ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ ಸಿಇಒ ಮೇಲೆ ಪಿಡಿಒ ಹಲ್ಲೆ ಯತ್ನ

Last Updated 28 ಅಕ್ಟೋಬರ್ 2021, 3:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಪಂಚಾಯಿತಿ ಮೀಟಿಂಗ್‌ ಹಾಲ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ನಡೆಸುತ್ತಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಜಹೀರಾ ನಸೀಮ್‌ ಮೇಲೆ ಮಹಿಳಾ ಪಿಡಿಒ ಒಬ್ಬರು ಮಂಗಳವಾರ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

‘ಮಂಗಳವಾರ ಸಂಜೆ 4ಕ್ಕೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾಗ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಕಣ್ಣು ತಪ್ಪಿಸಿ ಒಳಗೆ ಬಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಲಾ ಕಾಂಬಳೆ, ನನ್ನ ಮೇಲೆ ಹಠಾತ್‌ ಹಲ್ಲೆ ಮಾಡಲು ಯತ್ನಿಸಿದರು. ಅವರು ನನ್ನತ್ತ ಧಾವಿಸಿ ಕೈಬೀಸುತ್ತಿದ್ದಂತೆ ನಾನು ರಕ್ಷಣೆಗೆ ಕೈಮುಂದೆ ಮಾಡಿ ತಪ್ಪಿಸಿಕೊಂಡೆ. ಈ ಸಂದರ್ಭದಲ್ಲಿ ನನ್ನ ಕೈಬೆರಳಿಗೆ ಸ್ವಲ್ಪ ಗಾಯವಾಗಿದೆ’ ಎಂದು ಸಿಇಒ ಜಹೀರಾ ನಸೀಮ್‌ ತಿಳಿಸಿದ್ದಾರೆ.

‌‘ಪಿಡಿಒ ಮಂಗಲಾ ವಿರುದ್ಧ ಬೀದರ್‌ ತಾಲ್ಲೂಕಿನ ಚಾಂಬೋಳ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ದೂರುಗಳನ್ನು ನೀಡಿದ್ದಾರೆ. ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಅವರನ್ನು ಅಕ್ಟೋಬರ್ 5ರಂದು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಅ.7ರಂದು ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದು ‘ನನ್ನ ಮೇಲಿನ ದ್ವೇಷದಿಂದ ಬಿಡುಗಡೆ ಮಾಡಿದ್ದೀರಿ’ ಎಂದು ಕೂಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿ ಕೆಲಸಕ್ಕೂ ಅಡ್ಡಿ ಉಂಟು ಮಾಡಿದ್ದರು. 26ರಂದು ಮತ್ತೆ ಕಚೇರಿಯೊಳಗೆ ನುಗ್ಗಿ ಸಭೆ ನಡೆಯುತ್ತಿದ್ದಾಗ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ನನ್ನ ಕೈ ಬೆರಳುಗಳಿಗೆ ರಕ್ತ ಬಂದಿದೆ. ಈ ದೃಶ್ಯವನ್ನು ಸಭೆಯಲ್ಲಿದ್ದ ಅಧಿಕಾರಿಗಳು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದಾರೆ’ಎಂದು ಸಿಇಒ ಪೊಲೀಸರಿಗೆ ದೂರು ನೀಡಿದ್ದಾರೆ.

‘ಹಲ್ಲೆಗೆ ಯತ್ನಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಈ ಘಟನೆಯಿಂದ ಕಚೇರಿ ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. ಬೀದರ್‌ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಆರೋಪಿ; ಎಸ್‌ಪಿ

‘ಜಿಲ್ಲಾ ಪಂಚಾಯಿತಿ ಸಿಇಒ ನೀಡಿರುವ ದೂರು ಆಧರಿಸಿ ವಿಚಾರಣೆ ನಡೆದಿದೆ. ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT