ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಪ್ಲಾಸ್ಟಿಕ್‌ ಬಾಟಲಿ ಮರು ಬಳಸಿ ದೀಪಕ ದಿಲ್ಲೆ ಸಾಧನೆ

ಶೀಟ್, ಪೀಠೋಪಕರಣ, ಇಟ್ಟಿಗೆ ನಿರ್ಮಾಣ
Last Updated 22 ಜೂನ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್‌ ಬಾಟಲಿಗಳನ್ನು ಮರು ಬಳಕೆ ಮಾಡಿ ನೂರು ವರ್ಷ ಬಳಕೆ ಮಾಡುವಂತಹ ವಾಣಿಜ್ಯ ಹಾಗೂ ಗೃಹೋಪಯೋಗಿ ಸಾಮಗ್ರಿಗಳನ್ನು ತಯಾರಿಸಿ ಬೀದರ್‌ ಮೂಲದ ಎಂಜಿನಿಯರ್‌ ದೀಪಕ ದಿಲ್ಲೆ ಪ್ಲಾಸ್ಟಿಕ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೊಸದೊಂದು ಸಾಧನೆ ಮಾಡಿದ್ದಾರೆ.

ಪೀಠೋಪಕರಣಕ್ಕೆ ಬಳಸುವ ಪ್ಲೈವುಡ್‌ ಗರಿಷ್ಠ 5ರಿಂದ 8 ವರ್ಷಗಳ ವರೆಗೆ ಮಾತ್ರ ಸುಸ್ಥಿತಿಯಲ್ಲಿರುತ್ತವೆ. ನಂತರ ವಾತಾವರಣಕ್ಕೆ ಹೊಂದಿಕೊಳ್ಳದೇ ಹಾಳಾಗುತ್ತವೆ. ಹೀಗಾಗಿ ಮತ್ತೆ ಒಂದಿಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಹೊಸ ತಂತ್ರಜ್ಞಾನದ ಪ್ಲಾಸ್ಟಿಕ್‌ ಬಳಕೆ ಮಾಡಿದರೆ ವ್ಯಕ್ತಿ ತಾನು ಬದುಕಿರುವವರೆಗೂ ಅದನ್ನು ಬಳಸಬಹುದಾಗಿದೆ ಎನ್ನುವುದನ್ನು ನಿರೂಪಿಸಿ ರೂಫ್‌ಶೀಟ್, ಪೀಠೋಪಕರಣ, ಮಂಚ, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಇಟ್ಟಿಗೆಯನ್ನೂ ತಯಾರಿಸುತ್ತಿದ್ದಾರೆ.

‘ಪ್ಲಾಸ್ಟಿಕ್ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ನಂತರ ಪ್ರತಿಷ್ಠಿತ ಕಂಪನಿಗಳಲ್ಲಿ ಅವಕಾಶಗಳು ದೊರಕಿದ್ದವು. ಆದರೆ, ಈ ಕ್ಷೇತ್ರದಲ್ಲಿ ಏನಾದರೂ ಹೊಸದು ಮಾಡಬೇಕು ಎಂದು ನಿರ್ಧರಿಸಿ ವಿದ್ಯಾನಗರದ 20X30 ಚದರ ಅಡಿ ಜಾಗದಲ್ಲಿ ಚಿಕ್ಕದೊಂದು ಘಟಕ ಆರಂಭಿಸಿ ಪ್ರಯೋಗ ಮಾಡಿದೆ. ಅದು ಫಲ ನೀಡಿದೆ’ ಎಂದು ಎಂಜಿನಿಯರ್ ದೀಪಕ ದಿಲ್ಲೆ ಹೇಳುತ್ತಾರೆ.

‘ಮರುಬಳಕೆಯ ಸಾಮಗ್ರಿಗಳು ದೇಶದ ಎಲ್ಲೆಡೆ ಉತ್ಪಾದನೆಯಾಗುತ್ತಿವೆ. ಆದರೆ, ನಾನು ಉತ್ಪಾದಿಸುವ ಪ್ಲಾಸ್ಟಿಕ್ ಸರಕುಗಳು ನೂರು ವರ್ಷ ಸುಸ್ಥಿತಿಯಲ್ಲಿರುತ್ತವೆ ಎನ್ನುವುದು ವಿಶೇಷ. ನಾನು ಸಂಶೋಧನೆ ನಡೆಸಿ ಬಳಸಿದ ತಂತ್ರಜ್ಞಾನ ಬೇರೆಲ್ಲೂ ಬಳಸಿದ ಬಗ್ಗೆ ಮಾಹಿತಿ ಇಲ್ಲ. ದಾಖಲೆಗಳೂ ದೊರಕಿಲ್ಲ. ಹೀಗಾಗಿ ಅಧಿಕೃತ ಹಕ್ಕುಸ್ವಾಮ್ಯ ಪಡೆಯಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸಿದ್ದೇನೆ. ಶೀಘ್ರ ಪೇಟೆಂಟ್‌ ಸಿಗುವ ವಿಶ್ವಾಸವಿದೆ’ ಎಂದು ವಿವರಿಸುತ್ತಾರೆ.

‘ಪ್ರಸ್ತುತ ನಾಲ್ಕು ವರ್ಣಗಳಲ್ಲಿ 4x8 ಚದರ ಅಡಿಯ ಶೀಟ್‌, ಹೆಂಚಿನ ಹೊದಿಕೆ, ಟೈಲ್ಸ್‌ ಹಾಗೂ ಪ್ಲಾಸ್ಟಿಕ್‌ ಇಟ್ಟಿಗೆ ತಯಾರು ಮಾಡಿದ್ದೇನೆ. ಮೆಟಲ್‌, ಸಿಮೆಂಟ್ ಹಾಗೂ ಪ್ಲೈವುಡ್‌ಗೆ ಹೋಲಿಸಿದರೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ಸಾಮಗ್ರಿಗಳ ಉತ್ಪಾದನಾ ವೆಚ್ಚ ಕಡಿಮೆ ಇರುತ್ತದೆ. ಬಾಳಿಕೆ ಅಧಿಕವಾಗಿರುತ್ತದೆ. ಇದನ್ನು ಮನಗಂಡು ಕೆಲ ಕಂಪನಿಗಳು ನನ್ನೊಂದಿಗೆ ವ್ಯವಹಾರ ನಡೆಸಲು ಉತ್ಸಾಹ ತೋರಿಸಿವೆ’ ಎಂದು ಹೇಳುತ್ತಾರೆ.

ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಕೇಂದ್ರ ಸರ್ಕಾರದಿಂದ ಸ್ಟಾರ್ಟ್‌ ಆ್ಯಪ್‌ ಯೋಜನೆಯಲ್ಲಿ ₹ 30 ಲಕ್ಷ ಮೊತ್ತದ ಯಂತ್ರೋಪಕರಣಗಳನ್ನು ಕೊಡಿಸುವಲ್ಲಿ ನೆರವಾಗಿದ್ದಾರೆ. ಸದ್ಯ ಜಾಗದ ಕೊರತೆ ಇದೆ. ನಗರದಲ್ಲಿ ಮೂರು ಎಕರೆ ಜಾಗ ದೊರಕಿದರೆ ರಾಜ್ಯದ ಜನತೆ ಗಮನ ಸೆಳೆಯುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT