ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರಿವಿನ ಮನೆ’ ಆವರಣ ಸ್ವಚ್ಛತೆ

ಬಸವಕಲ್ಯಾಣ ಮಂಡಳಿಯಿಂದ ನಿರ್ಲಕ್ಷ್ಯ: ಆರೋಪ
Last Updated 10 ಜೂನ್ 2021, 6:01 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದಲ್ಲಿನ 12ನೇ ಶತಮಾನದ ಮಹತ್ವದ ಸ್ಮಾರಕವಾದ ಜಗಜ್ಯೋತಿ ಬಸವಣ್ಣನವರು ಧ್ಯಾನಗೈದ ‘ಅರಿವಿನ ಮನೆ’ ಪರಿಸರದಲ್ಲಿ ಬಿಜೆಪಿ ಸೇವಾ ಸೈನಿಕರ ತಂಡ ಬುಧವಾರ ಸ್ವಚ್ಛತಾ ಕಾರ್ಯ ಕೈಗೊಂಡಿತು.

ಆವರಣದಲ್ಲಿ ಎಲ್ಲೆಡೆ ಹುಲ್ಲು ಹಾಗೂ ಗಿಡಗಂಟೆಗಳು ಬೆಳೆದಿದ್ದವು. ಅಲ್ಲಲ್ಲಿ ಕಸ ಸಂಗ್ರಹಗೊಂಡಿತ್ತು. ಹೀಗಾಗಿ ಮಹತ್ವದ ಶಿಲ್ಪಕಲಾಕೃತಿಗಳು ಮತ್ತು ಕೆತ್ತನೆಯ ಕಲ್ಲಿನ ಕಂಬಗಳು ಮರೆ ಆಗಿದ್ದವು. ತಂಡದ 29 ಯುವಕರು ಬೆಳಿಗ್ಗೆ ನಾಲ್ಕು ಗಂಟೆಗಳವರೆಗೆ ಶ್ರಮದಾನ ನಡೆಸಿ ಎಲ್ಲವನ್ನೂ ಸರಿಪಡಿಸಿದ್ದಾರೆ.

ಆವರಣದಲ್ಲಿ ಬಿದ್ದಿದ್ದ ಕಾಗದ, ಪ್ಲಾಸ್ಟಿಕ್ ಬಾಟಲ್, ಬ್ಯಾಗು, ಕಟ್ಟಿಗೆ ಹಾಗೂ ಇತರೆ ಕಸವನ್ನು ಒಂದೆಡೆ ಸೇರಿಸಿ ಬೆಂಕಿ ಹಚ್ಚಿ ಸುಡಲಾಗಿದೆ. ಆವರಣಗೋಡೆಗೆ ಹತ್ತಿಕೊಂಡಿರುವ ಕಲ್ಲಿನ ಕಂಬಗಳ ಮಧ್ಯೆ ಬೆಳೆದ ಮುಳ್ಳು ಕಂಟೆಗಳನ್ನು ಕೊಡಲಿಯಿಂದ ಕತ್ತರಿಸಿ ಬೀಸಾಡಲಾಗಿದೆ. ಅನವಶ್ಯಕವಾಗಿ ಬಿದ್ದಿದ್ದ ಮಣ್ಣನ್ನು ಸಮತಟ್ಟು ಮಾಡಲಾ ಗಿದೆ. ಗಿಡಗಳ ಬುಡದಲ್ಲಿ ಕಲ್ಲು, ಮಣ್ಣು ವೃತ್ತಾಕಾರದಲ್ಲಿ ಹೊಂದಿಸಿಡಲಾಗಿದೆ. ಒಟ್ಟಾರೆ ಪರಿಸರ ಸುಂದರವಾಗಿ ಕಾಣುವಂತೆ ಮಾಡಲಾಗಿದೆ.

‘ಅರಿವಿನ ಮನೆಯ ದುಸ್ಥಿತಿಯನ್ನು ಕಂಡು ಪರಿಸರ ಪ್ರೇಮಿಗಳಾದ ವಕೀಲ ವಿವೇಕ ನಾಗರಾಳೆ ಅವರು ಸೇವಾ ಸೈನಿಕರಿಗೆ ಇಲ್ಲಿನ ಸ್ವಚ್ಛತೆಗೆ ಆಗ್ರಹಿಸಿದ್ದರು. ಗುದ್ದಲಿ, ಬುಟ್ಟಿ, ಸಲಾಕೆ ಹಾಗೂ ಇತರೆ ಸಾಮಗ್ರಿ ಖರೀದಿಗೆ ಹಣ ನೀಡಿದ್ದರು. ಹೀಗಾಗಿ ಕೃಷ್ಣಾ ಗೋಣೆ ನೇತೃತ್ವದಲ್ಲಿ ಕಾರ್ಯ ನಡೆಯಿತು. ಶಿವಕುಮಾರ ಅಮರಶೆಟ್ಟಿ, ಸಿದ್ಧಾರ್ಥ ಬಾವಿದೊಡ್ಡಿ, ಪ್ರದೀಪ ಮುಜನಾಯಕ, ರಾಹುಲ್ ರಂಗದಾಳ, ಅಮೂಲ್ ಸದಾನಂದೆ, ವಿಶ್ವನಾಥ ಚಿರಡೆ ಒಳಗೊಂಡ ತಂಡ ಪಾಲ್ಗೊಂಡಿತ್ತು’ ಎಂದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಚಣ್ಣ ಸ್ವಾಮಿ ತಿಳಿಸಿದರು.

‘ಸೇವಾ ಸೈನಿಕರ ತಂಡದಿಂದ ಅನೇಕ ದಿನಗಳಿಂದ ನಗರ ಸ್ವಚ್ಛತಾ ಅಭಿಯಾನ ನಡೆದಿದೆ. ಬಸವಣ್ಣನವರ ಸ್ಮಾರಕವಾದ ಪರುಷಕಟ್ಟೆ, ನ್ಯಾಯಾಲಯ ಆವರಣ, ಇಂದಿರಾ ಕ್ಯಾಂಟೀನ್ ಸುತ್ತಲಿನ ಪ್ರದೇಶ ಹಾಗೂ ವಿವಿಧ ಓಣಿಗಳಲ್ಲಿ ಚರಂಡಿ ಸ್ವಚ್ಛತೆ ಕೈಗೊಳ್ಳಲಾಗಿದೆ. ಇವರ ಕಾರ್ಯದಿಂದಾಗಿ ಬಸವಣ್ಣನವರ ಅರಿವಿನ ಮನೆ ಪರಿಸರಕ್ಕೂ ಹೊಸ ಕಳೆ ಬಂದಿದೆ’ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಪಂಡಿತ್ ನಾಗರಾಳೆ ಹೇಳಿದರು.

‘ಅರಿವಿನ ಮನೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಜವಾಬ್ದಾರಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯದ್ದಾಗಿದ್ದು ಆವರಣಗೋಡೆ, ಆಕರ್ಷಕ ಪ್ರವೇಶದ್ವಾರ ನಿರ್ಮಿಸಲಾಗಿದೆ. ಆದರೆ, ಇಲ್ಲಿನ ಸ್ವಚ್ಛತೆಯ ಕಡೆಗೆ ಮಾತ್ರ ದಿವ್ಯ ನಿರ್ಲಕ್ಷ ವಹಿಸಲಾಗಿದೆ. ಮಂಡಳಿಯಿಂದ ಕೆಲ ಸ್ಮಾರಕಗಳಲ್ಲಿ ಲಕ್ಷಗಟ್ಟಲೇ ಹಣದಿಂದ ಅಗತ್ಯಕ್ಕಿಂತ ಹೆಚ್ಚಿನ ವಿಕಾಸ ನಡೆದಿದೆ. ಆದರೆ, ಬಸವಣ್ಣನವರ ಈ ಮಹತ್ವದ ಸ್ಥಳದ ಬಗ್ಗೆ ಮಾತ್ರ ಕಾಳಜಿ ತೋರಿಲ್ಲ. ಆದ್ದರಿಂದ ಇದು ಅನಾಥ ಅವಸ್ಥೆಯಲ್ಲಿದೆ. ಎಲ್ಲ ಸ್ಮಾರಕಗಳ ಎದುರಿನಲ್ಲಿ ಉದ್ಯಾನಗಳಿವೆ. ಇಲ್ಲೇಕೆ ಇಲ್ಲ?’ ಎಂದು ಹಿರಿಯರಾದ ಬಸವರಾಜಪ್ಪ ಶಿವಪುರೆ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT