ಶನಿವಾರ, ಫೆಬ್ರವರಿ 29, 2020
19 °C
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆ ಇಂದು

ವಚನ ವಿಜಯೋತ್ಸವಕ್ಕೆ ಬಸವಗಿರಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶುಕ್ರವಾರ(ಫೆ.7)ದಿಂದ ಮೂರು ದಿನಗಳ ಕಾಲ ನಡೆಯಲಿರುವ 17ನೆಯ ವಚನ ವಿಜಯೋತ್ಸವಕ್ಕೆ ಇಲ್ಲಿಯ ಬಸವಗಿರಿ ಸಜ್ಜುಗೊಂಡಿದೆ.

ವಿಜಯೋತ್ಸವಕ್ಕಾಗಿ ವಿಶಾಲ ಮಂಟಪ, ವೇದಿಕೆ ಹಾಗೂ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.

ಮಂಟಪಕ್ಕೆ ಡಾ. ಚನ್ನಬಸವ ಪಟ್ಟದ್ದೇವರು, ವೇದಿಕೆಗೆ ಲಿಂಗಾನಂದ ಸ್ವಾಮೀಜಿ ಹಾಗೂ ಮಹಾದ್ವಾರಕ್ಕೆ 770 ಅಮರಗಣಂಗಳ ಹೆಸರು ಇಡಲಾಗಿದೆ. ಮಂಟಪದಲ್ಲಿ ಏಕಕಾಲಕ್ಕೆ ಹತ್ತಾರು ಸಾವಿರ ಜನ ಕುಳಿತುಕೊಳ್ಳಬಹುದಾಗಿದೆ.
ಭಕ್ತರಿಗೆ ಪ್ರಸಾದಕ್ಕಾಗಿ ಪ್ರತ್ಯೇಕ ನೀಲಾಂಬಿಕೆ ಪ್ರಸಾದ ಮಂಟಪ ಹಾಗೂ ದಾಸೋಹ ಮಂಟಪ ನಿರ್ಮಾಣ ಮಾಡಲಾಗಿದೆ.

ಮೂರೂ ದಿನ ನಿರಂತರ ಪ್ರಸಾದ ವ್ಯವಸ್ಥೆ ಇರಲಿದೆ. ಸಜ್ಜೆ, ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಗೋಧಿ ಹುಗ್ಗಿ, ಭಜ್ಜಿ, ಅನ್ನ ಸಾರು ಪ್ರಸಾದದ ವಿಶೇಷ ಆಗಿರಲಿವೆ. ಬಸವಗಿರಿಯ ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ನೌಬಾದ್, ಮಂಗಲಪೇಟ್, ಚೌಬಾರಾದಿಂದ ಬೆಳಿಗ್ಗೆ 7.30 ರಿಂದ ರಾತ್ರಿ 8.30 ರ ವರೆಗೆ ನಗರ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಪಾಪನಾಶದಿಂದ ಬಸವಗಿರಿಯವರೆಗೆ ಉಚಿತ ವಾಹನ ಸೌಕರ್ಯ ಕೂಡ ಇರಲಿದೆ.

‘ವಚನ ಸಾಹಿತ್ಯದ ಸಂರಕ್ಷಣೆಗಾಗಿ ಶರಣರು ಮಾಡಿದ ತ್ಯಾಗ ಹಾಗೂ ಬಲಿದಾನದ ಸ್ಮರಣೆಗಾಗಿ ಪ್ರತಿ ವರ್ಷ ವಚನ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ವಚನ ವಿಜಯೋತ್ಸವವು ಹಿಂದಿಗಿಂತಲೂ ಅರ್ಥಪೂರ್ಣವಾಗಿರಲಿದೆ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಿಳಿಸುತ್ತಾರೆ.

‘ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಅಸಂಖ್ಯಾತ ಭಕ್ತರು ವಚನ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜಯೋತ್ಸವದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ’ ಎಂದು ಹೇಳುತ್ತಾರೆ.

‘ಸ್ವಾಗತ ಸೇರಿದಂತೆ 22 ಸಮಿತಿಗಳನ್ನು ರಚಿಸಲಾಗಿದೆ. ವಿವಿಧ ಸಮಿತಿಗಳ 150ಕ್ಕೂ ಹೆಚ್ಚು ಸದಸ್ಯರು ವಚನ ವಿಜಯೋತ್ಸವದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ’ ಎಂದು ತಿಳಿಸುತ್ತಾರೆ.

ಮುಖ್ಯಮಂತ್ರಿ ಚಾಲನೆ: ಶುಕ್ರವಾರ ಬೆಳಿಗ್ಗೆ 7.30ಕ್ಕೆ ಷಟ್‌ಸ್ಥಲ ಧ್ವಜಾರೋಹಣ, ಗುರುವಚನ ಪರುಷ ಕಟ್ಟೆಯಲ್ಲಿ ಧರ್ಮಗ್ರಂಥ ಗೌರವಾರ್ಪಣೆಯ ನಂತರ ಸಾಮೂಹಿಕ ಇಷ್ಟಲಿಂಗಯೋಗದೊಂದಿಗೆ ವಚನ ವಿಜಯೋತ್ಸವ ಆರಂಭವಾಗಲಿದೆ. ಬೆಳಿಗ್ಗೆ 11ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಜಯೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)