ಚುನಾವಣೆ ರಂಗೇರಿಸಿದ ಬಿಎಸ್‌ಪಿ ಅಭ್ಯರ್ಥಿ

ಭಾನುವಾರ, ಏಪ್ರಿಲ್ 21, 2019
26 °C
ಶಕ್ತಿ ಪ್ರದರ್ಶಿಸಿ ನಾಮಪತ್ರ ಸಲ್ಲಿಸಿದ ಸೈಯದ್ ಶಾನುಲ್ ಹಕ್ ಬುಖಾರಿ

ಚುನಾವಣೆ ರಂಗೇರಿಸಿದ ಬಿಎಸ್‌ಪಿ ಅಭ್ಯರ್ಥಿ

Published:
Updated:
Prajavani

ಬೀದರ್: ಕಾಂಗ್ರೆಸ್, ಬಿಜೆಪಿ ಜಿದ್ದಾಜಿದ್ದಿನ ನಡುವೆ ಬಿಎಸ್‌ಪಿ ಅಭ್ಯರ್ಥಿಯಾಗಿ ಸೈಯದ್ ಶಾನುಲ್ ಹಕ್ ಬುಖಾರಿ ಗುರುವಾರ ನಾಮಪತ್ರ ಸಲ್ಲಿಸುವುದರೊಂದಿಗೆ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಇನ್ನಷ್ಟು ರಂಗೇರಿತು.

ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗಿಂತ ತಾನೂ ಕಡಿಮೆ ಇಲ್ಲ ಎನ್ನುವಂತೆ ಬುಖಾರಿ ಕೂಡ ನಗರದಲ್ಲಿ ಬಲ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಸಿದರು.

ಓಲ್ಡ್‌ ಸಿಟಿಯ ಗವಾನ್ ಚೌಕ್‌ನಿಂದ ಹೂವಿನಿಂದ ಅಲಂಕೃತ ಜೀಪ್‌ನಲ್ಲಿ ಶಹಾಗಂಜ್ ಕಮಾನ್‌, ಕ್ರಾಂತಿ ಗಣೇಶ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯಲ್ಲಿ ತಲೆ ಮೇಲೆ ಬಿಎಸ್‌ಪಿ ಪ್ರಚಾರ ಟೊಪ್ಪಿಗೆ, ಕೊರಳಲ್ಲಿ ಶಲ್ಯ ಹಾಕಿಕೊಂಡಿದ್ದ ಕಾರ್ಯಕರ್ತರು ಕೈಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಕಾನ್ಶಿರಾಮ, ಮಾಯಾವತಿ ಅವರ ಭಾವಚಿತ್ರ ಹಾಗೂ ಪಕ್ಷದ ಚಿನ್ಹೆ ಇದ್ದ ಧ್ವಜಗಳನ್ನು ಹಿಡಿದುಕೊಂಡಿದ್ದರು.

ಕಾನ್ಶಿರಾಮ, ಮಾಯಾವತಿ ಹಾಗೂ ಪಕ್ಷದ ಅಭ್ಯರ್ಥಿ ಪರವಾಗಿ ಘೋಷಣೆ ಕೂಗಿದರು. ಬಾಜಾ ಭಜಂತ್ರಿಯ ತಾಳಕ್ಕೆ ತಕ್ಕಂತೆ ಅನೇಕರು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಪಾಲ್ಗೊಂಡವರಲ್ಲಿ ಯುವಕರು ಅಧಿಕ ಸಂಖ್ಯೆಯಲ್ಲಿ ಇದ್ದರು.

ಅಭ್ಯರ್ಥಿ ಸೈಯದ್ ಶಾನುಲ್ ಹಕ್ ಬುಖಾರಿ, ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಂಕುಶ ಗೋಖಲೆ ಹಾಗೂ ಪಕ್ಷದ ಮುಖಂಡರು ತೆರೆದ ಜೀಪ್‌ನಲ್ಲಿ ಇದ್ದರು.

ಬುಖಾರಿ ಜನರತ್ತ ಕೈಬೀಸಿ, ವಿಜಯದ ಸಂಕೇತವಾಗಿ ಕೈ ಬೆರಳುಗಳನ್ನು ತೋರಿಸಿದರು.

ಇದಕ್ಕೂ ಮೊದಲು ಸೈಯದ್ ಶಾನುಲ್ ಹಕ್ ಬುಖಾರಿ ಮಾತನಾಡಿ, ‘ಕಾಂಗ್ರೆಸ್‌ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್‌ ಹಂಚಿಕೆ ಮಾಡಿಲ್ಲ. ಬಹುಜನ ಸಮಾಜ ಪಾರ್ಟಿ ಮುಸ್ಲಿಮರಿಗೆ ಟಿಕೆಟ್‌ ಕೊಟ್ಟಿದೆ’ ಎಂದು ತಿಳಿಸಿದರು.

ಬಿಎಸ್‌ಪಿ ರಾಜ್ಯ ಉಸ್ತುವಾರಿ ಎಂ.ಎಲ್‌. ತೋಮರ್‌ ಮಾತನಾಡಿ, ‘ಬಿಎಸ್‌ಪಿ ಮುಖ್ಯಸ್ಥೆ ಅಕ್ಕ ಮಾಯಾವತಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಮರಿಗೆ ಅವಕಾಶ ಕೊಟ್ಟಿದೆ’ ಎಂದರು.

‘ಬಡವರಿಗೆ ರೊಟ್ಟಿ, ಬಟ್ಟೆ ಹಾಗೂ ಮನೆ ಒದಗಿಸಿಕೊಡುವುದು ಪಕ್ಷದ ಧ್ಯೇಯವಾಗಿದೆ. ಬಹುಜನರಿಗೆ ಅಧಿಕಾರ ಕೊಡಿಸಿ ಸಮೃದ್ಧ ಸಮಾಜ ನಿರ್ಮಾಣ ಮಾಡುವುದು ಪಕ್ಷದ ಉದ್ದೇಶವಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮುಸ್ಲಿಮರಿಗೆ 5, ಹಿಂದುಳಿದ ವರ್ಗದವರಿಗೆ 4 ಹಾಗೂ ಇನ್ನುಳಿದ ಸ್ಥಾನಗಳನ್ನು ಪರಿಷ್ಠ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

ಮುಖಂಡರಾದ ಗಾಲಿಬ್ ಹಾಷ್ಮಿ, ವಹೀದ್ ಲಖನ್, ಎಂ. ಎನತುಬರ್‌, ಲಕ್ಷ್ಮಣ ಬೋಧಿ, ವಿಠ್ಠಲ್‌ ಡಾಕೂಳಗಿ, ದತ್ತು ಸೂರ್ಯವಂಶಿ, ಪ್ರಕಾಶ ಕೋಟೆ, ತಿಪ್ಪಣ್ಣ ವಾಲಿ, ಹುಲೆಪ್ಪ, ಕಿರಣ ಡಿಗ್ಗಿ, ರಿಯಾಜುದ್ದಿನ್ ಖಾದ್ರಿ, ರಾಜಕುಮಾರ ಮೂಲಭಾರತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮೆರವಣಿಗೆಯ ನಂತರ ಸೈಯದ್ ಶಾನುಲ್ ಹಕ್‌ ಬುಖಾರಿ ಅವರು ಪಕ್ಷದ ಕೆಲ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಡಾ. ಎಚ್.ಆರ್. ಮಹಾದೇವ ಅವರಿಗೆ ನಾಮಪತ್ರ ಸಲ್ಲಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !