿ ಅವರು ಮಾತನಾಡಿದರು.

‘ಕೆಲವರು ಲಿಂಗಾಯತ ಎಂಬುದನ್ನು ಜಾತಿ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಇದನ್ನು ಒಳಪಂಗಡಗಳಲ್ಲಿ ವಿಂಗಡಿಸುವುದು ಕೂಡ ತಪ್ಪು. ಕೆಲವರು ರಾಜಕೀಯ ಹಿತಾಸಕ್ತಿಗಾಗಿ ಸಮಾಜವನ್ನು ಒಡೆಯುತ್ತಿದ್ದಾರೆ. ಇಷ್ಟಲಿಂಗ ಕಟ್ಟಿಕೊಂಡವರು ವೈದಿಕತೆ ಆಚರಿಸಬಾರದು. ಮಠಾಧೀಶರಿಂದ ಮೌಢ್ಯಾಚರಣೆ ಸಲ್ಲ. ಹೋಮ–ಹವನ ನಡೆಸುವುದು ಬಸವತತ್ವಕ್ಕೆ ವಿರುದ್ಧವಾಗಿದೆ. ಎಲ್ಲ ಭಾಷೆಗಳಲ್ಲಿ ವಚನಗಳ ಪ್ರಕಟಣೆಗೆ ಸರ್ಕಾರ ಅನುದಾನ ನೀಡಬೇಕು. ಗುಡಿ ಗುಂಡಾರಕ್ಕಿಂತ ತತ್ವವಾದಿಯಾಗಿ ಬದುಕಬೇಕು’ ಎಂದರು.

ಗೌರಿಗದ್ದೆಯ ವಿನಯ್ ಗುರೂಜಿ ಮಾತನಾಡಿ, ‘ಬಸವಣ್ಣನವರನ್ನು ನಮ್ಮ ಬದುಕಿನ ಮೂಲಕ ಜೀವಂತವಾಗಿ ಇಡಬೇಕು’ ಎಂದರು.

ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಬಸವತತ್ವ ರಾಷ್ಟ್ರದಲ್ಲೆಲ್ಲ ಹಾಗೂ ವಿಶ್ವವ್ಯಾಪಿಯಾಗಿ ಬೆಳೆಯಬೇಕು. ಆದರೆ, ರಾಜ್ಯದ ಕೆಲ ಭಾಗದಲ್ಲಿಯೇ ಇದರ ಮಾಹಿತಿ ಇಲ್ಲ. ಕುಳಬಾನದ ಸುತ್ತ ಕುಳ್ಳು ಆಯುವಂತೆ ನಾವೆಲ್ಲ ಇಲ್ಲೇ ಸುತ್ತುತ್ತಿರುವುದೇ ಇದಕ್ಕೆ ಕಾರಣ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ’ ಎಂದರು.

ಬಸವ ಬೆಳವಿ ಶರಣಬಸವ ಸ್ವಾಮೀಜಿ, ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಬೇಲೂರಿನ ಪಂಚಾಕ್ಷರಿ ಸ್ವಾಮೀಜಿ, ಅಕ್ಕ ಗಂಗಾಂಬಿಕಾ, ಬಸವಪ್ರಭು ಸ್ವಾಮೀಜಿ, ಭೀಮರಾವ ಪಾಟೀಲ, ಆನಂದ ದೇವಪ್ಪ ಹಾಗೂ ಮಹಾಂತೇಶ ಕುಂಬಾರ ಮಾತನಾಡಿದರು.

ಮಾಜಿ ಸಚಿವ ಚಂದ್ರಕಾಂತ ಬೆಲ್ಲದ, ಬಸವರಾಜ ಪಾಟೀಲ ಸೇಡಂ, ಶಾಸಕ ಶರಣು ಸಲಗರ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಮುಖಂಡರಾದ ಶಾಂತಪ್ಪ ಪಾಟೀಲ, ಸಂಜೀವ ವಾಡಿಕರ್, ಧನರಾಜ ತಾಳಂಪಳ್ಳಿ, ವೈಜನಾಥ ಕಾಮಶೆಟ್ಟಿ, ಮಲ್ಲಿಕಾರ್ಜುನ ಗುಂಗೆ, ಶಿವರಾಜ ನರಶೆಟ್ಟಿ, ಪ್ರದೀಪ ವಾತಡೆ ಹಾಗೂ ಬಸವರಾಜ ಬುಳ್ಳಾ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT