ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಒಳಗಿನ ಅಸಮಾಧಾನ ಶಮನಕ್ಕೆ ಯತ್ನ

ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳೊಂದಿಗೆ ಚರ್ಚೆ
Last Updated 20 ಮಾರ್ಚ್ 2021, 14:45 IST
ಅಕ್ಷರ ಗಾತ್ರ

ಬೀದರ್‌: ಪಕ್ಷದಲ್ಲಿನ ನಿಷ್ಠಾವಂತರನ್ನು ಕಡೆಗಣಿಸಿದ್ದಕ್ಕೆ ಕೆಲ ಕಾಂಗ್ರೆಸ್‌ ಕಾರ್ಯಕರ್ತರು ಅಜ್ಞಾತ ಸ್ಥಳದಲ್ಲಿ ಸಭೆ ನಡೆಸಿ ಅಸಮಾಧಾನ ಹೊರ ಹಾಕಿರುವುದನ್ನು ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿದೆ. ಚುನಾವಣೆಯ ಹೊಸ್ತಿಲಲ್ಲಿ ಇಂತಹ ಬೆಳವಣಿಗೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಪಕ್ಷದ ವರಿಷ್ಠರು ಕಾಂಗ್ರೆಸ್ ಜಿಲ್ಲಾ ಘಟಕಕ್ಕೆ ಸಂದೇಶ ರವಾನಿಸಿದ್ದಾರೆ.

ವರಿಷ್ಠರು ಬೆಂಗಳೂರಿನಿಂದ ನೇರವಾಗಿಯೇ ಬಸವಕಲ್ಯಾಣ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ನಾಲ್ಕೈದು ಮುಖಂಡರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಮೊಬೈಲ್‌ ಬಂದ್ ಮಾಡಿದ್ದಾರೆ. ಬೇರೆ ಫೋನ್‌ಗಳನ್ನೂ ಸ್ವೀಕರಿಸುತ್ತಿಲ್ಲ. ಹೀಗಾಗಿ ಪಕ್ಷದ ಪ್ರಮುಖರೊಬ್ಬರನ್ನು ಶನಿವಾರ ಬಸವಕಲ್ಯಾಣಕ್ಕೆ ಕಳಿಸಿ ಪದಾಧಿಕಾರಿಗಳಿಗೆ ಮನವರಿಕೆ ಮಾಡಿ ಅಸಮಾಧಾನ ಶಮನಗೊಳಿಸಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ.

‘ನಾವು ಬೇರೆ ಪಕ್ಷಗಳಿಗೆ ಹೋಗುವುದಿಲ್ಲ. ಚುನಾವಣೆಯಲ್ಲಿ ಪ್ರಚಾರವನ್ನೂ ಕೈಗೊಳ್ಳುವುದಿಲ್ಲ. ತಟಸ್ಥವಾಗಿ ಉಳಿಯುತ್ತೇವೆ. ಮುಖಂಡರು ಹೆಚ್ಚಿನ ಒತ್ತಡ ಹಾಕಿದರೆ ಪಕ್ಷದಿಂದ ನಿರ್ಗಮಿಸುವ ಕುರಿತು ಆಲೋಚನೆ ಮಾಡಬೇಕಾಗುತ್ತದೆ ಎಂದು ಅತೃಪ್ತರು ಹೇಳಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಸವಕಲ್ಯಾಣ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಅನುಸರಿಸಬೇಕಾದ ತಂತ್ರಗಳ ಕುರಿತು ಕೆಪಿಸಿಸಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ:
‘ಪಕ್ಷದ ಟಿಕೆಟ್‌ ದೊರೆಯದಿದ್ದಾಗ ಕೆಲವರು ಅಸಮಾಧಾನ ವ್ಯಕ್ತಪಡಿಸುವುದು ಸಹಜ. ಆದರೆ, ಎಲ್ಲರೂ ಪಕ್ಷದೊಂದಿಗೆ ಇದ್ದಾರೆ. ಕಾಂಗ್ರೆಸ್‌ ಹಿಂದುಳಿದ ಮಹಿಳೆಗೆ ಟಿಕೆಟ್‌ ಕೊಡುವ ಮೂಲಕ ಸಾಮಾಜಿಕ ನ್ಯಾಯದ ಪರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ವಿಷಯವನ್ನು ಬಸವಕಲ್ಯಾಣ ಕ್ಷೇತ್ರದ ಮತದಾರರಿಗೆ ಮನವರಿಕೆ ಮಾಡಬೇಕು’ ಎಂದು ಪಕ್ಷದ ವರಿಷ್ಠರು ಮನವಿ ಮಾಡಿದರು ಎನ್ನಲಾಗಿದೆ.

‘ಲಿಂಗಾಯತ ಹಾಗೂ ಮುಸ್ಲಿಮ್ ಸಮುದಾಯದ ಮತಗಳನ್ನು ಸೆಳೆಯಲು ಆದ್ಯತೆ ನೀಡಬೇಕು. ಪಕ್ಷದಲ್ಲಿ ಗೊಂದಲಗಳಿಗೆ ಅವಕಾಶ ಕೊಡದಂತೆ ಮನವಿ ಮಾಡಿದರು’ ಎಂದು ಪಕ್ಷದವರು ತಿಳಿಸಿದ್ದಾರೆ.

‘ಪತಿ ಬಿ.ನಾರಾಯಣರಾವ್ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ನನಗೆ ಟಿಕೆಟ್‌ ನೀಡಲಾಗಿದೆ. ಪಕ್ಷದ ವರಿಷ್ಠರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರಲ್ಲಿ ಕೆಲ ವಿಷಯಗಳಲ್ಲಿ ಭಿನ್ನಮತ ಇರುವುದು ಸಹಜ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲ. ಕಾರ್ಯಕರ್ತರು ಚುನಾವಣೆಯಲ್ಲಿ ಶಕ್ತಿಮೀರಿ ಕಾರ್ಯ ನಿರ್ವಹಿಸುವ ಭರವಸೆ ನೀಡಿದ್ದಾರೆ’ ಎಂದು ಮಾಲಾ (ಉರ್ಫ್ ಮಲ್ಲಮ್ಮ) ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಗೆ ಮತ್ತೆ ನಿರಾಶೆ

ಬಸವಕಲ್ಯಾಣ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿ ಕೋರ್‌ ಕಮಿಟಿ ಎರಡು ದಿನಗಳ ಮಟ್ಟಿಗೆ ಮುಂದೂಡಿರುವುದು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ನಿರಾಶೆ ಉಂಟು ಮಾಡಿದೆ.

ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಪ್ರಬಲ ಸಮುದಾಯಗಳು ತಮ್ಮ ಸಮುದಾಯದ ವ್ಯಕ್ತಿಗೇ ಟಿಕೆಟ್‌ ಕೊಡುವಂತೆ ಒತ್ತಡ ಹಾಕುತ್ತಲೇ ಇವೆ. ಒಂದು ಸಮುದಾಯಕ್ಕೆ ಟಿಕೆಟ್ ಕೊಟ್ಟರೆ, ಇನ್ನೊಂದು ಸಮುದಾಯ ಅಸಮಾಧಾನಗೊಳ್ಳುವುದು ಸಹಜ. ಹೀಗಾಗಿ ಬಿಜೆಪಿ ಮುಖಂಡರು ಜಾಣ್ಮೆಯಿಂದ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

ವಿಜಯೇಂದ್ರ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವು ಹಿಂದೆ ಸರಿಯುತ್ತೇವೆ ಎಂದು ಕೆಲ ಟಿಕೆಟ್‌ ಆಕಾಂಕ್ಷಿಗಳು ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಲಿಂಗಾಯತ ಹಾಗೂ ಮರಾಠ ಸಮುದಾಯದ ಗರಿಷ್ಠ ಮತ ಪಡೆದರೂ ಗೆಲುವು ಸುಲಭವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ಮುಖಂಡರು ಇದ್ದಾರೆ.

ವಿಜಯೇಂದ್ರ ಅವರು ಬಸವಕಲ್ಯಾಣಕ್ಕೆ ಅನೇಕ ಬಾರಿ ಬಂದು ಹೋದ ಮೇಲೆಯೇ ಬಸವಕಲ್ಯಾಣದಲ್ಲಿ ಹೊಸ ಅನುಭವ ಮಂಟಪ ಹಾಗೂ ಮರಾಠ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆಯಾಗಿದೆ. ಈ ಶ್ರೇಯಸ್ಸು ವಿಜಯೇಂದ್ರ ಅವರಿಗೇ ಸಲ್ಲುತ್ತದೆ ಎಂದು ಕಾರ್ಯಕರ್ತರು ಬಿಂಬಿಸಲಾರಂಭಿಸಿದ್ದಾರೆ.

ಇತ್ತ ಮರಾಠರ ಮುನಿಸು ಮುಂದುವರಿದಿದೆ. ಸೋಮವಾರ ಬಿಜೆಪಿ ಟಿಕಟ್‌ ಘೋಷಣೆಯಾದ ನಂತರ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಗಳು ಆಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT