ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.23, 24ಕ್ಕೆ ಅನುಭವ ಮಂಟಪ ಉತ್ಸವ

ಈ ಬಾರಿ ವಚನ ಸಂಗೀತಕ್ಕೆ ಆದ್ಯತೆ
Last Updated 18 ನವೆಂಬರ್ 2019, 13:55 IST
ಅಕ್ಷರ ಗಾತ್ರ

ಬೀದರ್: ನಲವತ್ತನೆಯ ಶರಣ ಕಮ್ಮಟ ‘ಅನುಭವ ಮಂಟಪ ಉತ್ಸವ’ ನ.23 ಹಾಗೂ 24 ರಂದು ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ನಡೆಯಲಿದೆ. ಈ ಬಾರಿಯ ಉತ್ಸವದಲ್ಲಿ ಉಪನ್ಯಾಸಕ್ಕಿಂತಲೂ ವಚನ ಸಂಗೀತಕ್ಕೆ ಪ್ರಾಮುಖ್ಯ ನೀಡಲಾಗಿದೆ.

ಎರಡು ದಿನಗಳ ಉತ್ಸವದಲ್ಲಿ ಗಾಯಕಿ ಸಂಗೀತಾ ಕಟ್ಟಿ, ವಿಶ್ವರಾಜ ರಾಜಗುರು, ಶಿವಕುಮಾರ ಪಾಂಚಾಳ, ಜಗನ್ನಾಥ ನಾನಕೇರಿ, ಮೃತ್ಯುಂಜಯ ಶೆಟ್ಟರ್, ಡಾ.ಕೃಷ್ಣಮೂರ್ತಿ ಭಟ್, ರೇಖಾ ಅಪ್ಪಾರಾವ್ ಸೌದಿ ಸೇರಿದಂತೆ ಪ್ರಮುಖ ಗಾಯಕರು ವಚನ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದು ಬಸವಕಲ್ಯಾಣದ ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

23 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಕಾನೂನು ಸಚಿವ ಪ್ರಲ್ಹಾದ್‌ ಜೋಶಿ ಉತ್ಸವಕ್ಕೆ ಚಾಲನೆ ನೀಡುವರು. ಬೆಂಗಳೂರಿನ ಶಿವರುದ್ರ ಸ್ವಾಮೀಜಿ ಹಾಗೂ ಹಾರಕೂಡದ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರು ಮನಗುಂಡಿಯ ಬಸವಾನಂದ ಸ್ವಾಮೀಜಿಗೆ ‘ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ–2019’ ಪ್ರದಾನ ಮಾಡುವರು. ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ದಿನದರ್ಶಿಕೆ ಬಿಡುಗಡೆ ಮಾಡುವರು. ಶಾಸಕ ಬಿ.ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದರಾದ ಭಗವಂತ ಖೂಬಾ, ಉಮೇಶ ಜಾಧವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ‘ವಚನ ಸಂಗೀತ: ಪರಂಪರೆ ಮತ್ತು ಬೆಳವಣಿಗೆ’ ಕುರಿತು ಗೋಷ್ಠಿ ನಡೆಯಲಿದೆ. ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಖೇಳಗಿ ಅಭಿನವ ಶಿವಲಿಂಗ ಸ್ವಾಮೀಜಿ ಹಾಗೂ ಬಸವಕಲ್ಯಾಣದ ನಿರಂಜನ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಅಧ್ಯಕ್ಷತೆ ವಹಿಸುವರು.

ವಿಶ್ರಾಂತ ಕುಲಪತಿ ಹನುಮಣ್ಣ ನಾಯಕ ದೊರೆ ವಚನ ಸಂಗೀತ ಪ್ರಸ್ತುತ ಪಡಿಸುವರು. ಪ್ರೊ.ಸಿದ್ದಣ್ಣ ಲಂಗೋಟಿ, ಸೋಮನಾಥ ಅಷ್ಟೂರೆ, ಬಿ.ಜಿ.ಶೆಟಕಾರ, ಶಿವಶರಣಪ್ಪ ವಾಲಿ, ವಿಜಯಕುಮಾರ ತೇಗಲತಿಷ್ಕಿ, ಶರಣಪ್ಪ ಮಿಠಾರೆ, ಜಗನ್ನಾಥ ಹೆಬ್ಬಾಳೆ, ಪ್ರಭುರಾವ್ ವಸ್ಮತೆ, ಅನಿಲ ಭೂಸಾರೆ, ಅಶೋಕ ಮಿಠಕಲ್ಲೆ ಮಾದಲಾದವರು ಭಾಗವಹಿಸವರು.

24 ರಂದು ಬೆಳಿಗ್ಗೆ 7.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ, ಬೆಳಿಗ್ಗೆ 9.30ಕ್ಕೆ ವಚನ ಸಂಗೀತ ಸುಧೆ ಹಾಗೂ ಶರಣರ ಸ್ವರವಚನ ಸಾಹಿತ್ಯ ಗೋಷ್ಠಿ, ಬೆಳಿಗ್ಗೆ 11.30ಕ್ಕೆ ವಚನ ಕಲ್ಯಾಣ ತಾತ್ವಿಕ ಚಿಂತನ ಗೋಷ್ಠಿಯಲ್ಲಿ ಸಾಹಿತಿ ಜಯಶ್ರೀ ದಂಡೆ ಹಾಗೂ ವೀರಣ್ಣ ದಂಡೆ ಅವರಿಗೆ ಗಾಂಧಿಗಂಜ್‌ ವ್ಯಾಪಾರಸ್ಥರ ಒಕ್ಕೂಟದ ಅಧ್ಯಕ್ಷ ಬಸವರಾಜ ಧನ್ನೂರ ಪ್ರಾಯೋಜಿತ ₹ 50 ಸಾವಿರ ನಗದು ಒಳಗೊಂಡ ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಗುರುಬಸವ ಪಟ್ಟದ್ದೇವರು, ಶರಣಬಸವ ಸ್ವಾಮೀಜಿ ಸಾನಿಧ್ಯ ವಹಿಸುವರು. ಅಕ್ಕ ಗಂಗಾಂಬಿಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ಅಕ್ಕಮಹಾದೇವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ರಹೀಂ ಖಾನ್, ಮಾಜಿ ಶಾಸಕ ಅಶೋಕ ಖೇಣಿ ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗುರುಬಸವ ಪಟ್ಟದ್ದೇವರು, ಬಸವರಾಜ ಧನ್ನೂರ, ಧನರಾಜ್‌ ತಾಳಂಪಳ್ಳಿ, ಗುರುನಾಥ ಕೊಳ್ಳೂರ, ಬಾಬು ವಾಲಿ ಹಾಗೂ ಶಶಿಧರ ಕೋಸಂಬೆ ಇದ್ದರು.

ಅನುಭವ ಮಂಟಪ ಹೆಸರಲ್ಲಿ ಜಾಗ ಇಲ್ಲ

ಬೀದರ್‌: ‘ಬಸವಕಲ್ಯಾಣದಲ್ಲಿ ಅನುಭವ ಮಂಟಪ ಟ್ರಸ್ಟ್ ಹೆಸರಲ್ಲಿ ಜಾಗ ಇಲ್ಲ. ಆದರೆ, ಟ್ರಸ್ಟ್‌ ಸ್ವಾಧೀನದಲ್ಲೇ ಜಾಗ ಇದೆ. ಅಧಿಕೃತ ನೋಂದಣಿಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

‘ಅನುಭವ ಮಂಟಪ ಎಲ್ಲಿ ಇತ್ತು ಎನ್ನುವುದು ನಿಖರವಾಗಿ ತಿಳಿದಿಲ್ಲ. 1905ರಲ್ಲಿ ಚಾಮರಾಜ ಒಡೆಯರು ಅಡಿಗಲ್ಲು ಹಾಕಿದ ಸ್ಥಳದಲ್ಲೇ ಭಾಲ್ಕಿಯ ಡಾ. ಚನ್ನಬಸವ ಪಟ್ಟದ್ದೇವರು ಕಟ್ಟಡ ನಿರ್ಮಿಸಿದ್ದಾರೆ’ ಎಂದು ತಿಳಿಸಿದರು.

‘70 ವರ್ಷದಿಂದ ಟ್ರಸ್ಟ್‌ ಅಧೀನದಲ್ಲಿ 25 ಎಕರೆ ಉಳಿದಿದೆ. ಜಮೀನನ್ನು ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ. 10 ಎಕರೆ ಜಾಗವನ್ನು ಟ್ರಸ್ಟ್‌ನಿಂದ ಖರೀದಿಸಲಾಗಿದೆ’ ಎಂದು ಹೇಳಿದರು.
‘ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹ 1 ಸಾವಿರ ಕೋಟಿ ಬೇಕು. ರಾಜ್ಯ ಸರ್ಕಾರ ಈಗಾಗಲೇ ₹ 50 ಕೋಟಿ ಬಿಡುಗಡೆ ಮಾಡಿದೆ. ₹ 1 ಸಾವಿರ ಕೋಟಿ ಕೊಡುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

₹ 10 ಸಾವಿರ ನಗದು ಗೆದ್ದ ಬಸಮ್ಮ

ಬಸವಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವಣ್ಣನವರ ವಚನಗಳ ಕಂಠಪಾಠ ಸ್ಪರ್ಧೆಯಲ್ಲಿ ಬೆಳಗಾವಿಯ ಬಸಮ್ಮ ಮಠದ ₹ 10 ಸಾವಿರ ನಗದು ಬಹುಮಾನ ಗೆದ್ದುಕೊಂಡಿದ್ದಾರೆ.

₹ 5 ಸಾವಿರ ಮೊತ್ತದ ಎರಡನೇ ಬಹುಮಾನ ಬೆಳಗಾವಿಯ ಮಹಾಲಕ್ಷ್ಮಿ ಕುಂದಗೋಳ ಹಾಗೂ ₹ 2 ಸಾವಿರ ಮೊತ್ತದ ಮೂರನೇ ಬಹುಮಾನ ಬೀದರ್‌ನ ಚನ್ನಬಸವ ಅವರು ಪಡೆದುಕೊಂಡಿದ್ದಾರೆ. ರಾಜ್ಯದ ವಿವಿಧೆಡೆಯಿಂದ 51 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ನವೆಂಬರ್‌ 24 ರಂದು ವಚನ ಸಂಗೀತ ಸುಧೆ ಹಾಗೂ ಶರಣರ ಸ್ವರವಚನ ಸಾಹಿತ್ಯ ಗೋಷ್ಠಿಯಲ್ಲಿ ಬಹುಮಾನ ವಿತರಿಸಲಾಗುವುದು. 770 ವಿದ್ಯಾರ್ಥಿಗಳು ಸಾಮೂಹಿಕವಾಗಿ ವಚನ ಗೀತೆ ಕಾರ್ಯಕ್ರಮ ನಡೆಸಿಕೊಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT