ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯಕ್ಕಾಗಿ ಗ್ರಾಮಸ್ಥರ ಪರದಾಟ

ಡೋಣಗಾಂವ್‌: ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಅನುಷ್ಠಾನಗೊಳ್ಳದ ಯೋಜನೆಗಳು
Last Updated 30 ಜುಲೈ 2018, 17:56 IST
ಅಕ್ಷರ ಗಾತ್ರ

ಕಮಲನಗರ: ರಸ್ತೆಯಲ್ಲಿಯೇ ಹರಿಯುವ ಹೊಲಸು ನೀರು, ತ್ಯಾಜ್ಯದಿಂದ ತುಂಬಿ ತುಳುಕುತ್ತಿರುವ ಚರಂಡಿಗಳು, ಸಮರ್ಪಕವಾಗಿ ಅನುಷ್ಠಾನಗೊಳ್ಳದ ಸರ್ಕಾರಿ ಯೋಜನೆಗಳು, ಅನೈರ್ಮಲ್ಯದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ. ವೈದ್ಯರಿಲ್ಲದ ಆಸ್ಪತ್ರೆ. ಮೂಲಸೌಕರ್ಯಕ್ಕಾಗಿ ಪರದಾಡುವ ಗ್ರಾಮಸ್ಥರು.

ಇದು ಕಮಲನಗರ ತಾಲ್ಲೂಕಿನ ಡೋಣಗಾಂವ್‌ (ಎಂ) ಗ್ರಾಮದ ಸಂಕ್ಷಿಪ್ತ ಚಿತ್ರಣ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಡೋಣಗಾಂವ್‌ (ಎಂ) ಗ್ರಾಮದಲ್ಲಿ ಸುಮಾರು ಆರು ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿ ಎಂಟು ಜನ ಪಂಚಾಯಿತಿ ಸದಸ್ಯರಿದ್ದಾರೆ. ಆದರೆ, ಮೂಲ ಸೌಕರ್ಯಗಳು ಮಾತ್ರ ಇಲ್ಲಿ ಮರೀಚಿಕೆ.

ಗ್ರಾಮದಲ್ಲಿ ಬಹುತೇಕ ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ. ರಸ್ತೆಗಳೆಲ್ಲ ಹಾಳಾಗಿದ್ದು ಒಂದೆಡೆಯಾದರೆ, ತ್ಯಾಜ್ಯ ನೀರು ರಸ್ತೆಯ ತುಂಬ ಹರಡಿಕೊಂಡಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಅಲ್ಲದೇ ಮಕ್ಕಳು, ಮಹಿಳೆಯರು, ವಯೋವೃದ್ಧರು ದುರ್ವಾಸನೆಯಿಂದ ಕೂಡಿದ ಈ ರಸ್ತೆ ಮೂಲಕವೇ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಕೆಲವೆಡೆ ರಸ್ತೆ ಮಧ್ಯಭಾಗದಲ್ಲಿಯೇ ಚರಂಡಿ ಮಾದರಿಯಲ್ಲಿ ಹಳ್ಳ ನಿರ್ಮಾಣವಾಗಿದೆ. ಮತ್ತೆ ಕೆಲವು ಕಡೆ ಚರಂಡಿಯಲ್ಲಿ ಮಣ್ಣು, ಕಲ್ಲು ತುಂಬಿಕೊಂಡಿದೆ. ಕೊಳಚೆ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಸಂಗ್ರಹಗೊಂಡು ದುರ್ವಾಸನೆ ಬರುತ್ತಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.

‘ಚರಂಡಿ ಹೂಳು ತೆಗೆಸಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅನೇಕ ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

ಚರಂಡಿ ವ್ಯವಸ್ಥೆ ಇಲ್ಲ:

2009-10ನೇ ಸಾಲಿನಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ರಸ್ತೆಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ರಸ್ತೆ ಪಕ್ಕದಲ್ಲಿ ಚರಂಡಿಗಳ ನಿರ್ಮಾಣ ಕಾಮಗಾರಿ ಕೈಗೊಳ್ಳದೇ ಇರುವುದು ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.

ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತ , ಹಾವಗಿ ಸ್ವಾಮಿ ಮಠ, ಹನುಮಾನ ಮಂದಿರ, ಮುಸ್ಲಿಂ ಬಡಾವಣೆ, ಸಮಗಾರ ಬಡಾವಣೆಗಳಲ್ಲಿ ಚರಂಡಿಗಳಿಲ್ಲ. ಇದರಿಂದ ಬಚ್ಚಲ ನೀರು ಮತ್ತು ಮಳೆ ನೀರು ರಸ್ತೆ ತುಂಬ ಹರಿಯುತ್ತಿದೆ.

‘ಕಳೆದ 5 ವರ್ಷಗಳಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತವೆ. ಮಳೆಗಾಲದಲ್ಲಿ ತ್ಯಾಜ್ಯದ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತಿವೆ. ತ್ಯಾಜ್ಯದ ನೀರು ನಿಲ್ಲದಂತೆ ಚರಂಡಿ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯಿತಿಯವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಗ್ರಾಮದ ರಮೇಶ್‌ ಪೇನೆ ದೂರುತ್ತಾರೆ.

ಕುಡಿಯುವ ನೀರಿಗೆ ಪರದಾಟ:

‘ವಿಶ್ವಬ್ಯಾಂಕ್, ಜಲ ನಿರ್ಮಲ, ಗ್ರಾಮ ಸ್ವರಾಜ್, ಗ್ರಾಪಂ ಕಿರು ನೀರು ಮತ್ತು ಕೇಂದ್ರ ಸರ್ಕಾರದ ವಿಶೇಷ ಅನುದಾನದಡಿಯಲ್ಲಿ ಕುಡಿಯವ ನೀರು ಪೂರೈಕೆಗೆ ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಈ ಹಣದಲ್ಲಿ ಎರಡು ತೆರೆದ ಬಾವಿ, 5 ಕೊಳವೆ ಬಾವಿ ಕೊರೆಯಿಸಲಾಗಿದೆ. ನೀರು ಸಂಗ್ರಹಿಸಲು ಎರಡು ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಮುಖ್ಯ ಪೈಪ್‌ಗಳಿಗೆ ಅನಧಿಕೃತ ಸಂಪರ್ಕ ಪಡೆದು ನೀರು ಪಡೆಯಲಾಗುತ್ತಿದೆ. ಇದರಿಂದ ಟ್ಯಾಂಕ್‌ಗೆ ನೀರು ಸಂಗ್ರಹವಾಗುವುದಿಲ್ಲ.

ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲಿ ₹ 14.25 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್ ಇಲಾಖೆ ಗ್ರಾಮದಲ್ಲಿ 1000ಕ್ಕೂ ಮೀಟರ್ ಕಬ್ಬಿಣದ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನೀರು ಹರಿಸುವ ಮುನ್ನ ಪೈಪ್‌ಗಳು ಅಲ್ಲಲ್ಲಿ ಕಿತ್ತು ಹೋಗಿದ್ದು, ಕಾಮಗಾರಿ ಗುಣಮಟ್ಟ ಎತ್ತಿ ತೋರಿಸುತ್ತದೆ. ಹೀಗಾಗಿ ಪೈಪ್ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿವೆ.

ವೈದ್ಯರಿಲ್ಲದ ಆಸ್ಪತ್ರೆ:ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ನಾಲ್ಕು ತಿಂಗಳಿಂದ ವೈದ್ಯರಿಲ್ಲ. ಇರುವ ಒಬ್ಬ ವೈದ್ಯರು ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದಾರೆ. ಹೀಗಾಗಿ ಗರ್ಭಿಣಿಯರು, ಬಾಣಂತಿಯರು, ವಾಂತಿಭೇದಿ ಪೀಡಿತ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.

‘ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕಬೇಕು ಎಂಬ ಸರ್ಕಾರದ ಉದ್ದೇಶ ಇಲ್ಲಿ ಈಡೇರುತ್ತಿಲ್ಲ. ವೈದ್ಯರಿಲ್ಲದ ಕಾರಣ ರೋಗಿಗಳು ಅನಿವಾರ್ಯವಾಗಿ 10 ಕಿ.ಮೀ. ದೂರದ ಕಮಲನಗರ ಆಸ್ಪತ್ರೆಗೆ ತೆರಳುತ್ತಿದ್ದಾರೆ’ ಎಂದು ಗ್ರಾಮಸ್ಥ ರಾಜಕುಮಾರ ಕಳಗಾಪುರೆ ತಿಳಿಸಿದರು.

ಸಂಬಂಧಪಟ್ಟವರು ಶೀಘ್ರದಲ್ಲಿ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಗ್ರಾಮದಲ್ಲಿ ಮೂಲಸೌಕರ್ಯ ಒದಗಿಸಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು
– ದತ್ತಾತ್ರೇಯ ಪೂಜಾರಿ, ಪಿಡಿಒ ಡೋಣಗಾಂವ್‌ (ಎಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT