ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಪಶು ವೈದ್ಯಕೀಯ ವಿ.ವಿ. 13ನೇ ಘಟಿಕೋತ್ಸವ ನಾಳೆ

ರಾಜ್ಯಪಾಲರಿಂದ 128 ಚಿನ್ನದ ಪದಕ, 837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Published 15 ಅಕ್ಟೋಬರ್ 2023, 10:40 IST
Last Updated 15 ಅಕ್ಟೋಬರ್ 2023, 10:40 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿನ ಹೊರವಲಯ ನಂದಿನಗರದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸೋಮವಾರ (ಅ.16) ನಡೆಯಲಿದ್ದು, ಭಾನುವಾರ ಅಂತಿಮ ಹಂತದ ಸಿದ್ಧತೆಗಳು ನಡೆದವು.

ಕಾರ್ಯಕ್ರಮ ನಡೆಯಲಿರುವ ಸಭಾಂಗಣ, ಮೆರವಣಿಗೆ ಹಾದು ಹೋಗುವ ಪರಿಸರದಲ್ಲಿ ಶಾಮಿಯಾನ ಹಾಕಿ, ವೇದಿಕೆ ಅಲಂಕರಿಸುವ ಕೊನೆಯ ಕ್ಷಣದ ಸಿದ್ಧತೆಗಳು ಭರದಿಂದ ನಡೆದವು.

ಸೋಮವಾರ ಬೆಳಿಗ್ಗೆ 11ಕ್ಕೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಘಟಿಕೋತ್ಸವ ಜರುಗಲಿದ್ದು, ರಾಜ್ಯಪಾಲ ಥಾವರಚಂದ ಗೆಹಲೋತ್‌ ಅವರು ಒಟ್ಟು 128 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡುವರು. 2021–21, 2021–22ನೇ ಸಾಲಿನ ಒಟ್ಟು 70 ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್‌ ಪದವಿಧರರಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸುವರು. 61 ವಿಶ್ವವಿದ್ಯಾಲಯದ ಪದಕಗಳು, 67 ಪ್ರಾಯೋಜಿತ ಚಿನ್ನದ ಪದಕಗಳು ಸೇರಿವೆ ಎಂದು ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಒಟ್ಟು 837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 445 ಸ್ನಾತ, 333 ಸ್ನಾತಕೋತ್ತರ, 59 ಡಾಕ್ಟರೇಟ್‌ ಪದವಿಧರರು ಸೇರಿದ್ದಾರೆ. ಒಟ್ಟು 262 ಪದವಿಧರರು ಖುದ್ದು ಹಾಜರಾಗಿ ಪದವಿ ಸ್ವೀಕರಿಸುವರು. ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ.ಆರ್‌.ಸಿ. ಅಗರವಾಲ್‌ ಘಟಿಕೋತ್ಸವ ಭಾಷಣ ಮಾಡುವರು. ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್‌ ಅವರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಕುಲಸಚಿವ ಶಿವಶಂಕರ ಎಸ್‌., ಸಂಶೋಧನಾ ನಿರ್ದೇಶಕ ಡಾ. ಬಿ.ವಿ ಶಿವಪ್ರಕಾಶ, ವಿಸ್ತರ್ಣಾ ನಿರ್ದೇಶಕ ಡಾ.ಎನ್.ಎ ಪಾಟೀಲ ಇತರರು ಹಾಜರಿದ್ದರು.

ಚಿನ್ನದ ಪದಕ ಯಾರಿಗೆ?

2021–22ನೇ ಸಾಲಿನ ಬಿವಿಎಸ್ಸಿ ಮತ್ತು ಎಎಚ್‌ ಸ್ನಾತಕ ಪದವಿಯಲ್ಲಿ ಗದಗ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ರಾಘವೇಶ ಎ.ಎನ್‌. 16 ಚಿನ್ನದ ಪದಕ ಸ್ವೀಕರಿಸುವರು. ಬೀದರ್‌ ಪಶು ವೈದ್ಯಕೀಯ ಕಾಲೇಜಿನ ಸಚಿನ್‌ ಹುದ್ದಾರ್‌ 5, ಬೆಂಗಳೂರು ಕಾಲೇಜಿನ ವಸುಧಾ ಎ.ಎನ್‌ 4, ಶಿವಮೊಗ್ಗ ಕಾಲೇಜಿನ ನೈದಿಲೆ ಕೆ.ಆರ್‌. 3, ಮಮತಾ ಬಿ.ಎಸ್‌. 2, ಹಾಸನ ಕಾಲೇಜಿನ ಸದುಮ್‌ ಕವಿತಾ, ಗದುಗಿನ ದಾನೇಶ್ವರ ಇತ್ನಾಳ್‌, ನಂದನಾ ಜಿ.ಎಸ್‌. ತಲಾ 1 ಚಿನ್ನದ ಪದಕ ಸ್ವೀಕರಿಸುವರು ಎಂದು ಕುಲಪತಿ ಪ್ರೊ.ಕೆ.ಸಿ. ವೀರಣ್ಣ ತಿಳಿಸಿದರು.

ಬಿ.ಟೆಕ್‌. (ಹೈನು ತಂತ್ರಜ್ಞಾನ)ನಲ್ಲಿ ಬೆಂಗಳೂರಿನ ಸುರೇಶಬಾಬು ಸಿ.ಎಸ್‌. 4, ಸೌಂದರ್ಯ ಕೃಷ್ಣ ಡಿ.ಎಸ್‌. ಹಾಗೂ ಕಲಬುರಗಿ ಕಾಲೇಜಿನ ಹರ್ಷಿತಾ ಪಿ.ಆರ್‌. 1 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿಎಫ್‌ಎಸ್ಸಿಯಲ್ಲಿ ಮಂಗಳೂರಿನ ಮೀನುಗಾರಿಕೆ ಕಾಲೇಜಿನ ಹೇಮಶ್ರೀ ಗೌಡ 3 ಚಿನ್ನದ ಪದಕಗಳನ್ನು ಸ್ವೀಕರಿಸುವರು. 2019–20ನೇ ಸಾಲಿನ ಸಮಗ್ರ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಬೀದರ್‌ ಕಾಲೇಜಿನ ಅಝೀಫಾ ಮುಜಾವರ್‌ ಒಂದು ಚಿನ್ನದ ಪದಕ ಗಳಿಸಿದ್ದಾರೆ. 2021–22ನೇ ಸಾಲಿನ ಕ್ರೀಡಾ ಚಟುವಟಿಕೆಯಲ್ಲಿ ಶಿವಮೊಗ್ಗ ವಿ. ಹರೀಶ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಬೆಂಗಳೂರಿನ ಅನುಷಾ ಎ. ತಲಾ ಒಂದು ಚಿನ್ನದ ಪದಕ ಸ್ವೀಕರಿಸುವರು ಎಂದರು.

ಸ್ನಾತಕೋತ್ತರ ಪದವಿ:

2020–21ನೇ ಸಾಲಿನ ಎಂವಿಎಸ್ಸಿಯಲ್ಲಿ ಬೆಂಗಳೂರು ಕಾಲೇಜಿನ ಅನೀತಾ ಶ್ರೀರಾಮ ಸಿ.ಆರ್‌. 4 ಚಿನ್ನದ ಪದಕ, ಶ್ರಾವ್ಯ ಬಿ.ಎಲ್‌. 2, ಸಿಂಧೂರಾ ದಿವಾಕರ್‌, ಪಿ. ಶ್ರವಣಿ, ಭರತ್‌ ಆರ್‌., ಅನೀತಾ ಎಂ. 1, ಓಜಸ್‌ ಶ್ರೀನಿವಾಸ 3, ಸೋಮಶೇಖರ ಭೀಮನಗೌಡ 2, ಶ್ರೀಧರ, ರವಿಕಾಂತ, ಪಂಡಿತ ತಲಾ 1, ಶಿವಮೊಗ್ಗದ ಆರೂರು ಕೀರ್ತನ 3, ವೀಣಕುಮಾರಿ ಎ.ಎನ್‌ 2, ದೊಡ್ಡಬಸವನಗೌಡ ಕೆ. 2, ನಿಶ್ಮಾ ಎಂ.ಎನ್‌, ಹಾಸನದ ಸಂತೋಷ ಜಿ.ಆರ್‌. ತಲಾ 1 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಎಂ.ಟೆಕ್‌ ಹೈನು ವಿಜ್ಞಾನದಲ್ಲಿ ಬೆಂಗಳೂರಿನ ಹರ್ಷಿತ ಆರ್‌, ಬೈಂದ್ಲಾ ಭಾರ್ಗವಿ ತಲಾ 1, ಎಂಬಿಎ ಹೈನು ಅರ್ಥಶಾಸ್ತ್ರ ಮತ್ತು ವಹಿವಾಟು ನಿರ್ವಹಣೆಯಲ್ಲಿ ಬೆಂಗಳೂರಿನ ಪ್ರತಿಭಾ ಶೆಟ್ಟಿ 1, ಎಂಎಫ್‌ಎಸ್ಸಿಯಲ್ಲಿ ಮಂಗಳೂರಿನ ನಿಧಿ, ಪವನಕುಮಾರ್‌ ತಲಾ 2 ಚಿನ್ನದ ಪದಕ ಮುಡಿಗೇರಿಸಿಕೊಳ್ಳುವರು ಎಂದರು.

2021–22ನೇ ಸಾಲಿನಲ್ಲಿ ಎಂವಿಎಸ್ಸಿಯಲ್ಲಿ ಬೆಂಗಳೂರಿನ ಶಾಮಲಾ ಬಿ.ಆರ್‌. 5, ಆರ್ಯ ಆರ್‌.ಎಸ್‌ 2, ಅದ್ದುಲಾ ನೆಹಾ, ಮುರಳ ಮುರಳಿ ಮನೋಹರ ಸೂರ್ಯತೇಜ, ವಿಜಯಲಕ್ಷ್ಮಿ ಮುಂದಿನಮನಿ, ಆಯಿಶಾ ಅಫ್ಶಿನ್‌ ಅಬ್ದುಲ್‌ ಶಕೀಲ್‌, ಬೀದರ್‌ನ ಶಿಲ್ಪಾ ಎಂ.ಎಸ್‌. ತಲಾ 1, ಪೂಜಾ ಎಚ್‌.ಎಸ್‌. 3, ಅಭಿಷೇಕ ವಡಿಗೇರಿ 2, ರಮ್ಯಾ ಎನ್‌.ಎಂ. 1, ಶಿವಮೊಗ್ಗದ ನಿರಂಜನ ಡಿ. 3, ಯೋಗಾನಂದ ಕೆ.ಸಿ. 3, ಸುರೇಶ ಸಜ್ಜನ, ಬಿಂದುಶ್ರೀ, ಜಯಂತಿ ಕೆ.ವಿ. ತಲಾ ಒಂದು ಚಿನ್ನದ ಪದಕ, ಎಂಟೆಕ್‌ ಹೈನು ವಿಜ್ಞಾನದಲ್ಲಿ ಬೆಂಗಳೂರಿನ ಅನುಶ್ರೀ ವೈ.ಕೆ, ಜಯಂತ ಕೆ.ಜೆ ತಲಾ 1, ಎಂಎಫ್‌ಎಸ್ಸಿಯಲ್ಲಿ ಮಂಗಳೂರಿನ ನಮೃತ ಎಂ.ಆರ್. 3, ದರ್ಶನ್‌ ಕೆ.ಎಸ್‌ 1 ಚಿನ್ನದ ಪದಕ ಸ್ವೀಕರಿಸುವರು ಎಂದು ತಿಳಿಸಿದರು.

ಡಾಕ್ಟರೇಟ್‌ ಪದವಿ

2020–21ನೇ ಸಾಲಿನ ಡಾಕ್ಟರೇಟ್‌ ಪದವಿಯಲ್ಲಿ ಬೆಂಗಳೂರಿನ ಎಂ.ಆನಂದಿ 2, ಶಿವಪ್ರಸಾದ್‌ ಜಿ.ಆರ್‌, ಬಿ. ಸಂಪತಕುಮಾರ್‌, ಕವಿತಾ ಜೆ., ಬೀದರ್‌ನ ರವೀಂದ್ರ ಡೊಂಬರ್‌, ಮಂಗಳೂರಿನ ಶ್ರೀನಿವಾಸ ಹುಲಕೋಟಿ ತಲಾ 1 ಚಿನ್ನದ ಪದಕ ಸ್ವೀಕರಿಸುವರು. 2021–22ನೇ ಸಾಲಿನಲ್ಲಿ ಬೆಂಗಳೂರಿನ ಪ್ರಶಾಂತಕುಮಾರ ಕೆ.ಎಸ್‌, ಮಾನಸಾ ವರ್ರಾ, ಹ್ರಿದ್ಯಾ ಸುಸನ್‌ ವರ್ಗಿಸ್‌, ರೂಪಾದೇವಿ ವೈ.ಎಸ್‌, ಬೀದರ್‌ನ ಅಜ್ಜಣಗಿ ಭೀಮಪ್ಪ, ಬೆಂಗಳೂರಿನ ಅಮ್ಮಿತಿ ಮುರಳಿ ಕೃಷ್ಣ, ಮಂಗಳೂರಿನ ಪಿ. ರಾಜಶೇಖರ, ಮಂಜುನಾಥ ಎನ್‌., ಕಲಾರಿಯ ಕಿಶನ್‌ ಕಿಶೋರಚಂದ್ರ ತಲಾ ಒಂದು ಚಿನ್ನದ ಪದಕಕ್ಕೆ ಭಾಜನರಾಗುವರು ಎಂದು ಕುಲಪತಿ ತಿಳಿಸಿದರು.

ನಾಲ್ಕು ರಾಜ್ಯಗಳಿಗೆ ಲಸಿಕೆ

‘ಜಾನುವಾರುಗಳು ಮತ್ತು ಕೋಳಿಗಳನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಬೆಂಗಳೂರಿನ ಹೆಬ್ಬಾಳದಲ್ಲಿನ ಐಎಎಸ್‌ ಅಂಡ್‌ ವಿಬಿ ಸಂಸ್ಥೆ ಲಸಿಕೆ ತಯಾರಿಕೆ ಮತ್ತು ರೋಗ ನಿರ್ಣಯಕ್ಕಾಗಿ ಜಿಎಲ್‌ಪಿ ಪ್ರಮಾಣ ಪತ್ರ ಪಡೆದುಕೊಂಡಿದೆ. ಅಲ್ಲಿಂದ ನಾಲ್ಕು ರಾಜ್ಯಗಳಿಗೆ ಲಸಿಕೆ ಪೂರೈಸಲಾಗುತ್ತಿದೆ’ ಎಂದು ಕುಲಪತಿ ಪ್ರೊ.ಕೆ.ಸಿ. ವೀರಣ್ಣ ತಿಳಿಸಿದರು. ‘ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿ ರೇಬೀಸ್‌ ನ್ಯೂಕ್ಲಿಯೊಪ್ರೋಟೀನ್‌ ‘ಜೀನ್‌ ಕ್ಲೋನ್‌’ ಮಾಡಿ ಅದನ್ನು ಬಳಸಲು ಸಿದ್ಧರಾಗಿದ್ದೆವೆ. ‘ಶೂನ್ಯ ರೇಬೀಸ್‌’’ ಸಾಧಿಸುವ ಗುರಿಯಿಂದ ಬೀದಿ ನಾಯಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳಲ್ಲಿ ರೇಬೀಸ್‌ ಎದುರಿಸಲು ಸ್ಥಳೀಯ ‘ವೈರಲ್‌ ವೆಕ್ಟರ್‌’ ಆಧಾರಿತ ಬಾಯಿಯ ಮೂಲಕ ಲಸಿಕೆ ಅಭಿವೃದ್ಧಿಪಡಿಸುವ ಕೆಲಸ ಪ್ರಗತಿಯಲ್ಲಿದೆ’ ಎಂದು ಹೇಳಿದರು. ಬಾಹ್ಯ ಮೂಲಗಳಿಂದ ಧನಸಹಾಯ ಪಡೆದ ಒಟ್ಟು 45 ಸಂಶೋಧನೆಗಳು 2022–23ರಲ್ಲಿ ಪೂರ್ಣಗೊಂಡಿವೆ. 72 ಯೋಜನೆಗಳು ಪ್ರಗತಿಯಲ್ಲಿವೆ. 2022–23ನೇ ಸಾಲಿನಲ್ಲಿ ವಿವಿಧ ರೀತಿಯ ಸಂಶೋಧನೆಗಾಗಿ ನಮ್ಮ ವಿಜ್ಞಾನಿಗಳು 129 ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

‘ಮುಧೋಳ ತಳಿ ದೇಶಿ ತಳಿ’

‘ಮುಧೋಳ ತಳಿಯ ನಾಯಿ ದೇಶಿ ತಳಿ ಎಂದು ‘ನ್ಯಾಷನಲ್‌ ಬ್ಯೂರೊ ಆಫ್‌ ಜಿನೆಟಿಕ್‌ ರಿಸರ್ಚ್‌’ ಮಾನ್ಯ ಮಾಡಿದೆ. ಈ ತಳಿ ಸಂರಕ್ಷಿಸುವ ಕೆಲಸ ನಡೆದಿದೆ. ಇದರಿಂದಾಗಿ ಈ ತಳಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ ಕೂಡ ಬಂದಿದೆ’ ಎಂದು ಕುಲಪತಿ ಪ್ರೊ.ಕೆ.ಸಿ.ವೀರಣ್ಣ ತಿಳಿಸಿದರು.

‘ವಿಶ್ವವಿದ್ಯಾಲಯಕ್ಕೆ ಒಟ್ಟು 852 ಹುದ್ದೆಗಳು ಸರ್ಕಾರದಿಂದ ಮಂಜೂರಾಗಿವೆ. ಅದರಲ್ಲಿ 254 ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ. ಇತ್ತೀಚೆಗೆ 166 ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿತ್ತು. ಅದರಲ್ಲಿ 89 ಹುದ್ದೆಗಳನ್ನು ತುಂಬಲಾಗಿದೆ. ರೋಸ್ಟರ್‌ ಸೇರಿದಂತೆ ಇತರೆ ಕಾರಣಗಳಿಂದ ಅಷ್ಟೂ ಹುದ್ದೆಗಳು ತುಂಬಿಲ್ಲ. 500 ಬೋಧಕ ಹುದ್ದೆಗಳು ಖಾಲಿ ಇವೆ’ ಎಂದು ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಮಾಹಿತಿ ನೀಡಿದರು.

117 ಬೋಧಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ವಿಶ್ವವಿದ್ಯಾಲಯದಲ್ಲಿ 14 ಅಧಿಕಾರಿಗಳ ಹುದ್ದೆ ಭರ್ತಿಗೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. 2648 ಒಟ್ಟು ಬೋಧಕೇತರ ಮಂಜೂರಾದ ಹುದ್ದೆಗಳು. 586 ಜನ ರೆಗ್ಯುಲರ್‌, 553 ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರು ಇದ್ದಾರೆ. ಹುದ್ದೆಗಳು ಖಾಲಿ ಇರುವುದರಿಂದ ಹಾಲಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಜಾಸ್ತಿಯಾಗಿದೆ. ಸರ್ಕಾರಕ್ಕೆ ಹುದ್ದೆ ಭರ್ತಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT