ಶನಿವಾರ, ಅಕ್ಟೋಬರ್ 24, 2020
18 °C
ಮುಖಂಡರ ಲೆಕ್ಕಾಚಾರ ಶುರು

ಬಸವಕಲ್ಯಾಣ ಚುನಾವಣೆ: ಸ್ಥಾನ ಉಳಿಸುವ ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್‌

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಬಿ.ನಾರಾಯಣರಾವ್ ಅವರ ನಿಧನದಿಂದ ತೆರವಾದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್‌ನಿಂದ ತೀವ್ರ ಪ್ರಯತ್ನ ಸಾಗಿದ್ದು, ಇದಕ್ಕಾಗಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.

ದಿ.ಬಾಪುರಾವ್ ಪಾಟೀಲ ಹುಲಸೂರಕರ್ ಅವರ ನಂತರದಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಆಯ್ಕೆ ಆಗಿರಲಿಲ್ಲ. ಅವರಿಗಿಂತ ಮೊದಲು ಅನ್ನಪೂರ್ಣಬಾಯಿ ರಗಟೆ, ಅದಾದ ಮೇಲೆ ಬಾಪುರಾವ್ ಪಾಟೀಲ ಅವರು ಎರಡು ಸಲ ವಿಜಯ ಸಾಧಿಸಿದ್ದರು. ಬಾಪುರಾವ್ ಸಚಿವ ಮತ್ತು ವಿಧಾನಸಭೆ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ನಂತರ ಈ ಪಕ್ಷದಿಂದ ಟಿಕೆಟ್ ಪಡೆದವರಲ್ಲಿ ಯಾರೂ ಗೆಲುವು ಸಾಧಿಸಲಿಲ್ಲ. ಹೀಗಾಗಿ ಈ ಕ್ಷೇತ್ರ ಜನತಾ ಪರಿವಾರದ ಭದ್ರಕೋಟೆಯಾಗಿ ಮಾರ್ಪಟ್ಟಿತ್ತು.

48 ವರ್ಷಗಳ ಬಳಿಕ ಬಿ.ನಾರಾಯಣರಾವ್  61 ಸಾವಿರಕ್ಕಿಂತ ಅಧಿಕ ಮತ ಪಡೆದು ವಿಜೇತರಾಗಿ ಇತಿಹಾಸ ನಿರ್ಮಿಸಿದ್ದರು.

‘ಸಾರ್ವತ್ರಿಕ ಚುನಾವಣೆಯಲ್ಲಿ ನಾರಾಯಣರಾವ್ ಗೆಲುವು ಸಾಧಿಸಿದರಾದರೂ, ಈಗ ಉಪ ಚುನಾವಣೆಯಿದೆ. ಮೇಲಾಗಿ ರಾಜ್ಯದಲ್ಲಿ ಬಿಜೆಪಿಯ ಆಡಳಿತವಿದೆ. ಹೀಗಾಗಿ ಬಸವಣ್ಣನವರ ಕಾರ್ಯಕ್ಷೇತ್ರವಾದ ಕಾರಣ ಪ್ರತಿಷ್ಠಿತವಾದ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಬಿಜೆಪಿ ಹರಸಾಹಸ ನಡೆಸುವುದಂತು ನಿಶ್ಚಿತ. ಇಂಥದರಲ್ಲಿ ಯಾರು ಅಭ್ಯರ್ಥಿಯಾದರೆ ಆ ಪಕ್ಷದೊಂದಿಗೆ ಸೆಣಸಾಡಬಲ್ಲರು ಎಂಬ ಲೆಕ್ಕಾಚಾರ  ಪಕ್ಷದಲ್ಲಿ ಶುರುವಾಗಿದೆ’ ಎನ್ನುತ್ತಾರೆ ಪಕ್ಷದ ಮುಖಂಡರೊಬ್ಬರು.

‘ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಹಾಗೂ ಈಗಾಗಲೇ ಕಾಂಗ್ರೆಸ್ ಯುವ ವಿಭಾಗದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆಗಿರುವ ಪುತ್ರ ಗೌತಮ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅನುಕಂಪದ ಅಲೆ ಅವರ ಗೆಲುವಿಗೆ ಸಹಕಾರಿ ಆಗಬಹುದು ಎನ್ನಲಾಗುತ್ತಿದೆ. ಆದರೆ, ಈ ಮಧ್ಯೆಯೇ ಸುರಕ್ಷಿತ ಕ್ಷೇತ್ರ ಎಂದೇ ಗುರುತಿಸಲ್ಪಟ್ಟಿರುವ ಇಲ್ಲಿ ನಮಗೂ ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇವೆ ಎಂಬ ಬಯಕೆ ಪಕ್ಷದ ಇತರೆ ಪ್ರಭಾವಿ ಮುಖಂಡರು ಕೂಡ ವ್ಯಕ್ತಪಡಿಸುತ್ತಿದ್ದಾರೆ’ ಎನ್ನುವುದು ಮಾತು ಕೇಳಿಬರುತ್ತಿವೆ.

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಪತ್ನಿ ಗೀತಾ ಅವರಿಗೆ ಸ್ಪರ್ಧಿಸುವ ಅವಕಾಶ ದೊರಕಬಹುದು ಎನ್ನಲಾಗುತ್ತಿದೆ. ಇನ್ನೊಬ್ಬ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ ಅವರೂ ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದೇನೆ ಎಂಬ ಹೇಳಿಕೆ ನೀಡಿ ತಾವೂ ಆಕಾಂಕ್ಷಿಗಳಾಗಿದ್ದೇವೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಎಐಸಿಸಿ ಸದಸ್ಯ ಆನಂದ ದೇವಪ್ಪ, ಮುಖಂಡರಾದ ಬಸವರಾಜಸ್ವಾಮಿ, ಶಿವರಾಜ ನರಶೆಟ್ಟಿ, ಶಂಕರರಾವ್ ಜಮಾದಾರ, ಪಂಡಿತ್ ಚಿದ್ರಿ ಅವರೂ ಆಕಾಂಕ್ಷಿಗಳಾಗಿದ್ದಾರೆ.

ನಾರಾಯಣರಾವ್ ಕೋಲಿ ಸಮುದಾಯದವರಾಗಿದ್ದರು. ಆದ್ದರಿಂದ ಇದೇ ಕೋಮಿನವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ನಾರಾಯಣರಾವ್ ಅವರ ಪತ್ನಿಗೆ ಇಲ್ಲವೆ ಪುತ್ರನಿಗೆ ಅವಕಾಶ ಕೊಡಿ. ಇಲ್ಲದಿದ್ದರೆ, ಸಮಾಜದ ಮುಖಂಡರಾದ ಶಾಂತಪ್ಪ ಪಾಟೀಲ, ಶಾಲಿನಿ ಸಂಜಯ ವಾಡಿಕರ್ ಅವರಿಗೆ ಟಿಕೆಟ್ ನೀಡಿ ಎಂದು ಸಮಾಜದ ಮುಖಂಡರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ಅನ್ನಪೂರ್ಣಬಾಯಿ ಅವರ ನಂತರ ಈ ಕ್ಷೇತ್ರದಲ್ಲಿ 56 ವರ್ಷಗಳಿಂದ ಲಿಂಗಾಯತರಿಗೆ ಟಿಕೆಟ್ ನೀಡದೆ ಕಡೆಗಣಿಸಲಾಗಿದೆ. ಈಗಲಾದರೂ ಪರಿಗಣಿಸಿ ಎಂಬ ವಾದವೂ ಲಿಂಗಾಯತ ಮುಖಂಡರದ್ದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು