ಬೀದರ್: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್ ನಡುವೆ ಸೋಮವಾರ (ಜ.5) ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಜಗಳದ ನಂತರ ನಗರ ಹೊರವಲಯದ ಚಿಕ್ಕಪೇಟೆಯ ಜಮೀನು ಚರ್ಚೆಯ ಕೇಂದ್ರ ಬಿಂದುವಾಗಿದೆ.

ಚಿಕ್ಕಪೇಟೆಯ ಸರ್ವೇ ನಂಬರ್ 30,31 ಮತ್ತು 34ರಲ್ಲಿರುವ ಒಟ್ಟು 48.36 ಎಕರೆ ಜಮೀನಿದೆ. ಈ ಸರ್ವೇ ನಂಬರ್ಗಳಲ್ಲಿ ನಿಯಮಬಾಹಿರವಾಗಿ ಲೇಔಟ್ ನಿರ್ಮಿಸಿ, ನಿವೇಶನಗಳನ್ನು ಹಾಕಿ ಮಾರಾಟ ಮಾಡಲಾಗುತ್ತಿದೆ ಎನ್ನುವುದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕೆಲ ವ್ಯಕ್ತಿಗಳ ದೂರು. ಇದೇ ವಿಷಯವನ್ನು ಜನವರಿ 5ರ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಿದ್ದಲಿಂಗಪ್ಪ ಪಾಟೀಲ್ ಪ್ರಸ್ತಾಪಿಸಿದ್ದರು. ಬಳಿಕ ಏನೆಲ್ಲ ರಾದ್ಧಾಂತವಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

2023ರ ವಿಧಾನಸಭಾ ಚುನಾವಣೆಯಲ್ಲಿ ಹುಮನಾಬಾದ್ ಮತಕ್ಷೇತ್ರದಿಂದ ಸಿದ್ದಲಿಂಗಪ್ಪ ಪಾಟೀಲ್ ಅವರು ಬಿಜೆಪಿಯಿಂದ ಗೆದ್ದ ನಂತರ ಮಾಜಿಸಚಿವ ರಾಜಶೇಖರ್ ಪಾಟೀಲ್ ಹುಮನಾಬಾದ್ ಹಾಗೂ ಅವರ ಸಹೋದರರಾದ ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್ ನಡುವೆ ದೊಡ್ಡ ಮಟ್ಟದ ವೈರತ್ವ ಬೆಳೆದಿದೆ. ಇದು ಗುಟ್ಟಾಗೇನೂ ಉಳಿದಿಲ್ಲ. ಒಂದು ಕಾಲದಲ್ಲಿ ಸಿದ್ದಲಿಂಗಪ್ಪ ಪಾಟೀಲ್ ಅವರು ರಾಜಶೇಖರ್ ಪಾಟೀಲ್ ಹುಮನಾಬಾದ್ ಕುಟುಂಬದ ನಿಕಟವರ್ತಿಯಾಗಿದ್ದರು. ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದವರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಸಿದ್ದಲಿಂಗಪ್ಪ ಪಾಟೀಲ್ ರಾಜಕೀಯವಾಗಿ ಒಂದು ಹೆಜ್ಜೆ ಮುಂದೆ ಹೋದ ಬಳಿಕ ಹುಮನಾಬಾದ್ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ರಾಜಶೇಖರ್ ಪಾಟೀಲ್ ಅವರು ಚುನಾವಣೆಯಲ್ಲಿ ಸೋತರೂ ಕೂಡ ಈಗಲೂ ಅದೇ ವರ್ಚಸ್ಸು, ಪ್ರಭಾವ ಉಳಿಸಿಕೊಂಡಿದ್ದು, ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ತಮ್ಮ ಇಬ್ಬರು ಸಹೋದರರು ಎಮ್ಎಲ್ಸಿಗಳಾಗಿರುವುದು ಪ್ಲಸ್ ಪಾಯಿಂಟ್. ತಾ ಮೇಲೂ, ನಾ ಮೇಲೂ ಎಂಬ ಎರಡು ಕಡೆಯವರ ಪ್ರತಿಷ್ಠೆ, ಪರಸ್ಪರ ಒಬ್ಬರನ್ನೊಬ್ಬರು ಹಣಿಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ. ಎರಡೂ ಕಡೆಯವರು ಸರ್ಕಾರಿ ಸಭೆ, ಸಾರ್ವಜನಿಕ ಸಮಾರಂಭಗಳಲ್ಲಿ ಬಹಿರಂಗವಾಗಿ ಕಾದಾಡಿದ್ದೇ ಸಾಕ್ಷಿ.

ಚಿಕ್ಕಪೇಟೆಯ ಸರ್ವೇ ನಂಬರ್ 30,31 ಮತ್ತು 34ರಲ್ಲಿರುವ ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಶನ್ಗೆ ಸೇರಿದ ಜಮೀನು ಅಭಿವೃದ್ಧಿಪಡಿಸಿ, ಲೇಔಟ್ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಿ, ಅದರಲ್ಲಿ ಪಾಲು ಹಂಚಿಕೊಳ್ಳುವ ಒಪ್ಪಂದದಡಿ ಪಾಟೀಲ್ರು ಹಾಗೂ ಫೌಂಡೇಶನ್ ನಡುವೆ ಒಪ್ಪಂದ ಆಗಿದೆ ಎಂದು ತಿಳಿದು ಬಂದಿದೆ. ಈಗ ಇದೇ ವಿಷಯವನ್ನು ಡಾ. ಸಿದ್ದಲಿಂಗಪ್ಪ ಪಾಟೀಲ್ ಅವರು ಬಳಸಿಕೊಂಡು ಹಣಿಯಲು ಮುಂದಾಗಿದ್ದಾರೆ. ಈ ಬಗ್ಗೆ ಇದೇ ಮೊದಲಲ್ಲ. ಈ ಹಿಂದೆ ವಿಧಾನಸಭೆಯ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದಾರೆ. ಜಿಲ್ಲಾಡಳಿತಕ್ಕೂ ದೂರು ಸಲ್ಲಿಸಿದ್ದಾರೆ. ಇದು ಪಾಟೀಲ್ ಪರಿವಾರದ ಸಿಟ್ಟಿಗೆ ಮುಖ್ಯ ಕಾರಣ.

ಸರ್ಕಾರಿ ಜಮೀನಿಗೆ ಹುಡುಕಾಟ:

ಚಿಕ್ಕಪೇಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸರ್ಕಾರಿ ಜಮೀನು ಅತಿಕ್ರಮಿಸಿರುವ ದೂರುಗಳಿವೆ. ಕೆಲವರು ತಮ್ಮ ಪ್ರಭಾವ ಬಳಸಿಕೊಂಡು ದಾಖಲೆಗಳನ್ನು ತಿರುಚಿರುವ ಗಂಭೀರ ಸ್ವರೂಪದ ಆರೋಪಗಳಿವೆ. ಸರ್ಕಾರಿ ಜಮೀನಷ್ಟೇ ಅಲ್ಲ, ಸಾರ್ವಜನಿಕ ಉದ್ದೇಶದ ರಸ್ತೆ ಕೂಡ ಕಬಳಿಸಲಾಗಿದೆ ಎಂಬ ಆರೋಪಗಳು ಸಹ ಇವೆ. ಈ ಕಾರಣಕ್ಕಾಗಿಯೇ ಜಿಲ್ಲಾಡಳಿತ ಜಮೀನಿನ ಸರ್ವೇ ಕಾರ್ಯಕ್ಕೆ ಮುಂದಾಗಿದೆ.

ಬೀದರ್ನ ನೌಬಾದ್, ಕೊಳಾರ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳಿಂದ ನೆಲ, ಜಲ ಕಲುಷಿತಗೊಂಡಿದೆ. ಭಾಲ್ಕಿ ರಸ್ತೆಯಲ್ಲಿ ಅರಣ್ಯ ಇದೆ. ಅಮಲಾಪೂರ, ಚಿಟ್ಟಾ ತನಕ ಮನೆಗಳು ನಿರ್ಮಾಣಗೊಂಡಿವೆ. ಈ ಮೂರು ಭಾಗಗಳಲ್ಲಿ ಅರಣ್ಯ ಸುತ್ತುವರಿದಿರುವ ಕಾರಣ ಮನೆ ಕಟ್ಟಬೇಕೆಂದರೆ ಸದ್ಯ ಹೆಚ್ಚಿನ ಸಾಧ್ಯತೆಗಳಿಲ್ಲ. ಹೀಗಾಗಿ ಔರಾದ್ ರಸ್ತೆಯಲ್ಲಿರುವ ಚಿಕ್ಕಪೇಟೆ, ಬೆನಕನಳ್ಳಿ, ರಿಂಗ್ರೋಡ್, ಮರಕಲ್ ಹಾಗೂ ಜನವಾಡ ರಸ್ತೆಯುದ್ದಕ್ಕೂ ಭೂಮಿಗೆ ಬಂಗಾರದ ಬೆಲೆ ಬಂದಿದೆ.

ಚಿಕ್ಕಪೇಟೆಯಂತು ಗುರುದ್ವಾರ, ಔರಾದ್ ಮುಖ್ಯರಸ್ತೆ, ಮುಖ್ಯವಾಗಿ ನಗರಕ್ಕೆ ಹೊಂದಿಕೊಂಡಿದೆ. ಇದರ ಜಮೀನು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ. 30X40 ಅಡಿ ನಿವೇಶನವೊಂದಕ್ಕೆ ₹50ರಿಂದ ₹60 ಲಕ್ಷಕ್ಕೂ ಹೆಚ್ಚಿನ ಬೆಲೆ ಇದೆ. ದಿನೇ ದಿನೇ ಬೆಲೆ ಗಗನಕ್ಕೇರುತ್ತಿದೆ. ಸಹಜವಾಗಿಯೇ ಭೂಕಬಳಿಕೆದಾರರು, ಪ್ರಭಾವಿಗಳ ಕೆಂಗಣ್ಣು ಅದರ ಮೇಲೆ ಬಿದ್ದಿದೆ. ಆದರೆ, ಸರ್ಕಾರಿ ಜಾಗವನ್ನು ಜಿಲ್ಲಾಡಳಿತ ರಕ್ಷಿಸಿ, ಸಾರ್ವಜನಿಕರ ಉಪಯೋಗಕ್ಕೆ ಬಳಸಬೇಕೆನ್ನುವುದು ಜನಪರ ಸಂಘಟನೆಗಳ ಒತ್ತಾಯವಾಗಿದೆ.

ಜಿಲ್ಲಾಧಿಕಾರಿಗೆ ದೂರು

ಬೀದರ್ ಹೊರವಲಯದ ಚಿಕ್ಕಪೇಟೆ ಸರ್ವೇ ನಂಬರ್ 34ರಲ್ಲಿರುವ 26 ಎಕರೆ 8 ಗುಂಟೆ ಜಮೀನು ಕಾನೂನುಬಾಹಿರವಾಗಿ ಕಬಳಿಸಿ ಮಾರಾಟ ಮಾಡಲಾಗಿದೆ ಎಂದು ಬೀದರ್ ಬಸವನಗರದ ನಿವಾಸಿ ವೀರಕುಮಾರ್ ರಾಮಣ್ಣ ಹಳೆಂಬರ ಎಂಬುವವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಮಾಣಿಕರಾವ್ ಫುಲೇಕರ್ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಪಹಣಿ ಮಾಡಿಸಿಕೊಂಡು ಅದನ್ನು ಆಧಾರವಾಗಿಸಿಕೊಂಡು ಸದರಿ ಜಮೀನು ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್ ಅವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ಹಾಗೂ ಬೆಂಗಳೂರಿನ ಅಪೀಲೆಟ್ ಟ್ರಿಬುನಲ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಈ ಜಮೀನಿನ ರಜಿಸ್ಟರ್ ಸೇಲ್ ಡೀಡ್ ಮ್ಯುಟೇಶನ್ ಖಾತಾ ಬದಲಾವಣೆ ಮಾಡಬಾರದು. ಜಮೀನಿನಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಿಸಿ ನಿವೇಶನಗಳನ್ನು ಹಾಕಿ ಮಾರಾಟ ಮಾಡಲಾಗುತ್ತಿದೆ. ಸಂಬಂಧಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಬೋಳಾಗುತ್ತಿವೆ ಗುಡ್ಡಗಳು

ಬೀದರ್ ನಗರವು ಎತ್ತರದ ಪ್ರದೇಶದಲ್ಲಿದೆ. ಸುತ್ತಲೂ ಇಳಿಜಾರಿದ್ದು ನಗರ ಮಾತ್ರ ಎತ್ತರದ ಪ್ರದೇಶದಲ್ಲಿದೆ. ಎಷ್ಟೇ ಮಳೆ ಬಂದರೂ ನಗರ ಯಾವುದೇ ಕಾರಣಕ್ಕೂ ಮುಳುಗುವುದಿಲ್ಲ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಬೇಕಾಬಿಟ್ಟಿ ಲೇಔಟ್ಗಳನ್ನು ನಿರ್ಮಿಸಲಾಗುತ್ತಿದ್ದು ಇದಕ್ಕಾಗಿ ದೊಡ್ಡ ದೊಡ್ಡ ಗುಡ್ಡಗಳೆಲ್ಲ ಬೋಳಾಗುತ್ತಿವೆ. ಇದಕ್ಕೆ ಚಿಕ್ಕಪೇಟೆ ಕೂಡ ಹೊರತಾಗಿಲ್ಲ.ನರಸಿಂಹ ಝರಣಿ ನಾವದಗೇರಿ ಶಹಾಪುರ ಗೇಟ್ ಸಮೀಪ ಹೀಗೆ ಹಲವು ಕಡೆಗಳಲ್ಲಿ ಗುಡ್ಡಗಳೆಲ್ಲ ಕಣ್ಮರೆಯಾಗಿವೆ. ನರಸಿಂಹ ಝರಣಿ ಸಮೀಪವಂತೂ ಭಾರತೀಯ ಪುರಾತತ್ವ ಸರ್ವೇ ಇಲಾಖೆಗೆ ಸೇರಿದ ಸ್ಮಾರಕಗಳ ಸುತ್ತಲಿನ ನೆಲವೆಲ್ಲ ಸಮತಟ್ಟುಗೊಳಿಸಿ ಲೇಔಟ್ ನಿರ್ಮಿಸಲಾಗಿದೆ. ಇದರೆ ಹಿಂದೆ ಪ್ರಭಾವಿಗಳಿದ್ದಾರೆ. ಹೀಗಾಗಿಯೇ ಅವರ ಆಟಾಟೋಪಕ್ಕೆ ಕಡಿವಾಣ ಇಲ್ಲದಂತಾಗಿದೆ. ಇಳಿಜಾರಿನ ಪ್ರದೇಶದಲ್ಲಿ ಬೇಕಾಬಿಟ್ಟಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು ಸಹಜ ನೀರಿನ ಝರಿಗಳು ಭಾರಿ ಮಳೆಯಾದಾಗ ದೊಡ್ಡ ಗಂಡಾಂತರ ಸೃಷ್ಟಿಯಾಗುತ್ತದೆ ಎಂದು ಪರಿಸರಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಹೋರಾಟದ ಅಸ್ತ್ರ

ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಚಿಕ್ಕಪೇಟೆ ಸರ್ವೇ ನಂಬರ್ನಲ್ಲಿ ನಿರ್ಮಿಸುತ್ತಿರುವ ಬಡಾವಣೆಯ ವಿಷಯವನ್ನು ಹೋರಾಟದ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. ತನ್ನ ಪಕ್ಷದ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಅವರ ಮೇಲೆ ಹಲ್ಲೆ ಮಾಡಿದ ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್ ಡಾ. ಚಂದ್ರಶೇಖರ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು. ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಚಿಕ್ಕಪೇಟೆಯ ಲೇಔಟ್ ರದ್ದುಗೊಳಿಸಬೇಕೆಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ. ಇದಕ್ಕಾಗಿ ಜನವರಿ 11ರ ಗಡುವು ನೀಡಿದೆ. ಹೋದ ವರ್ಷ ವರ್ಷದ ಆರಂಭದಲ್ಲಿ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಬೀದರ್ ಎಸ್ಬಿಐ ಎಟಿಎಂ ದರೋಡೆ ಪ್ರಕರಣವನ್ನು ಬಿಜೆಪಿ ಕೈಗೆತ್ತಿಕೊಂಡು ಹೋರಾಟ ಮಾಡಿ ರಾಜ್ಯದ ಗಮನ ಸೆಳೆದಿತ್ತು. ಈಗ ಅದಕ್ಕೆ ಮತ್ತೊಂದು ಅಸ್ತ್ರ ಸಿಕ್ಕಿದೆ.

‘ನಮ್ಮಿಂದ ಕಾನೂನುಬಾಹಿರ ಕೆಲಸವಾಗಿಲ್ಲ’

‘ಚಿಕ್ಕಪೇಟೆಯ ಸರ್ವೇ ನಂಬರ್ 3031 ಮತ್ತು 34ರಲ್ಲಿರುವ ಜಮೀನು ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಶನ್ಗೆ ಸೇರಿದೆ. ನಮ್ಮದು ನೋಂದಾಯಿತ ಟ್ರಸ್ಟ್. ಫೌಂಡೇಶನ್ನಿಂದ ಯಾವುದೇ ಕಾನೂನುಬಾಹಿರ ಕೆಲಸವಾಗಿಲ್ಲ’ ಎಂದು ಫೌಂಡೇಶನ್ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್ ತಿಳಿಸಿದ್ದಾರೆ.

ಫೌಂಡೇಶನ್ ಟ್ರಸ್ಟ್ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಸದರಿ ಜಮೀನಿನಲ್ಲಿ ಲೇಔಟ್ ಅಭಿವೃದ್ಧಿಪಡಿಸಲು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿಯಮಗಳಿಗೆ ಅನುಗುಣವಾಗಿ ಅನುಮೋದನೆ ಪಡೆಯಲಾಗಿದೆ. ಸದರಿ ಜಮೀನಿನ ಮಾರಾಟ ಲೀಸ್ ಅಡಮಾನ ಕೊಡುವ ಸಂಪೂರ್ಣ ಹಕ್ಕು ಹೊಂದಿದೆ. ಜೊತೆಗೆ ಶೈಕ್ಷಣಿಕ ಮತ್ತು ಸಮಾಜದ ಶ್ರೇಯೋಭಿವೃದ್ಧಿಯನ್ನು ಪ್ರೋತ್ಸಾಹಿಸುವಂತಹ ಕೆಲಸ ಮಾಡಬಹುದಾಗಿದೆ. ಹಾಗಾಗಿ ಸಾರ್ವಜನಿಕ ವಲಯದಲ್ಲಿ ಸದರಿ ಜಮೀನು ಹಾಗೂ ಟ್ರಸ್ಟ್ ಬಗ್ಗೆ ಇಲ್ಲಸಲ್ಲದ ವದಂತಿ ಹಬ್ಬಿಸುವ ಪ್ರಯತ್ನ ಯಾರು ಕೂಡ ಮಾಡಬಾರದು’ ಎಂದು ತಿಳಿಸಿದ್ದಾರೆ.

ಚಿಕ್ಕಪೇಟೆ ಜಮೀನಿನ ಸರ್ವೇ

ಚಿಕ್ಕಪೇಟೆಯ ಜಮೀನಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಈ ಬಗ್ಗೆ ಈಗಾಗಲೇ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜೆಡಿಎಲ್ಆರ್ಗೆ ಹೋಗಿದೆ. ಅವರು ಸರ್ವೇ ಮಾಡಿ ನಮಗೆ ವರದಿ ಸಲ್ಲಿಸುತ್ತಾರೆ. ಅದನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಶಿಲ್ಪಾ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.