ಶನಿವಾರ, ಜುಲೈ 24, 2021
22 °C
ದಿನಸಿ ಅಂಗಡಿಗಳಿಗೆ ಯಾವುದೇ ರೀತಿಯ ನಿರ್ಬಂಧ ಇಲ್ಲ

ಬೀದರ್‌, ಯಾದಗಿರಿ ಜಿಲ್ಲೆ 8 ದಿನ ಲಾಕ್‌ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ವಲಸೆ ಕಾರ್ಮಿಕರಿಂದಾಗಿ ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚಿದ ಕಾರಣ ಸೋಂಕು ಸಮುದಾಯದಲ್ಲಿ ವ್ಯಾಪಿಸದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಜಿಲ್ಲೆಗಳಲ್ಲಿ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆಯ ವರೆಗೆ ಲಾಕ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಲಹೆಯಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ಸಲಹೆ ಪಡೆದು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಎರಡೂ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ ಎಂದು ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವ ಪ್ರಭು ಚವಾಣ್‌ ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಆಸ್ಪತ್ರೆ, ಮೆಡಿಕಲ್, ಪ್ರಯೋಗಾಲಯ, ಬ್ಲಡ್‌ ಬ್ಯಾಂಕ್, ಕಿರಾಣಿ, ಹಣ್ಣು, ತರಕಾರಿ ಅಂಗಡಿ, ಕುಡಿಯುವ ನೀರಿನ ಅಂಗಡಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಇರುವುದಿಲ್ಲ. ಉಳಿದ ಯಾವುದೇ ಯಾವುದೇ ರೀತಿಯ ಅಂಗಡಿಗಳು ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮದ್ಯದ ಅಂಗಡಿಗಳು, ಪಾನಬೀಡಾ ಅಂಗಡಿಗಳು, ತಂಪು ಪಾನೀಯ, ಬೇಕರಿ, ಮಾಲ್‌, ಚಿತ್ರಮಂದಿರ ಎಂಟು ದಿನಗಳ ವರೆಗೆ ಬಂದ್‌ ಇರಲಿವೆ. ಹೋಟೆಲ್‌ ಹಾಗೂ ಖಾನಾವಳಿಗಳಿಂದ ಪಾರ್ಸಲ್‌ ಪಡೆಯಲು ಅವಕಾಶ ಇದೆ. ಅಂತರ ಜಿಲ್ಲಾ ಸಂಚಾರಕ್ಕೆ ನಿರ್ಬಂಧ ಇಲ್ಲ. ಆದರೆ, ಅಂತರ ರಾಜ್ಯ ಸಂಚಾರಕ್ಕೆ ಅವಕಾಶ ಇಲ್ಲ. ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಕಾರ್ಯಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

ಅಂತರ ತಾಲ್ಲೂಕುಗಳಲ್ಲಿ ಬಸ್‌ ಸಂಚಾರ ಕಡಿಮೆ ಇರಲಿದೆ. ತುರ್ತು ಸಂದರ್ಭಗಳಲ್ಲಿ ಆಟೊರಿಕ್ಷಾ ಬಳಸಬಹುದಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ ಇದ್ದರು.

ಏನು ತೆರೆದಿರುತ್ತವೆ

ಜಿಲ್ಲೆಯಾದ್ಯಂತ ದಿನಸಿ, ತರಕಾರಿ, ಹಾಲು, ಹಣ್ಣು ಹಂಪಲುಗಳು, ಪೆಟ್ರೋಲ್ ಬಂಕ್‍ಗಳು ಹಾಗೂ ಅತ್ಯವಶ್ಯಕ ಅಂಗಡಿಗಳು ತೆರೆದಿರುತ್ತವೆ. ರಸಗೊಬ್ಬರ, ಕೀಟನಾಶಕ, ಬೀಜಗಳ ಉತ್ಪಾದನೆ, ವಿತರಣೆ, ಯಂತ್ರೋಪಕರಣಗಳ ಬಿಡಿಭಾಗಗಳ ಪೂರೈಕೆ, ರಿಪೇರಿ ಸೇರಿದಂತೆ ಅವಶ್ಯಕವಿರುವ ಅಂಗಡಿಗಳು ತೆರೆದಿರುತ್ತವೆ.

ಬ್ಯಾಂಕ್‌, ಅಂಚೆ ಕಚೇರಿಗಳು, ಬಿಎಸ್‌ಎನ್‌ಎಲ್‌ ಕಚೇರಿ, ಸರ್ಕಾರಿ ಕಚೇರಿಗಳು ಹಾಗೂ ಇನ್ನಿತರೆ ಅಗತ್ಯ ಸೇವೆಗಳು ಇರುತ್ತವೆ. ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು ಇತ್ಯಾದಿ ತುರ್ತು ಸೇವೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

ಸರಕುಗಳ ಅಂತರ ರಾಜ್ಯ ಸಂಚಾರಕ್ಕೆ ನಿರ್ಬಂಧ ಇಲ್ಲ. ಇದಕ್ಕೆ ಪ್ರತ್ಯೇಕ ಅನುಮತಿ ಅಥವಾ ಇ-ಪರ್ಮಿಟ್ ಅಗತ್ಯವಿಲ್ಲ. ಆದರೆ, ನೆರೆಯ ರಾಜ್ಯಗಳಿಂದ ಬರುವ ಜನರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕಂದಾಯ ಇಲಾಖೆ ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

 

ಏನು ಇರುವುದಿಲ್ಲ

ಜಿಲ್ಲಾಡಳಿತ ಘೋಷಣೆ ಮಾಡಿದ ಕಂಟೇನ್ಮೆಂಟ್ ಝೋನ್‍ಗಳಲ್ಲಿ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳನ್ನು ಹೊರತುಪಡಿಸಿ ಇತರೆ ಚಟುವಟಿಕೆ ನಿಷೇಧಿಸಲಾಗಿದೆ.
ಜಿಲ್ಲೆಯಾದ್ಯಂತ ಐದಕ್ಕೂ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಂತೆ, ಜಾತ್ರೆ, ಸಮಾವೇಶ ಹಾಗೂ ಇತರೆ ಯಾವುದೇ ಸಮಾರಂಭಗಳನ್ನು ಏರ್ಪಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಬಾರ್ ಮತ್ತು ರೆಸ್ಟೋರೆಂಟ್ಸ್, ಲಿಕ್ಕರ್ ಔಟ್‍ಲೆಟ್ಸ್, ಬಟ್ಟೆ ಅಂಗಡಿಗಳು, ಬಂಗಾರದ ಅಂಗಡಿ ಸೇರಿದಂತೆ ಎಲ್ಲ ತರಹದ ಅಂಗಡಿ ಮುಂಗಟ್ಟುಗಳು ತೆರೆಯುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರು ತುರ್ತು ಸೇವೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಬರುವಂತಿಲ್ಲ. ಲಾಕ್‌ಡೌನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ರ ಉಪಬಂಧಗಳು ಅಲ್ಲದೇ ಭಾರತೀಯ ದಂಡ ಸಂಹಿತೆ ಸೆಕ್ಷನ 188ರ ಅಡಿಯಲ್ಲಿನ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಲಿದೆ.

ಮುಖಗವಸು ಧರಿಸದಿದ್ದರೆ ದಂಡ

ಬೀದರ್‌: ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರು ಮುಖಗವಸವನ್ನು ಕಡ್ಡಾಯವಾಗಿ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರಿಗೆಯಲ್ಲಿ ಎಲ್ಲ ವ್ಯಕ್ತಿಗಳು ಅಂತರ ಕಾಯ್ದುಕೊಳ್ಳಬೇಕು.
ವಿವಾಹ ಸಮಾರಂಭಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಖಾತರಿಪಡಿಸಿಕೊಂಡು ಗರಿಷ್ಠ 50 ಅತಿಥಿಗಳಿಗೆ ಮಾತ್ರ ಅವಕಾಶ ನೀಡಬೇಕು. ಶವ ಸಂಸ್ಕಾರ, ಅಂತಿಮ ಯಾತ್ರೆಯ ಸಮಯದಲ್ಲಿ ಅಂತರ ಕಾಯ್ದುಕೊಳ್ಳಬೇಕು.

ಗ್ರಾಹಕರು ಅಂಗಡಿಗಳಿಂದ ಎರಡು ಅಡಿ ದೂರ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂಗಡಿಯಲ್ಲಿ ಐದಕ್ಕೂ ಹೆಚ್ಚು ವ್ಯಕ್ತಿಗಳು ಗುಂಪುಗೂಡಿ ನಿಲ್ಲದಂತೆ ನೋಡಿಕೊಳ್ಳಬೇಕು. ಮಾಸ್ಕ್‌ ಧರಿಸಿದವರಿಗೆ ಮಾತ್ರ ಸಾಮಗ್ರಿಗಳನ್ನು ಕೊಡಬೇಕು ಎಂದು ಸಚಿವ ಪ್ರಭು ಚವಾಣ್ ತಿಳಿಸಿದರು.

 

ಮನೆಯಿಂದಲೇ ಕೆಲಸ ಮಾಡಿ

ಬೀದರ್: ಸಾಧ್ಯವಾದಷ್ಟು ಮಟ್ಟಿಗೆ ಪ್ರತಿಯೊಬ್ಬರು ಮನೆಯಿಂದ ಕೆಲಸ ಮಾಡುವ ಪದ್ಧತಿಯನ್ನು ಅನುಸರಿಸಬೇಕು.
ಕಚೇರಿ, ಕೆಲಸದ ಸ್ಥಳಗಳು, ಅಂಗಡಿ, ಮಾರುಕಟ್ಟೆ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ವ್ಯವಹಾರದ ಸಮಯದಲ್ಲಿ ಪಾಳಿ ಪದ್ಧತಿಯನ್ನು ಅನುಸರಿಸಬೇಕು.
ಎಲ್ಲ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಕೈತೊಳೆಯುವುದಕ್ಕೆ ಸ್ಯಾನಿಟೈಜರ್‌ಗೆ ಅವಕಾಶ ಕಲ್ಪಿಸಬೇಕು. ಕೆಲಸದ ಸಂಪೂರ್ಣ ಆವರಣ ಸಾಮಾನ್ಯ ಸೌಲಭ್ಯಗಳನ್ನು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲ ವಸತಿಗಳ ನೈರ್ಮಲ್ಯೀಕರಣ ಮಾಡಬೇಕು ಎಂದು ಸಚಿವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.