NEET: ಪಾಲಕರ ಸಾವಿನ ಮಧ್ಯೆ ವಿದ್ಯಾರ್ಥಿನಿ ಸಾಧನೆ; ಶುಲ್ಕ ಭರಿಸಲಿರುವ ಶಾಹೀನ್

ಬೀದರ್: ಮೂರು ತಿಂಗಳ ಅವಧಿಯಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಆಘಾತದ ನಡುವೆಯೇ ನೀಟ್‍ನಲ್ಲಿ ಸಾಧನೆಗೈದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ರೇಖಾ ಅಡೂರ ಅವರ ವೈದ್ಯಕೀಯ ಕೋರ್ಸ್ನ ಶುಲ್ಕ ಭರಿಸಲು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಮುಂದೆ ಬಂದಿದೆ.
ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರೇಖಾ ಅವರನ್ನು ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಸನ್ಮಾನಿಸಿದರು. ವಿದ್ಯಾರ್ಥಿಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
‘ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿ ನಿಯ 5 ವರ್ಷಗಳ ವೈದ್ಯಕೀಯ ಕೋರ್ಸ್ನ ಶುಲ್ಕ ಭರಿಸಲಾಗುವುದು. ಅಗತ್ಯವಾದರೆ ಹಾಸ್ಟೇಲ್ ಶುಲ್ಕ ಕಟ್ಟಲು ಸಹ ಸಿದ್ಧ’ ಎಂದರು. ಸ್ಥಳದಲ್ಲೇ ವಿದ್ಯಾರ್ಥಿನಿಗೆ ವೈದ್ಯಕೀಯ ಕೋರ್ಸ್‍ನ ಮೊದಲ ವರ್ಷದ ಶುಲ್ಕ ₹60 ಸಾವಿರ ಮೌಲ್ಯದ ಚೆಕ್ ಹಸ್ತಾಂತರಿಸಿದರು.
‘ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಆರ್ಥಿಕ ಸಂಕಷ್ಟ ಅವಳ ಶಿಕ್ಷಣಕ್ಕೆ ತೊಡಕಾಗಬಾರದು. ದಾನಿಗಳು, ಸಂಘ ಸಂಸ್ಥೆಗಳು ಇಂತಹ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಲು ಮುಂದೆ ಬರಬೇಕು’ ಎಂದು ಮನವಿ ಮಾಡಿದರು.
ಕನಸು ಸಾಕಾರಗೊಳಿಸಿದ ಶಾಹೀನ್: ‘ನಾನು ವೈದ್ಯೆಯಾಗಬೇಕು ಎಂಬ ನನ್ನ ತಂದೆ-ತಾಯಿಯ ಕನಸನ್ನು ಶಾಹೀನ್ ಸಂಸ್ಥೆ ಸಾಕಾರಗೊಳಿಸಿದೆ. ಆದರೆ, ಅದನ್ನು ನೋಡಲು ಈಗ ಅವರೇ ಇಲ್ಲ’ ಎಂದು ರೇಖಾ ಭಾವುಕರಾದರು.
‘ಪಿಯು ಶಿಕ್ಷಣ ಶಾಹೀನ್‍ನಲ್ಲೇ ಪಡೆದಿದ್ದೇನೆ. 2020ನೇ ಸಾಲಿನ ನೀಟ್‍ನಲ್ಲಿ 391 ಅಂಕ ಬಂದ ಕಾರಣ ವೈದ್ಯಕೀಯ ಸೀಟು ಲಭಿಸಿರಲಿಲ್ಲ. ಹೀಗಾಗಿ ಶಾಹೀನ್‍ನಲ್ಲಿ ಮತ್ತೆ ನೀಟ್ ತರಬೇತಿ ಪಡೆದೆ. 2ನೇ ಪ್ರಯತ್ನದಲ್ಲಿ 591 ಅಂಕ ದೊರಕಿದ್ದು, 22,883ನೇ ಶ್ರೇಯಾಂಕ ಬಂದಿದೆ. ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಸಿಗಲಿದೆ’ ಎಂದು ತಿಳಿಸಿದರು.
‘ಕುಷ್ಟಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದ ತಾಯಿ ರಾಜೇಶ್ವರಿ ಅವರು ಏಪ್ರಿಲ್ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಖ್ಯಶಿಕ್ಷಕರಾಗಿದ್ದ ತಂದೆ ಸಿದ್ದಪ್ಪ ಅವರು ಜುಲೈ 30ರಂದು ಹೃದಯಾಘಾತದಿಂದ ಮೃತಪಟ್ಟರು. ನೀಟ್ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ತಂದೆ-ತಾಯಿ ಸಾವು ಆಘಾತ ಉಂಟು ಮಾಡಿತ್ತು. ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಆಗಿತ್ತು. ಬಹಳ ದಿನಗಳವರೆಗೆ ಆ ದುಃಖದಿಂದ ಹೊರಬರಲು ಆಗಿರಲಿಲ್ಲ’ ಎಂದರು.
‘ಡಾ.ಅಬ್ದುಲ್ ಖದೀರ್ ಹಾಗೂ ಕಾಲೇಜು ಉಪನ್ಯಾಸಕರು ಸಮಾಧಾನ ಹೇಳಿ, ಆತ್ಮವಿಶ್ವಾಸ ತುಂಬಿದರು. ಕಾಲೇಜಿನಲ್ಲಿರುವ ಉತ್ತಮ ಶೈಕ್ಷಣಿಕ ವಾತಾವರಣದಿಂದಾಗಿ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಗಳಿಸಲು ಸಾಧ್ಯವಾಯಿತು. ಈಗ ವೈದ್ಯಕೀಯ ಶಿಕ್ಷಣಕ್ಕೂ ನೆರವಾಗುತ್ತಿರುವುದಕ್ಕೆ ಶಾಹೀನ್‍ಗೆ ಕೃತಜ್ಞಳಾಗಿದ್ದೇನೆ’ ಎಂದು ತಿಳಿಸಿದರು.
ಸಿಇಒ ತೌಸಿಫ್ ಮಡಿಕೇರಿ, ಪ್ರಾಚಾರ್ಯ ಖಾಜಾ ಪಟೇಲ್ ಇದ್ದರು.
*ನನ್ನ ತಂದೆ, ಅಜ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯ ಬಲಹೀನತೆಯಿಂದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡರು. ಹೃದಯ ನೋಡುವುದಕ್ಕಾಗಿಯೇ ಹೃದಯ ರೋಗ ತಜ್ಞೆಯಾಗಲು ಬಯಸಿದ್ದೇನೆ.
ರೇಖಾ ಅಡೂರ, ವಿದ್ಯಾರ್ಥಿನಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.