ಸೋಮವಾರ, ಸೆಪ್ಟೆಂಬರ್ 20, 2021
23 °C
ಹಿಪ್ಪಳಗಾಂವ್‌: ಬಟ್ಟೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಸಂತೋಷ ಪಾಟೀಲ, ಕಷ್ಟ ಕಾಲದಲ್ಲಿ ಕೈ ಹಿಡಿದ ಕೃಷಿ

ಬೀದರ್: ಬರಡು ಭೂಮಿಗೆ ‘ಉದ್ಯೋಗ ಖಾತರಿ’ ಕಾಯಕಲ್ಪ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ತಾಲ್ಲೂಕಿನ ಹಿಪ್ಪಳಗಾಂವ್ ಗ್ರಾಮದ ರೈತ ಸಂತೋಷ ಪಾಟೀಲ ಅವರ ಬರಡು ಭೂಮಿಗೆ ಕಾಯಕಲ್ಪ ನೀಡಿದೆ. ಈಗ ಆ ಭೂಮಿ ಫಲವತ್ತಾಗಿದೆ. ಅವರು ಕಳೆದ ವರ್ಷ ₹2.5 ಲಕ್ಷ ನುಗ್ಗೆಕಾಯಿ, ₹50 ಸಾವಿರ ಮೌಲ್ಯದ ನುಗ್ಗೆ ಬೀಜ ಮಾರಾಟ ಮಾಡಿದ್ದಾರೆ.

ಸಂತೋಷ ಪಾಟೀಲ ಅವರು ಈ ಮೊದಲು ಬಟ್ಟೆ ವ್ಯಾಪಾರ ಮಾಡಿ ನಷ್ಟ ಅನುಭ
ವಿಸಿದ್ದರು. ಬಳಿಕ ಅರಣ್ಯ ಇಲಾಖೆ ಸಹಕಾರದಿಂದ ಐದು ಎಕರೆ ಜಮೀನಿನಲ್ಲಿನ ಕಲ್ಲು, ಮುಳ್ಳು ತೆಗೆದು ಭೂಮಿಯನ್ನು ಹದ ಮಾಡಿದರು. ಇದರಲ್ಲಿ ನುಗ್ಗೆ, ಮಾವು, ನಿಂಬೆ ಹಾಗೂ ಸೀತಾಫಲ ಸೇರಿ ಒಟ್ಟು ಎರಡು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ.

ಹೊಲದ ಪಕ್ಕದಲ್ಲಿ ಹರಿದು ಹೋದ ಹಳ್ಳದ ಬಳಿ ಕೊಳವೆಬಾವಿ ಕೊರೆದು ಅದರ ನೀರು ಬಳಕೆ ಮಾಡಿಕೊಂಡಿದ್ದಾರೆ. ಹಣ ಖರ್ಚು ಮಾಡಿ ಇಡೀ ಐದು ಎಕರೆ ಹೊಲವನ್ನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದ್ದಾರೆ.

ಎರಡು ವರ್ಷದ ಕಷ್ಟದ ಫಲವಾಗಿ ₹3 ಲಕ್ಷ ಆದಾಯ ಬಂದಿದೆ. ಮುಂದಿನ ವರ್ಷದಿಂದ ನಿಂಬೆ ಮತ್ತು ಸೀತಾಫಲ ಇಳುವರಿಯಿಂದ ಉತ್ತಮ ಆದಾಯ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅವರು.

‘ವ್ಯಾಪಾರ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಖುಷಿ ಕೊಟ್ಟಿದೆ. ಸಾಮಾಜಿಕ ಅರಣ್ಯ ವಿಭಾಗದವರು ಎರಡು ಸಾವಿರ ಸಸಿ ನೆಟ್ಟಿದ್ದಾರೆ. ಆ ಸಸಿಗಳೇ ನನಗೆ ಈಗ ಹಣ ಕೊಡುವ ಕಾಮಧೇನುಗಳಾಗಿವೆ’ ಎಂದು ರೈತ ಸಂತೋಷ ಪಾಟೀಲ
ಹೇಳುತ್ತಾರೆ.

‘ರೈತ ಸಂತೋಷ ಪಾಟೀಲ ನರೇಗಾ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಏನೂ ಬೆಳೆಯದ ಬರಡು ಭೂಮಿಯಲ್ಲಿ ಕೈತುಂಬ ಹಣ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ತಮ್ಮ ಇತರೆ ಆರು ಎಕರೆ ಜಮೀನಿನಲ್ಲಿ ₹10 ಲಕ್ಷ ಮೌಲ್ಯದ ಪಪ್ಪಾಯಿ, ಕಲ್ಲಂಗಡಿ ಮಾರಾಟ ಬೆಳೆದು ಯಶಸ್ವಿ ರೈತರು ಎನಿಸಿಕೊಂಡಿದ್ದಾರೆ’ ಎಂದು ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ ರಾಮಪುರೆ ತಿಳಿಸಿದ್ದಾರೆ.

‘ನರೇಗಾ ಯೋಜನೆ ರೈತರಿಗೆ ಅನುಕೂಲಕರ. ಬರಡು ಭೂಮಿ ಇದ್ದ ರೈತರು ಶ್ರೀಗಂಧ, ಹೆಬ್ಬೇವು, ಮಾವು, ಸೀತಾಫಲ, ನಿಂಬೆ ಮತ್ತಿತರೆ ಗಿಡಗಳನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು’ ಎಂದು ವಲಯ ಅರಣ್ಯಾಧಿಕಾರಿ ವೀರೇಶ ಕಲ್ಯಾಣಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು