ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಶಿಥಿಲಾವಸ್ಥೆಯಲ್ಲಿ ಬಾದ್ಲಾಪುರ ಸರ್ಕಾರಿ ಶಾಲೆ ಕಟ್ಟಡ

ಸಂಪೂರ್ಣ ಕಟ್ಟಡ ದುರಸ್ತಿಗೆ ಗ್ರಾಮಸ್ಥರ ಆಗ್ರಹ
Published 27 ಮಾರ್ಚ್ 2024, 5:04 IST
Last Updated 27 ಮಾರ್ಚ್ 2024, 5:04 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಬಾದ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಕುಸಿಯುವ ಹಂತದಲ್ಲಿದೆ. ಶಿಕ್ಷಕರು ಹಾಗೂ ಮಕ್ಕಳು ಆತಂಕದಲ್ಲಿಯೇ ಪಾಠ–ಪ್ರಯೋಗ ನಡೆಸುವಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಶೀಘ್ರ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸದ್ಯ ಶಾಲೆ 1ರಿಂದ 7ನೇ ತರಗತಿವರೆಗೆ 176 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಷಯಗಳ ಕಾಯಂ 8 ಶಿಕ್ಷಕರು ಹಾಗೂ ಒಬ್ಬ ಅತಿಥಿ ಶಿಕ್ಷಕ ಸೇರಿದಂತೆ ಒಟ್ಟು 9 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಕಟ್ಟಡದ 5 ಕೊಠಡಿಗಳಲ್ಲಿ ಮಾತ್ರ ಪಾಠ–ಪ್ರಯೋಗ ನಡೆಯುತ್ತಿದ್ದು, ಹೆಚ್ಚುವರಿ 5 ಕೊಠಡಿಗಳ ಅಗತ್ಯವಿದೆ.

ಮನವಿಗೆ ಇಲ್ಲ ಸ್ಪಂದನೆ: ಶಾಲೆ ಹಳೆ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಹಲವು ಬಾರಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೂ ಸಂಬಂಧಿಸಿದವರಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ ಎಂದು ಗ್ರಾಮದ ಹಾಗೂ ಮುತ್ತಂಗಿ ಗ್ರಾ.ಪಂ ಉಪಾಧ್ಯಕ್ಷ ಪರಶುರಾಮ ಅಸಹಾಯಕತೆ ವ್ಯಕ್ತಪಡಿಸಿದರು.

ಕಳಚಿ ಬೀಳುವ ಚಾವಣಿ ಸಿಮೆಂಟ್‌: ಕಟ್ಟಡ ಛಾವಣಿ ಸಂಪೂರ್ಣ ಹಾಳಾಗಿದ್ದು, ಚಾವಣಿ ಸಿಮೆಂಟ್‌ ಚಕ್ಕಳಿ ಕಳಚಿ ಬೀಳುತ್ತದೆ. ಇದರಿಂದಾಗಿ ಶಿಕ್ಷಕರು, ಹಲವು ಬಾರಿ ತರಗತಿಗಳನ್ನು ಕಟ್ಟಡದ ಹೊರಗೆ ನಡೆಸುತ್ತಾರೆ. ಮಳೆಗಾಲದಲ್ಲಿ ಮಳೆ ನೀರು ಸಂಪೂರ್ಣವಾಗಿ ಕೊಠಡಿಗಳ ಒಳಗೆ ನುಗ್ಗುತ್ತದೆ. ಚಾವಣಿಗಳಿಂದ ನೀರು ಸೋರುತ್ತದೆ. 

ಶಾಲೆ ಕಟ್ಟಡ ಶಿಥಿಲಗೊಂಡು ಹಲವು ವರ್ಷಗಳೇ ಕಳೆದಿವೆ. ಕಟ್ಟಡದ ಗೋಡೆಗಳು, ಮಳೆಗಾಲದಲ್ಲಿ ಸೋರುವ ಚಾವಣಿ, ಮೇಲೆಯೇ ಕಂಡು ಬರವು ಸರಳುಗಳು ಹಾಗೂ ಚಾವಣಿಯ ಆಧಾರಕ್ಕಾಗಿ ನಿರ್ಮಿಸಿರುವ ಕಂಬಗಳ ಸಿಮೆಂಟ್‌ ಕಿತ್ತುಹೋಗಿದೆ. ತಾಂಡದ ಬಡ ಮಕ್ಕಳು ಈ ಶಾಲೆಯಲ್ಲಿ ಅಭ್ಯಾಸ ಮಾಡುತ್ತಾರೆ. ಪಾಲಕರು ನಿತ್ಯ ಮಕ್ಕಳ ಸುರಕ್ಷತೆ ಬಗ್ಗೆ ದೇವರಲ್ಲಿ ಪ್ರಾರ್ಥಿಸಿಕೊಂಡು ಶಾಲೆಗೆ ಕಳಿಸುವಂತಾಗಿದೆ ಎಂದು ಗ್ರಾ.ಪಂ ಸದಸ್ಯ ಪ್ರಭು ಮಚಕುರಿ ಆತಂಕ ವ್ಯಕ್ತಪಡಿಸಿದರು.

ಶಿಕ್ಷಕರಿಗೂ ವಿಶ್ರಾಂತಿ ಕೊಠಡಿ ಇಲ್ಲ. ಶಾಲೆಯ ಅಡುಗೆ ಕೊಠಡಿಯಲ್ಲೂ ಕೂಡ ಸೂಕ್ತ ಸೌಲಭ್ಯಗಳಿಲ್ಲ. ಆರೋಗ್ಯಕರ ಊಟ ಮಕ್ಕಳ ಪಾಲಿಗೆ ಕನಸಿನ ಮಾತಾಗಿದೆ.

ಪ್ರಸಕ್ತ ಋತುವಿನ ಮಳೆಗಾಲದಲ್ಲಿ ಮಳೆ ಹೆಚ್ಚಾಗಿ ಸುರಿದರೆ ಕಟ್ಟಡ ಕುಸಿಯುವ ಸಾಧ್ಯತೆಗಳು ಹೆಚ್ಚಿವೆ. ಅನಾಹುತ ಯಾವಾಗ ಸಂಭವಿಸುತ್ತದೆ ಎಂಬುದು ತಿಳಿಯದಂತಾಗಿದೆ. ಒಂದು ವೇಳೆ ಅನಾಹುತ ಸಂಭವಿಸಿ, ಮಕ್ಕಳಿಗೆ ಹಾನಿಯಾದರೆ ಶಿಕ್ಷಣ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ. ಹೀಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳ ಎಚ್ಚೆತ್ತುಕೊಂಡು ಬೇಗ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರು ಸೇರಿಕೊಂಡು ಹೋರಾಟ ರೂಪಿಸಬೇಕಾಗುತ್ತದೆ ಎಂದು ಗ್ರಾಮದ ಪರಶುರಾಮ ನಾಯಕ, ಸುಭಾಸ ಪಾಟೀಲ, ಸಂತೋಷ ಪಾಟೀಲ, ಬಸವರಾಜ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಬಾದ್ಲಾಪುರ್ ಸರ್ಕಾರಿ ಶಾಲೆ ಕಟ್ಟಡದ ಮೇಲ್ಚಾವಣಿ ಚಕ್ಕಳೆಯಾಗಿ ಕಳಚಿ ಬಿದ್ದಿರುವುದು
ಬಾದ್ಲಾಪುರ್ ಸರ್ಕಾರಿ ಶಾಲೆ ಕಟ್ಟಡದ ಮೇಲ್ಚಾವಣಿ ಚಕ್ಕಳೆಯಾಗಿ ಕಳಚಿ ಬಿದ್ದಿರುವುದು

ಶಿಥಿಲಗೊಂಡ ಕಟ್ಟಡ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದು ಅವರ ಮೂಲಕ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬೇಗ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ

-ವಿಠಲರೆಡ್ಡಿ ಕರಕನಳ್ಳಿ ಮುಖ್ಯ ಶಿಕ್ಷಕ ಸರ್ಕಾರಿ ಪ್ರಾಥಮಿಕ ಶಾಲೆ ಬಾದ್ಲಾಪುರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT