ಬೀದರ್: ಲೋಕ ನಾಯಕರೆಂದೇ ಖ್ಯಾತರಾಗಿದ್ದ ಭೀಮಣ್ಣ ಖಂಡ್ರೆ ಅವರದ್ದು ಈ ದೇಶ ಕಂಡ ಅಪರೂಪದ ವ್ಯಕ್ತಿತ್ವ. ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳವಳಿಯ ಗೀಳು ಹಚ್ಚಿಸಿಕೊಂಡು ದೇಶಕ್ಕಾಗಿ ಹೋರಾಡಿದವರು.

ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಜೊತೆಗೂಡಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಕೈಜೋಡಿಸಿದವರು. ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹೋರಾಡಿ, ನಿಜಾಂ ಸರ್ಕಾರದ ವಿರುದ್ಧ ಬಂಡಾಯವೆದ್ದು ತಿರಂಗಾ ಧ್ವಜ ಹಾರಿಸಿ ಸೆರೆವಾಸ ಅನುಭವಿಸಿದವರು. ಮುಂದೆ ಡಾ. ಜಯದೇವಿತಾಯಿ ಲಿಗಾಡೆ, ಪ್ರಭುರಾವ್ ಕಂಬಳಿವಾಲೆ ಮೊದಲಾದವರು ಸೇರಿ ಕರ್ನಾಟಕ ಏಕೀಕರಣ ಚಳವಳಿಯ ಸಹಭಾಗಿತ್ವ ಪಡೆದು ಬೀದರ್ ಜಿಲ್ಲೆಯ ಅನೇಕ ಪ್ರದೇಶಗಳನ್ನು ಕರ್ನಾಟಕದಲ್ಲಿ ಉಳಿಸಿಕೊಂಡವರು. ಗಡಿ ಭಾಗವಾದ ಬೀದರ್ ಜಿಲ್ಲೆಯಲ್ಲಿ ಕನ್ನಡ ನಾಡು, ನುಡಿ, ನೆಲ, ಜಲ, ಜನಹಿತಕ್ಕಾಗಿ ಅಹರ್ನಿಶಿ ದುಡಿದ ಧೀಮಂತ ನಾಯಕರು. ರಾಜಕೀಯ ಉದ್ಯಮವಲ್ಲ, ಅದೊಂದು ಸೇವಾವಲಯವೆಂದು ಭಾವಿಸಿದ ಮಹಾಮುತ್ಸದ್ದಿಗಳು.

ಕೋಟಿ ವಿದ್ಯಗಿಂತ ಮೇಟಿ ವಿದ್ಯೆ ಲೇಸೆಂಬ ಲೋಕೋಕ್ತಿಗೆ ಬದ್ದರಾದ ಭೀಮಣ್ಣ ಖಂಡ್ರೆ ಅವರು ರೈತರ ಹಿತಕ್ಕಾಗಿ ಅಹರ್ನಿಶಿ ದುಡಿದವರು. ಅದರ ಭಾಗವಾಗಿಯೇ ಕೃಷಿಕರಿಗಾಗಿ ಬೀಜಾಂದೋಲನ, ರಾಷ್ಟ್ರಮಟ್ಟದ ಕಿಸಾನ್ ರ್ಯಾಲಿ ಮಾಡಿದಲ್ಲದೆ ಬಿ.ಎಸ್.ಎಸ್.ಕೆ ಆರಂಭಿಸಿದವರು. ಕೃಷಿ ಅಭಿವೃದ್ಧಿ ಸಂಬಂಧಿತ ಲೋಕಜ್ಞಾನ ಪಡೆಯಲು ವಿದೇಶಗಳನ್ನು ಸುತ್ತಿ, ಕೃಷಿ ಪ್ರೀತಿ ಮೆರೆದವರು.

1949-50ರ ಕಾಲಾವಧಿಯಲ್ಲಿ ಬೀದರ್ ಭಾಗವು ಹೈದರಾಬಾದ್ ಪ್ರಾಂತ್ಯದ ವೆಲ್ಲೋಡಿ ಸರ್ಕಾರದ ಅಧೀನದಲ್ಲಿದ್ದು ಸರ್ಕಾರವು ಹೆಚ್ಚಿನ ಕಂದಾಯವನ್ನು ವಸೂಲಿ ಮಾಡುತ್ತಿತ್ತು. ಅದರ ವಿರುದ್ಧ ಹೋರಾಟಕ್ಕೆ ಮುಂದಾದರು. ರೈತರ ಸಮಸ್ಯೆಗಳನ್ನು ಬಲ್ಲ ಪ್ರಭುರಾವ್ ಕಂಬಳಿವಾಲೆ, ಕಿಸಾನ ಪರಿಷತ್ತಿನ ಪ್ರಾಂತೀಯ ಅಧ್ಯಕ್ಷರಾಗಿದ್ದ ಆರ್.ವಿ. ಬಿಡಪ್, ಕಾಶಪ್ಪ ಖಂಡ್ರೆ, ಭೀಮಣ್ಣ ಖಂಡ್ರೆ, ಮಹಾದಪ್ಪ ಮೀಸೆ, ಧರ್ಮಪಾಲ್ ಮೊದಲಾದವರು ರೈತರ ಮೇಲಾಗುತ್ತಿದ್ದ ಶೋಷಣೆಯ ಬಗ್ಗೆ ಚರ್ಚಿಸಿ ಒಂದು ಕಿಸಾನ ಮೋರ್ಚಾವನ್ನು ಹೈದರಾಬಾದಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಯಿತು. ರೈತ ಹೋರಾಟದ ಅಧ್ಯಕ್ಷರಾಗಿದ್ದ ಆರ್.ವಿ. ಬಿಡಪ್, ಮಹಾದೇವ ಸಿಂಗ್ ನೇತೃತ್ವದಲ್ಲಿ ಹೋರಾಟಕ್ಕೆ ಅಣಿಯಾದರು. ಈ ಬಗ್ಗೆ ಭೀಮಣ್ಣ ಖಂಡ್ರೆಯವರು ‘ಚಲೋ ಶಾಹ ಮಂಜಿಲ್’ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು. ಭಾಲ್ಕಿಯ ಜಾಹಗೀರದಾರರಾಗಿದ್ದ ದತ್-ಉದ್- ದೌಲಾ ವಿರುದ್ಧ ಕೋಟ್ನಲ್ಲಿ ಹೂಡಲಾಗಿದ್ದ ದಾವೆ ಬಗ್ಗೆ ಮತ್ತು ರೈತರ ಸಮಸ್ಯೆಯನ್ನು ಶೀಘ್ರವಾಗಿ ಪರಿಶೀಲಿಸುವ ದಿಶೆಯಲ್ಲಿ ಚರ್ಚಿಸಲು ವಕೀಲರಾಗಿದ್ದ ಮಜಗೆಯವರ ಸಲಹೆಯನ್ನು ಖಂಡ್ರೆಯವರು ಪಡೆದರು. ಘೋಂಗಡಿಹೊತ್ತ 1,400 ಜನರ ರೈತರೊಂದಿಗೆ ಕೂಡಿಕೊಂಡು ಹೈದರಾಬಾದಿನವರೆಗೆ ಪಾದಯಾತ್ರೆ ಮಾಡಿದರು. ಶಾಹ ಮಂಜಿಲ್ ಎದುರುಗಡೆ 1951ರ ಜೂನ್ 6ರಂದು ಧರಣಿ ಕೂತರು. 15 ಎಕರೆ ಜಮೀನು ಇರುವ ರೈತರ ಕಂದಾಯವನ್ನು ಮನ್ನಾ ಮಾಡಬೇಕೆಂಬ ಪ್ರಮುಖ ಬೇಡಿಕೆಯನ್ನಿತ್ತರು. ಮುಖ್ಯಮಂತ್ರಿ ಎಂ.ಕೆ. ವೆಲ್ಲೋಡಿ ಅವರು ಕಂದಾಯ ಮಂತ್ರಿಗಳಾಗಿದ್ದ ಬಿ. ರಾಮಕಿಶನರಾವ್ ಮತ್ತು ವಿನಾಯಕರಾವ್ ಕೊರಟಕರ್ ಅವರನ್ನು ಸಂಪರ್ಕಿಸಿ ಭೂಕಂದಾಯ ಮತ್ತು ಲೇವಿಗಳಲ್ಲಿದ್ದ ತಾರತಮ್ಯವನ್ನು ಸರಿಪಡಿಸಿದರು. ಆದರೆ ಎಂ.ಕೆ. ವೆಲ್ಲೋಡಿ ನೇತೃತ್ವದ ಸರ್ಕಾರವು ರೈತರ ಕಂದಾಯದ ಶೇಕಡಾ 50ರಷ್ಟು ಹೊರೆಯನ್ನು ಕಡಿಮೆ ಮಾಡಿತು. ಇದು ಭೀಮಣ್ಣ ಖಂಡ್ರೆಯವರು ಕಾರ್ಯದರ್ಶಿಗಳಾಗಿ ಹಮ್ಮಿಕೊಂಡ ಹೋರಾಟಕ್ಕೆ ಸಂದ ಮೊದಲನೆಯ ಜಯವಾಗಿತ್ತು.

ಭೀಮಣ್ಣ ಖಂಡ್ರೆ ಅವರು 1967ರ ಚುನಾವಣೆಯಲ್ಲಿ ಗೆದ್ದು, ವಿಧಾನಸಭೆಯಲ್ಲಿ ಕಾರಂಜಾ ನೀರಾವರಿ ಯೋಜನೆಗೆ ಮಂಜೂರಿ ಪಡೆದಿರುವುದರಿಂದ ಬೀದರ್ ಜಿಲ್ಲೆಯ ಕೆಲಮಟ್ಟಿನ ರೈತರಿಗಾದರೂ ಈ ಕಾರಂಜಾ ಯೋಜನೆಯ ಫಲ ದೊರಕುವಂತಾಯಿತು.

ರಾಜ್ಯ ಮಟ್ಟದ ಮೊದಲ ರೈತ ಸಮ್ಮೇಳನವನ್ನು ಭಾಲ್ಕಿಯ ಚನ್ನಬಸವೇಶ್ವರ ಕಾಲೇಜು ಆವರಣದಲ್ಲಿ 1980ರ ಜನವರಿ 21ರಂದು ಆಯೋಜಿಸಲಾಗಿತ್ತು. ನಾಡಿನ ಮೂಲೆಮೂಲೆಯಿಂದಲೂ ರೈತ ಪ್ರತಿನಿಧಿಗಳು ಸೇರಿ ಎರಡು ಲಕ್ಷ ಜನ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಸಮ್ಮೇಳನವನ್ನು ಉದ್ಘಾಟಿಸಿದ್ದರು. ಎಂ.ಎಫ್ ಖಾನ್, ಆರ್.ವೈ. ಘೋರ್ಪಡೆ, ಕೆ.ಎಚ್. ಪಾಟೀಲರು ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿದ್ದರು. ಈ ಸಮ್ಮೇಳನದಲ್ಲಿ ಮಾರಾಟ ತೆರಿಗೆ ರದ್ದತಿ, ಸಾಲ ಮನ್ನಾ, ಸುಲಭ ಬೆಲೆಯಲ್ಲಿ ಬಿತ್ತನೆ ಬೀಜ ವಿತರಣೆ, ಕೃಷಿ ಉತ್ಪನ್ನಗಳ ಬೆಲೆ ನಿರ್ಧಾರ, ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೈರೈಕೆ, ಕಡಿಮೆ ಬೆಲೆಯಲ್ಲಿ ಕೃಷಿ ಸಾಮಗ್ರಿಗಳ ವಿತರಣೆಯಂತಹ ಅನೇಕ ಪ್ರಮುಖವಾದ ವಿಷಯಗಳನ್ನು ಚರ್ಚಿಸಿ ಸಮ್ಮೇಳನದಲ್ಲಿ 20 ನಿರ್ಣಯಗಳನ್ನು ಮಂಡಿಸಿದರು. ಅವುಗಳನ್ನು ಪರಿಶೀಲಿಸಲು ಸರ್ಕಾರವು 16 ಜನ ಪರಿಣಿತರ ಸಮಿತಿಯನ್ನು ರಚಿಸಿತು. ಆ ಸದಸ್ಯರಲ್ಲಿ ಡಾ. ಭೀಮಣ್ಣ ಖಂಡ್ರೆ ಕೂಡಾ ಒಬ್ಬರಾಗಿದ್ದರು. 20 ಬೇಡಿಕೆಗಳ ಪೈಕಿ ಸರ್ಕಾರವು 16 ಬೇಡಿಕೆಗಳಿಗೆ ಒಪ್ಪಿಗೆ ನೀಡಿತು.

ಡಾ. ಭೀಮಣ್ಣ ಖಂಡ್ರೆಯವರು ಕಿಸಾನ್ ಸೆಲ್ ಕರ್ನಾಟಕ ಘಟಕದ ಅಧ್ಯಕ್ಷರಾಗಿ, 1981ರ ಫೆಬ್ರವರಿ 16ರಂದು ದೆಹಲಿಯಲ್ಲಿ ನಡೆದ ರೈತ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯದಿಂದಲೇ 16,000 ರೈತರನ್ನು ದೆಹಲಿಗೆ ಕರೆದೊಯ್ದಿದ್ದರು. ಕರ್ನಾಟಕ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ, ರೈತ ಕುಟುಂಬದ ವಾರಸುದಾರರೂ ಆಗಿದ್ದರಿಂದ ಈ ಸಂಘಟನೆಯ ನೇತೃತ್ವವಹಿಸಲು ಅವರಿಗೆ ಸಾಧ್ಯವಾಯಿತು. ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಇಂದಿರಾ ಗಾಂಧಿ ಅವರು ಖಂಡ್ರೆಯವರನ್ನು ಮುಕ್ತಕಂಠದಿಂದ ಪ್ರಶಂಶಿಸಿದರು. ಆ ಸಮ್ಮೇಳನದಲ್ಲಿ ಮಂಡಿಸಲಾದ ಗೊತ್ತುವಳಿಗಳ ಪರಿಣಾಮವಾಗಿ ಕರ್ನಾಟಕ ಸರ್ಕಾರ ರೈತರ ಹಕ್ಕುಗಳ ರಕ್ಷಣೆಗಾಗಿ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿತು. ದೇವರಾಜ ಅರಸು ಸರ್ಕಾರ ಈ ಕಾಯ್ದೆ ತರುವ ಮೂಲಕ ರೈತ ಸಮುದಾಯದ ಪಾಲಿಗೆ ಆಶಾಕಿರಣವಾದಂತಾಯಿತು. ರೈತರ ಆ ಸಂತೋಷದ ಹಿಂದೆ ಭೀಮಣ್ಣ ಖಂಡ್ರೆಯವರ ಪರಿಶ್ರಮ ಮರೆಯುವಂತಿಲ್ಲ.

ರಾಜ್ಯ ರೈತರ ಮೂರನೆಯ ಸಮ್ಮೇಳನವನ್ನು 1982ರ ನವೆಂಬರ್ 8ರಂದು ಭಾಲ್ಕಿಯಲ್ಲಿ ಆಯೋಜಿಸಿದಾಗ ಎಐಸಿಸಿ ಕಾರ್ಯದರ್ಶಿಯಾಗಿದ್ದ ರಾಜೀವ್ ಗಾಂಧಿಯವರನ್ನು ಆಹ್ವಾನಿಸಲಾಗಿತ್ತು. ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಮುಂದೆ ರೈತರ ಬೇಡಿಕೆಗಳನ್ನು ಮಂಡಿಸಿ, ಶೇಕಡಾ 50ರಷ್ಟು ಮಾರುಕಟ್ಟೆ ಶುಲ್ಕ ಕಡಿಮೆ ಮಾಡಿಸಿದ ಕೀರ್ತಿ ಭೀಮಣ್ಣ ಖಂಡ್ರೆಯವರಿಗೆ ಸಲ್ಲುತ್ತೆ. ಭೀಮಣ್ಣ ಖಂಡ್ರೆಯವರು ರೈತರ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಮಾತನಾಡುತ್ತ- ‘ರೈತರ ಹಲವು ದುಃಖ ದುಮ್ಮಾನಗಳಿಗೆ ಹೆಚ್ಚಿನ ಕಂದಾಯ, ಮಾರುಕಟ್ಟೆಯ ಶುಲ್ಕ ಪ್ರಮುಖ ಕಾರಣವಾಗಿವೆ. ಕಂದಾಯ ವಸೂಲಿಯ ಕಠಿಣ ಕ್ರಮಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಸಮಾವೇಶದಲ್ಲಿ ಮಾತಾಡಿದನ್ನು ಪರಿಗಣಿಸಿ ರಾಜೀವ್ ಗಾಂಧಿಯವರು ಸಮ್ಮೇಳನದಲ್ಲಿಯೇ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರಿಗೆ ಕಂದಾಯ ಕಡಿಮೆ ಮಾಡುವಂತೆ ಸೂಚನೆ ನೀಡಿದರು. ಅದು ಕರ್ನಾಟಕದ ರೈತರಿಗೆ ಬಹಳಷ್ಟು ಅನುಕೂಲವಾಯಿತು. ವಿಶೇಷವಾಗಿ ಈ ರೈತ ಸಮ್ಮೇಳನವು ಖಂಡ್ರೆಯವರನ್ನು ಪ್ರಸಿದ್ಧಿಗೆ ತಂದ ಫಲವಾಗಿ 1983ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿಧಾನ ಸಭೆಗೆ ಅವರನ್ನು ಆಯ್ಕೆಮಾಡಿ ಜನ ಋಣತೀರಿಸಿದರು.

ಪ್ರಾಕೃತಿಕ ವಿಕೋಪದಿಂದ 1997-98ರ ಅವಧಿಯಲ್ಲಿ ಹಿಂಗಾರು ಮತ್ತು ಮುಂಗಾರು ಬೆಳೆ ಬರಲಿಲ್ಲ. ಮೇಲಾಗಿ ಆ್ಯಸಿಡಿಕ್ ರೇನ್ ಎಂಬ ಬೆಂಕಿಮಳೆ ಸುರಿಯಿತು. ಅಷ್ಟಿಷ್ಟು ಪ್ರಮಾಣದಲ್ಲಿ ಬೆಳೆದ ಬೆಳೆಗಳೆಲ್ಲ ನಾಶವಾದವು. ರೈತರು ಕಂಗಾಲಾದರು. ಆಗಿನ ಜನತಾ ದಳ ಸರ್ಕಾರ ಸ್ಪಂದಿಸದಿದ್ದಾಗ ಬೀದರ್ ಜಿಲ್ಲೆಯಲ್ಲಿ ಸುಮಾರು 23 ರೈತರು ಆತ್ಮಹತ್ಯೆ ಮಾಡಿಕೊಂಡರು. . ಇದನ್ನು ಗಂಭೀರವಾಗಿ ಪರಿಗಣಿಸಿದ ಭೀಮಣ್ಣ ಖಂಡ್ರೆಯವರು ಸ್ವತಃ ತಾವೇ ಮುಂದಾಳತ್ವ ವಹಿಸಿ 1998ರ ಮಾರ್ಚ್ 7ರಂದು ಬೀದರ್ ಜಿಲ್ಲಾಧಿಕಾರಿ ಕಚೇರಿ ಎದುರು ರೈತರೊಂದಿಗೆ ಪ್ರತಿಭಟನೆ ಮಾಡಿ ಧರಣಿ ಕುಳಿತರು. ಬೆಂಕಿಮಳೆ ಪ್ರಕೋಪಕ್ಕೆ ಸ್ಪಂದಿಸುತ್ತಿದ್ದ ಖಂಡ್ರೆಯವರ ಸಂಘಟನಾ ಶಕ್ತಿಗೆ ಮೆಚ್ಚಿಕೊಂಡ ಸೋನಿಯಾ ಗಾಂಧಿಯವರು 1998ರ ಜೂನ್ 26ರಂದು ಭಾಲ್ಕಿಗೆ ಆಗಮಿಸಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ವತಿಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರತಿರೈತ ಕುಟುಂಬಗಳಿಗೆ ಹತ್ತು ಸಾವಿರ ರೂಪಾಯಿಗಳ ಚೆಕ್ ವಿತರಿಸಿ ನೊಂದ ರೈತ ಕುಟುಂಬಕ್ಕೆ ಪ್ರಾಣ ಮಿತ್ರರಾದರು. ಇದರಿಂದಾಗಿ ಕರ್ನಾಟಕ ಸರ್ಕಾರವು ಜಂಟಿ ಸದನ ಸಮಿತಿಯ ವರದಿಯಂತೆ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ಒಪ್ಪಿಕೊಂಡಿತು. ಆದರೆ ಪರಿಹಾರ ಧನವು ರೈತರಿಗೆ ಸಮರ್ಪಕವಾಗಿ ತಲುಪಲಿಲ್ಲ. ಆ ಬಗ್ಗೆ ಸಾಕಷ್ಟು ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ. ಆದಕಾರಣ ಖಂಡ್ರೆಯವರು ಮಾನವಹಕ್ಕು ಆಯೋಗದಲ್ಲಿ, ಸುಪ್ರೀ ಕೋರ್ಟಿನಲ್ಲಿ ನ್ಯಾಯಸಮ್ಮತ ರೀತಿಯಲ್ಲಿ ಹೋರಾಟ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಟ್ಟು ಧೀಮಂತಿಕೆ ಮೆರೆದರು.

ಬೀಜಾಂದೋಲನ:

ಎಪ್ಪತ್ತರ ದಶಕವೆಂದರೆ ಭೀಕರ ಬರಗಾಲ. ಎಲ್ಲೆಡೆ ಕ್ಷಾಮ. ಬೀದರ್ ಜಿಲ್ಲೆಯಲ್ಲಿ 1972ರ ಕಾಲಕ್ಕೆ ಬಿತ್ತಿದ ಬೆಳೆ ಬರಲಿಲ್ಲ. ಕೆರೆ, ಹಳ್ಳ, ಬಾವಿಗಳು ಬತ್ತಿದವು. ಎಲ್ಲೇಡೆ ನೀರಿನ ಸಮಸ್ಯೆ ಉದ್ಭವಿಸಿತು. ದನಕರುಗಳು ಸಾಯಲಾರಂಭಿಸಿದವು. ರೈತರು ಕಂಗಾಲಾದರು. ಕಣ್ಣೆದುರಿನಲ್ಲಿಯೆ ಸಾಯುತ್ತಿರುವ ದನ ಕರುಗಳು ಎಲ್ಲಾದರೂ ಬದುಕಲೆಂದು ಹೊರಗೆ ಬಿಟ್ಟು ತಾವೂ ವಲಸೆ ಹೋದರು.

ಮುಂದೆ ಜೂನ್ನಲ್ಲಿ ಮಳೆಯಾದಾಗ ರೈತರು ಭೂಮಿ ಹದಗೊಳಿಸಿದರು. ಆದರೆ ಯಾರಲ್ಲೂ ಬಿತ್ತನೆಗೆ ಬೀಜ ಮಾತ್ರ ಇರಲಿಲ್ಲ. ಸರಕಾರಿ ಗೋದಾಮುಗಳಲ್ಲಿ ಸಾಕಷ್ಟು ದಾಸ್ತಾನು ಇದ್ದರೂ ಸರ್ಕಾರವೂ ರೈತರ ಸಮಸ್ಯೆಗೆ ಕಿವಿಗೊಡಲಿಲ್ಲ. ಕೃಷಿ ಅಧಿಕಾರಿಗಳು ರೈತರ ನೆರವಿಗೆ ಧಾವಿಸಲಿಲ್ಲ. ರೈತರ ಸಮಸ್ಯೆಗಳಿಗೆ ಕಿವಿಯಾದ ಖಂಡ್ರೆಯವರು ರೈತರಿಗೆ ಬೀಜ ಪೂರೈಸುವಂತೆ ರಾಜ್ಯ ಮತ್ತು ಸರ್ಕಾರಕ್ಕೆ ಪತ್ರ ಬರೆದರು. ಯಾವುದೇ ಉತ್ತರ ಬರದೆ ನಿಷ್ಪ್ರಯೋಜಕವಾದಾಗ ಅನಿವಾರ್ಯವಾಗಿ ಖಂಡ್ರೆಯವರು ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿಯಬೇಕಾಯಿತು. ಅವರು ಬೀಜಾಂದೋಲನಕ್ಕೆ ಕರೆಕೊಟ್ಟು, ಟೊಂಕಕಟ್ಟಿ ನಿಂತದ್ದೇ ಒಂದು ಚರಿತ್ರಾರ್ಹ ಚಳವಳಿ. ಭೀಮಣ್ಣ ಖಂಡ್ರೆಯವರ ಧೈರ್ಯ, ಸಾಹಸ, ಆತ್ಮವಿಶ್ವಾಸಕ್ಕೊಂದು ನಿದರ್ಶನವೆನ್ನಬೇಕು. ಖಂಡ್ರೆಯವರ ಈ ಹೋರಾಟಕ್ಕೆ ಹತ್ತು ಸಾವಿರ ರೈತರು ಬೆಂಬಲಿಸಿ ಧರಣಿ ಕುಳಿತರು. ಅದು ಪ್ರಯೋಜನವಾಗುವ ಲಕ್ಷಣ ಕಂಡುಬರದಾಗ ಭೀಮಣ್ಣ ಖಂಡ್ರೆಯವರು ಕೈಗೊಳ್ಳುವ ನಿರ್ಧಾರಕ್ಕೆ 40 ಜನ ವಕೀಲರು, 300 ಜನ ಕಾರ್ಯಕರ್ತರು, ಸಾವಿರಾರು ಸ್ವಯಂಸೇವಕರು ಅವರ ಬೆಂಬಲಕ್ಕೆ ನಿಂತರು. ಇದರಿಂದ ಉತ್ಸಾಹಿತರಾದ ಖಂಡ್ರೆಯವರು ತಾವೆ ಗೋದಾಮುಗಳ ಬೀಗ ಮುರಿದು ಅಲ್ಲಿದ್ದ ಬೀಜವನ್ನು ರೈತರಿಗೆ ಹಂಚಲು ಪ್ರಾರಂಭಿಸಿದರು. ಸರ್ಕಾರದ ವಿರುದ್ಧ ಬಂಡಾಯವೆದ್ದು ಉಗ್ರಾಣದ ಬೀಗ ಮುರಿದು ಬೀಜ ಹಂಚಿದ್ದಕ್ಕಾಗಿ ಪೊಲೀಸರು ಖಂಡ್ರೆಯವರನ್ನು ಸೇರಿದಂತೆ ಆಂದೋಲನದಲ್ಲಿ ಭಾಗವಹಿಸಿದ ಅನೇಕರನ್ನು ಬಂಧಿಸಿ ಜೈಲಿಗೆ ಹಾಕಿದರು. ರೊಚ್ಚಿಗೆದ್ದ ರೈತರ ಪ್ರತಿಭಟನೆ ಮತ್ತಷ್ಟು ತೀವ್ರವಾಯಿತು. ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಕೃಷಿ ಸಚಿವ ಮತ್ತು ಖಂಡ್ರೆಯವರ ಆಪ್ತ ಸ್ನೇಹಿತರಾಗಿದ್ದ ಕೆ.ಎಚ್. ಪಾಟೀಲ ತಿಳಿಹೇಳಿದರೂ ಖಂಡ್ರೆಯವರು ಕೇಳಲಿಲ್ಲ. ರೈತರಿಗೆ ಬೀಜ ಸಿಗುವವರೆಗೆ ನಾನು ಜೈಲಿನಿಂದ ಹೊರಗಡೆ ಬರುವುದಿಲ್ಲವೆಂದು ಹಠ ಹಿಡಿದರು. ಅವರ ಸಂಘಟನಾ ಶಕ್ತಿ, ಕಾರ್ಯೋತ್ಸಾಹ ಗಮನಿಸಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಬೇಷರತ್ತಾಗಿ ಕಾರಾಗೃಹದಿಂದ ಎಲ್ಲರನ್ನು ಬಿಡುಗಡೆ ಮಾಡಬೇಕೆಂದು ನಿರ್ದೇಶನ ನೀಡಿದ್ದರಿಂದ ದೇವರಾಜ ಅರಸು ಸರ್ಕಾರವು ಅವರನ್ನು ಬಿಡುಗಡೆ ಮಾಡಿತು. ಹೀಗೆ ಹಿಡಿದ ಛಲ ಬೀಡದೆ, ನಿರಂತರವಾಗಿ ರೈತರ ನೆರವಿಗೆ ನಿಂತರು.

ಸಾಮಾಜಿಕ ಸಾಮರಸ್ಯ ಹಾಗೂ ಧರ್ಮಸಹಿಷ್ಣುತೆಗೆ ಹೆಸರಾದ ಇವರು ಭಾಲ್ಕಿಯ ದಲಿತರಿಗೆ ಉಚಿತ ನಿವೇಶನ ಹಂಚಿ ತಳ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದಲ್ಲದೆ ಜಾತ್ಯತೀತ ಸಮಸಮಾಜ ನಿರ್ಮಿಸಲು ಹೋರಾಟ ಮಾಡಿದವರು. ಶಾಂತಿ ಸ್ಥಾಪನೆಗಾಗಿ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡಿದ್ದು ಇವರ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.

‘ಅಧಿಕಾರ ಮನುಷ್ಯರನ್ನು ಭ್ರಷ್ಟಗೊಳಿಸುತ್ತದೆ’ ಎಂಬ ತತ್ವಜ್ಞಾನಿಯ ಮಾತನ್ನು ಹುಸಿಗೊಳಿಸಿ ಅಧಿಕಾರ ಅನುಭವಿಸಲಿಕ್ಕಲ್ಲ ಜನಸೇವೆ ಮಾಡಲು ಸಿಕ್ಕ ಸದಾವಕಾಶವೆಂದರಿತ ಅವರು ಬೀದರ್ ಜಿಲ್ಲೆ ಕಿಸಾನ್ ಮೋರ್ಚಾದ ಕಾರ್ಯದರ್ಶಿಯಾಗಿ, ಬಿ.ಎಸ್.ಎಸ್.ಕೆ. ಅಧ್ಯಕ್ಷರಾಗಿ, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗಿ, ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಆಯಾ ಹುದ್ದೆಗಳಿಗೆ ಗೌರವತೊಂದು ಕೊಟ್ಟವರು. ಪ್ರಜಾ ಸೋಷಿಯಲಿಸ್ಟ್ ಪಕ್ಷದ ಮೂಲಕ ಸಕ್ರಿಯ ರಾಜಕಾರಣಕ್ಕೆ ತೊಡಗಿಸಿಕೊಂಡ ಇವರು ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾಗಿ, ಎಐಸಿಸಿಎ ಸದಸ್ಯರಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ ಮೇರು ಶ್ರೇಣಿಯ ಲೋಕನಾಯಕರಾಗಿ ಜನಮದಲ್ಲಿ ಸ್ಥಾಯಿಯಾಗುಳಿದರು.

(ಲೇಖಕರು: ಸಾಹಿತಿ ಹಾಗೂ ಬೀದರ್ ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.